KPSC | PDO Recruitment; KPSC important notice for selected candidates!
x

ಕರ್ನಾಟಕ ಲೋಕಸೇವಾ ಆಯೋಗ

KPSC | ಪಿಡಿಒ ನೇಮಕಾತಿ; ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಮಹತ್ವದ ಸೂಚನೆ !

ಕಳೆದ 2024ರ ಡಿಸೆಂಬರ್‌ನಲ್ಲಿ ಕೆಪಿಎಸ್‌ಸಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಪರೀಕ್ಷೆ ನಡೆಸಿತ್ತು. ನಂತರ, ಫೆ. 20, 2026ರಂದು ಈ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿತ್ತು.


Click the Play button to hear this message in audio format

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ತಮ್ಮ ಕಾರ್ಬನ್‌ ರಹಿತ ಓಎಂಆರ್‌ ಪ್ರತಿಯನ್ನು ಕಚೇರಿಗೆ ತಲುಪಿಸುವಂತೆ ಸೂಚಿಸಿದೆ.

ಶುಕ್ರವಾರ (ಏ.17) ರಂದು ನಡೆದ ಆಯೋಗದ ಸಭೆಯ ನಿರ್ಣಯದ ಮೇರೆಗೆ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಬಳಿಯಿರುವ ಆ ಕಾರ್ಬನ್ ರಹಿತ ಓಎಂಆರ್ ಪ್ರತಿಯೊಂದಿಗೆ ಖುದ್ದು ಏ.24 ರಂದು ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲೇ ಸೂಚನೆ ನೀಡಿದ್ದ ಕೆಪಿಎಸ್‌ಸಿ

ಕಳೆದ 2024ರ ಡಿಸೆಂಬರ್‌ನಲ್ಲಿ ಕೆಪಿಎಸ್‌ಸಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಪರೀಕ್ಷೆ ನಡೆಸಿತ್ತು. ನಂತರ, ಫೆ. 20, 2026ರಂದು ಈ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿತ್ತು. ಈ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಪರೀಕ್ಷೆಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದ್ದ 'ಕಾರ್ಬನ್ ರಹಿತ ಓಎಂಆರ್ (OMR) ಉತ್ತರ ಹಾಳೆಯ ಪ್ರತಿಯನ್ನು' ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವವರೆಗೆ ಭದ್ರವಾಗಿಟ್ಟುಕೊಳ್ಳುವಂತೆ ಅಂದೇ ಸೂಚಿಸಲಾಗಿತ್ತು. ತಪ್ಪಿದಲ್ಲಿ ಅಭ್ಯರ್ಥಿತ್ವ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.

ಕೆಪಿಎಸ್‌ಸಿ ಹೊರಡಿಸಿರುವ ಪ್ರಕಟಣೆ

ಅಭ್ಯರ್ಥಿತ್ವ ರದ್ದು

ನಿಗದಿತ ದಿನಾಂಕದಂದು ಅಭ್ಯರ್ಥಿಗಳು ತಮ್ಮ ಮೂಲ ಓಎಂಆರ್ ಪ್ರತಿಯೊಂದಿಗೆ ಹಾಜರಾಗುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ಯಾವುದೇ ಮುನ್ಸೂಚನೆಯಿಲ್ಲದೆ ರದ್ದುಪಡಿಸಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ನಿಗದಿತ ಸಮಯದಲ್ಲಿ ದಾಖಲೆಯೊಂದಿಗೆ ಹಾಜರಾಗುವಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆ ಬರೆದಿದ್ದು 2 ಲಕ್ಷ ಸ್ಪರ್ಧಾರ್ಥಿಗಳು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಕೆಪಿಎಸ್‌ಸಿ 2024ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಒಟ್ಟು 3,86,099. ಸ್ಪರ್ಧಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಗೆ 2,02,702. (ಶೇ. 52.5) ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಜಿ ಸಲ್ಲಿಸಿದವರ ಪೈಕಿ 1,83,397 (ಶೇ. 47.5) ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಕೆಪಿಎಸ್‌ಸಿ ಅಂಕಿ-ಅಂಶಗಳ ಪ್ರಕಾರ 1 ಹುದ್ದೆಗೆ ಪ್ರತಿಶತ 1,352 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

Read More
Next Story