
ಕರ್ನಾಟಕ ಲೋಕಸೇವಾ ಆಯೋಗ
KPSC | ಅಕ್ರಮ ಆರೋಪಗಳ ನಡುವೆ ಕೆಎಎಸ್ ವ್ಯಕ್ತಿತ್ವ ಪರೀಕ್ಷೆಗೆ ದಿನಾಂಕ ನಿಗದಿ
ಅರ್ಹ ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಅವರಿಗೆ ನಿಗದಿಪಡಿಸಿದ ವ್ಯಕ್ತಿತ್ವ ಪರೀಕ್ಷೆಯ ನಿಖರ ದಿನಾಂಕ ಮತ್ತು ಸಮಯದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2023-24ನೇ ಸಾಲಿನ ಗ್ರೂಪ್-ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ (Interview) ಮತ್ತು ಮೂಲ ದಾಖಲೆಗಳ ಪರಿಶೀಲನೆಯ ದಿನಾಂಕಗಳನ್ನು ಆಯೋಗವು ಪ್ರಕಟಿಸಿದೆ.
ಈ ಮೊದಲು ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆಗೆ ದಿನಾಂಕವನ್ನು ಪ್ರಕಟಿಸಿ ಆದೇಶಿಸಿತ್ತು. ಆದರೆ ಈ ಪಟ್ಟಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜಕೀಯ ನಾಯಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದವು. ಹಲವು ವಿರೋಧಗಳು ವ್ಯಕ್ತವಾದ ಹಿನ್ನೆಲೆ ಕೆಪಿಎಸ್‌ಸಿ ಆದೇಶ ಪಟ್ಟಿಯನ್ನು ವಾಪಾಸ್ ಪಡೆದಿತ್ತು.
ಶುಕ್ರವಾರ(ಏ.17) ಸಭೆ ನಡೆಸಿರುವ ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆಗಳನ್ನುಮೇ. 6 ರಿಂದ ಮೇ.10ರವರೆಗೆ ವಿವಿಧ ಹಂತಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ಅಂದೇ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯೂ ನಡೆಯಲಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.
ಅಭ್ಯರ್ಥಿಗಳಿಗೆ ಸೂಚನೆ
ಅರ್ಹ ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಅವರಿಗೆ ನಿಗದಿಪಡಿಸಿದ ವ್ಯಕ್ತಿತ್ವ ಪರೀಕ್ಷೆಯ ನಿಖರ ದಿನಾಂಕ ಮತ್ತು ಸಮಯದ ವಿವರಗಳನ್ನು ಶೀಘ್ರದಲ್ಲೇ ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಲ್ಲದೆ, ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಶೀಘ್ರವಾಗಿ ರವಾನಿಸಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಪಿಎಸ್‌ಸಿ ಹೊರಡಿಸಿರುವ ಪ್ರಕಟಣೆ
ಏನಿದು ಆರೋಪ?
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಫೆ. 26ರಂದು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಿಯಾಗಿ ಅನುವಾದವಾಗಿಲ್ಲ ಎಂದು ಎರಡು ಬಾರಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿತ್ತು. 2025ರ ಮೇ 3ರಿಂದ 9ರವರೆಗೂ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಮಾ. 3ರಂದು ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿತ್ತು, ಈ ಪಟ್ಟಿಯ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸ್ಪರ್ಧಾರ್ಥಿಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ವ್ಯಕ್ತಿತ್ವ ಪರೀಕ್ಷೆ ಹಿಂಪಡೆದಿದ್ದ ಕೆಪಿಎಸ್‌ಸಿ
ಈ ಮೊದಲು ಕೆಪಿಎಸ್‌ಸಿ ಮಾರ್ಚ್ 23 ರಿಂದ ಮೇ 4ರವರೆಗೆ ವ್ಯಕ್ತಿತ್ವ ಪರೀಕ್ಷೆ ಹಾಗೂ ಮೂಲ ದಾಖಲೆಗಳ ಪರಿಶೀಲನೆ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಆದರೆ ದಿಢೀರನೇ ಆಡಳಿತಾತ್ಮಕ ಕಾರಣ ನೀಡಿ ವ್ಯಕ್ತಿತ್ವ ಪರೀಕ್ಷೆ ಹಿಂಪಡೆದಿರುವ ಆಯೋಗದ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ವರದಿ ಕೇಳಿದ್ದ ಸಿಎಸ್
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಕುರಿತು ಕೇಳಿಬಂದ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೆಪಿಎಸ್ ಸಿ ಕಾರ್ಯದರ್ಶಿ ಅವರನ್ನು ವರದಿ ಕೇಳಿದ ಬೆನ್ನಲ್ಲೇ ಕೆಪಿಎಸ್ ಸಿ (ಕರ್ನಾಟಕ ಲೋಕಸೇವಾ ಆಯೋಗ) ಆಂತರಿಕ ತನಿಖೆ ಆರಂಭಿಸಿ, ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳ ಮರುಪರಿಶೀಲನೆ ನಡೆಸಿತ್ತು. ಈ ವೇಳೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿತ್ತು.

