
ಅಂಚೆ ಕಚೇರಿ (ಸಾಂದರ್ಭಿಕ ಚಿತ್ರ)
ಅಂಚೆ ಇಲಾಖೆಯಲ್ಲಿ 28,000 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ಆಯ್ಕೆ, ಕನ್ನಡಿಗರಿಗೂ ಆದ್ಯತೆ
ಸಂವಹನ ಸಚಿವಾಲಯದಡಿ ಕೆಲಸ ನಿರ್ವಹಿಸುತ್ತಿರುವ ಅಂಚೆ ಇಲಾಖೆಯು ಜಿಡಿಎಸ್ ನೇಮಕಾತಿ 2026 ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಒಟ್ಟು ಹುದ್ದೆಗಳು, ಅರ್ಜಿ ಸಲ್ಲಿಸುವ ವಿವರವನ್ನು ಈ ವರದಿಯಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವ ಯುವಕರಿಗೆ ಅಂಚೆ ಇಲಾಖೆಯು 28,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಫೆ.16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಸಂವಹನ ಸಚಿವಾಲಯದಡಿ ಕೆಲಸ ನಿರ್ವಹಿಸುತ್ತಿರುವ ಅಂಚೆ ಇಲಾಖೆಯು ಭಾರತೀಯ ಅಂಚೆ ಜಿಡಿಎಸ್ ನೇಮಕಾತಿ 2026 ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಶಾಖೆ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಅಂಚೆ ಇಲಾಖೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ವಿವಿಧ ಹುದ್ದೆಗಳ ಜವಬ್ದಾರಿಗಳು
ಶಾಖೆ ಪೋಸ್ಟ್‌ಮಾಸ್ಟರ್
ದಿನ ನಿತ್ಯದ ಅಂಚೆ ಕಾರ್ಯಾಚರಣೆಗಳು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗಳನ್ನು ನಿರ್ವಹಿಸುವುದು, ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವುದು, ಅಂಚೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ದಾಖಲೆಗಳನ್ನು ನಿರ್ವಹಿಸುವುದು. ಕಚೇರಿ ಮೇಲ್ವಿಚಾರಣೆ ಮಾಡುವುದು. ಪತ್ರಗಳ ವಿತರಣೆ ಸೇರಿದಂತೆ ಎಲ್ಲವನ್ನೂ ನಿರ್ವಹಿಸಬೇಕು ಹಾಗೂ ಶಾಖೆ ಇರುವ ಪೋಸ್ಟ್ ವಿಲೇಜ್‌ನಲ್ಲಿ ವಾಸಿಸಬೇಕು.
ಸಹಾಯಕ ಶಾಖೆ ಪೋಸ್ಟ್‌ಮಾಸ್ಟರ್
ಅಂಚೆ ಚೀಟಿಗಳು, ಸ್ಟೇಷನರಿಗಳ ಮಾರಾಟ, ಸಾಗಣೆ ಮತ್ತು ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಠೇವಣಿಗಳು ಹಾಗೂ ಪಾವತಿಗಳಲ್ಲಿ ಸಹಾಯ ಮಾಡುವುದು. ಶಾಖೆ ಪೋಸ್ಟ್ ಮಾಸ್ಟರ್ ಅನುಪಸ್ಥಿತಿಯಲ್ಲಿ ಅವರ ಕರ್ತವ್ಯಗಳನ್ನು ನಿರ್ವಹಿಸಬೇಕು.
ಡಾಕ್ ಸೇವಕ್
ಮುಖ್ಯ ಅಂಚೆ ಕಚೇರಿಗಳು, ಉಪ ಅಂಚೆ ಕಚೇರಿಗಳು ಅಥವಾ ರೈಲ್ವೆ ಮೇಲ್ ಸೇವೆಗಳಂತಹ ಇಲಾಖಾ ಕಚೇರಿಗಳಲ್ಲಿ ಕೆಲಸ ನಿರ್ವಹಣೆ, ಅಂಚೆ ಚೀಟಿಗಳ ಮಾರಾಟ, ಅಂಚೆ ವಿತರಣೆ ಮತ್ತು ಬ್ಯಾಗ್‌ಗಳನ್ನು ನಿರ್ವಹಿಸುವುದು. ಪತ್ರಗಳ ವಿಂಗಡಣೆ ಮತ್ತು ಪೋಸ್ಟ್ ಮಾಸ್ಟರ್, ಶಾಖಾ ಪೋಸ್ಟ್ ಮಾಸ್ಟರ್‌ಗೆ ಸಹಾಯ ಮಾಡುವುದು. ಅಂಚೆ ಕಚೇರಿಯ ವಿತರಣಾ ವ್ಯಾಪ್ತಿಯಲ್ಲಿ ವಾಸಿಸಬೇಕು.
ಶೈಕ್ಷಣಿಕ ಅರ್ಹತೆ
ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಪ್ರಮಾಣಪತ್ರ ಪಡೆದಿರಬೇಕು. ನೀವು ಅರ್ಜಿ ಸಲ್ಲಿಸಿದ ವೃತ್ತದ ಸ್ಥಳೀಯ ಭಾಷೆಯನ್ನು ಕನಿಷ್ಠ 10ನೇ ತರಗತಿಯವರೆಗೆ ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು. ಉದಾಹರಣೆಗೆ, ಮಹಾರಾಷ್ಟ್ರ ವೃತ್ತಕ್ಕೆ ಅರ್ಜಿ ಸಲ್ಲಿಸಲು, ನೀವು ಮರಾಠಿ ಅಥವಾ ಕೊಂಕಣಿಯನ್ನು ಅಧ್ಯಯನ ಮಾಡಿರಬೇಕು, ಕರ್ನಾಟಕ ವೃತ್ತಕ್ಕೆ ಅರ್ಜಿ ಸಲ್ಲಿಸಲು ಕನ್ನಡ ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು. ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಬಳಸವ ಜ್ಞಾನ ಹೊಂದಿರಬೇಕು. ಎಲ್ಲಾ ಜಿಡಿಎಸ್ ಹುದ್ದೆಗಳಿಗೆ ಸೈಕ್ಲಿಂಗ್ ಅಥವಾ ಬೈಕ್ ಪರವಾನಗಿ ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸಲು ಬಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 45 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 43 ವರ್ಷಗಳು, ಸಾಮನ್ಯ ವರ್ಗದ ವಿಕಲಚೇನ ಅಭ್ಯರ್ಥಿಗಳಿಗೆ 50 ವರ್ಷ, ಹಿಂದುಳಿದ ವರ್ಗದ ವಿಕಲಚೇತನ ಅಭ್ಯರ್ಥಿಗಳಿಗೆ 53 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಕಲಚೇತನ ಅಭ್ಯರ್ಥಿಗಳಿಗೆ 55 ವರ್ಷಗಳವರೆಗೆ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಸಂಬಳ ಹಾಗೂ ಭತ್ಯೆ
ಅರ್ಜಿ ಸಲ್ಲಿಸಿ ಆಯ್ಕೆಯಾದ ಶಾಖಾ ಪೋಸ್ಟ್ ಮಾಸ್ಟರ್ ಹುದ್ದೆಗೆ 12,000 ರೂ. ರಿಂದ 29,380 ರೂ. ಸಹಾಯಕ ಪೋಸ್ಟ್ ಮಾಸ್ಟರ್ ಹಾಗೂ ಡಾಕ್ ಸೇವಕ್ ಹುದ್ದೆಗಳಿಗೆ 10,000 ರೂ. ರಿಂದ 24,470 ಸಂಬಳ ನಿಗದಿಪಡಿಸಲಾಗಿದ್ದು, ಹಲವು ಭತ್ಯೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆ ಇಲ್ಲ, ನೇರ ನೇಮಕಾತಿ
10ನೇ ತರಗತಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗಾಗಿ ಕರೆಯಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
ಹಂತ 1: ಒಂದು ಬಾರಿ ನೋಂದಣಿ
ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ. “ನೋಂದಣಿ” ಕ್ಲಿಕ್ ಮಾಡಿ. ನಿಮ್ಮ ಮೂಲ ವಿವರಗಳಾದ ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಮೊಬೈಲ್ ಹಾಗೂ ಇಮೇಲ್ ನಮೂದಿಸಿದರೆ ಅಭ್ಯರ್ಥಿಗಳಿಗೆ ಒಂದು ನೋಂದಣಿ ಸಂಖ್ಯೆ ಲಭ್ಯವಾಗುತ್ತದೆ.
ಹಂತ 2: ಅರ್ಜಿ ಸಲ್ಲಿಸಿ
* ನಿಮ್ಮ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ.
* ನೀವು ಅರ್ಜಿ ಸಲ್ಲಿಸಿದ ವಲಯವನ್ನು ಆಯ್ಕೆಮಾಡಿ.
* ನಿಮ್ಮ ವಿಳಾಸ ಮತ್ತು 10 ನೇ ತರಗತಿಯ ಅಂಕಗಳನ್ನು ವಿಷಯವಾರು ನಮೂದಿಸಬೇಕು.
* ಅಂಕಗಳನ್ನು ನಮೂದಿಸುವಲ್ಲಿ ಅತ್ಯಂತ ಜಾಗರೂಕರಾಗಿರಿ.
* ವಿಭಾಗವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪೋಸ್ಟ್ ಆದ್ಯತೆಗಳನ್ನು ಬಳಸಿ.
* ನೀವು ಬಹು ಪೋಸ್ಟ್‌ಗಳನ್ನು ಆಯ್ಕೆ ಮಾಡಬಹುದು.
* ಇತ್ತೀಚಿನ ಭಾವಚಿತ್ರ ಜೆಪಿಜೆ (30-100 KB) ಹಾಗೂ ಸಹಿ ಜೆಪಿಜೆ (20-100 KB) ಅಪ್‌ಲೋಡ್ ಮಾಡಿ, 100 ರೂ. ಶುಲ್ಕವನ್ನು ಪಾವತಿಸಬೇಕು. ನಂತರ ಅಂತಿಮ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಬೇಕು.
ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳು
ಶಾರ್ಟ್ ಲಿಸ್ಟ್‌ಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ಮತ್ತು ಎರಡು ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಒದಗಿಸಬೇಕು.
* 10ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
* ಜಾತಿ ಪ್ರಮಾಣಪತ್ರ
* ವಿಕಲಚೇತನ ಪ್ರಮಾಣಪತ್ರ
* ಟ್ರಾನ್ಸ್‌ಜೆಂಡರ್ ಪ್ರಮಾಣಪತ್ರ (ಅನ್ವಯಿಸಿದರೆ).
* ಜನ್ಮ ದಿನಾಂಕ ಪುರಾವೆ.
* ಸರ್ಕಾರಿ ವೈದ್ಯರಿಂದ ದೃಢೀಕರಿಸಿದ ವೈದ್ಯಕೀಯ ಪ್ರಮಾಣಪತ್ರ.
ಈ ಮೇಲಿನ ದಾಖಲೆಗಳನ್ನು ಒದಗಿಸಬೇಕು ಎಂದು ಅಂಚೆ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.

