
ಸಾಂದರ್ಭಿಕ ಚಿತ್ರ
KEA ಮೆಗಾ ನೇಮಕಾತಿ ಅಧಿಸೂಚನೆ ಪ್ರಕಟ: ಶಿಕ್ಷಕರು, ಪೊಲೀಸ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಭೂಮಾಪಕರು ಹುದ್ದೆಗೆ ಎಂಜಿನಿಯರಿಂಗ್, ತಂತ್ರಜ್ಞಾನ ಪದವಿ, ಡಿಪ್ಲೊಮಾ ಅಥವಾ ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಬಿಎಸ್‌ಸಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಕಂದಾಯ ಇಲಾಖೆಯ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಗ್ರೂಪ್-ಸಿ ವೃಂದದ ಗ್ರಾಮ ಆಡಳಿತ ಅಧಿಕಾರಿ, ಭೂಮಾಪಕರು, ವಸತಿ ಶಾಲೆ ಶಿಕ್ಷಕರು ಹಾಗೂ ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ 572 ಹುದ್ದೆ, ಭೂಮಾಪಕರು 750 ಹುದ್ದೆಗಳು, ವಸತಿ ಶಾಲಾ ಶಿಕ್ಷಕರು 1,087 ಹುದ್ದೆಗಳು ಹಾಗೂ ಕೆಎಸ್‌ಐಎಸ್‌ಎಫ್ 2,314 ಹುದ್ದೆಗಳು ಸೇರಿದಂತೆ ಒಟ್ಟು 4,723 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆ. 7 ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಹತೆ
ಭೂಮಾಪಕರು ಹುದ್ದೆಗೆ ಎಂಜಿನಿಯರಿಂಗ್, ತಂತ್ರಜ್ಞಾನ ಪದವಿ, ಡಿಪ್ಲೊಮಾ ಅಥವಾ ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಬಿಎಸ್‌ಸಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ವಸತಿ ಶಾಲೆ ಶಿಕ್ಷಕರ ಹುದ್ದಗೆ ಸಂಬಂಧಿತ ಹುದ್ದೆಗಳ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಬಿ.ಎಡ್ ಪದವಿ ಪೂರ್ಣಗೊಳಿಸಿರಬೇಕು. ಗ್ರಾಮ ಆಡಳಿತ ಅಧಿಕಾರಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮತ್ತು ವೇತನ ಶ್ರೇಣಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ 45 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದ್ದು, ಸರ್ಕಾರದ ಆದೇಶದಂತೆ ಒಂದು ಬಾರಿಯ ಅನ್ವಯದಂತೆ 5 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ವೇತನ 37,500 ರೂ. ನಿಗದಿಪಡಿಸಲಾಗಿದ್ದು, 2024ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿ ಅನ್ವಯವಾಗಲಿದೆ.
ಪರೀಕ್ಷಾ ವಿಧಾನ
ಅರ್ಹ ಅಭ್ಯರ್ಥಿಗಳಿಗೆ ಆಫ್‌ಲೈನ್-ಒಎಂಆರ್ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಭೂಮಾಪಕರ ಹುದ್ದೆಗೆ ಅ.3 ಮತ್ತು 4, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅ.4ರಂದು ಪರೀಕ್ಷೆಗಳು ಜರುಗಲಿವೆ. ಇದರೊಂದಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯೂ ಇರಲಿದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸೆ.20 ರಂದು ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

