
ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶ
ನೂತನ ರೋಸ್ಟರ್ ಬಿಂದು ಅಳವಡಿಕೆ; ಪೊಲೀಸ್ ಇಲಾಖೆಯಿಂದ ಶೀಘ್ರವೇ ಅಧಿಸೂಚನೆ
ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರ ಹೊರಡಿಸಿರುವ 400 ಬಿಂದುಗಳ ರೋಸ್ಟರ್ ಮತ್ತು ಒಳಮೀಸಲಾತಿಗಾಗಿ 60 ಬಿಂದುಗಳ ರೋಸ್ಟರ್ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸರ್ಕಾರದ ಇತ್ತೀಚಿನ ಆದೇಶದನ್ವಯ ಪರಿಷ್ಕೃತ ರೋಸ್ಟರ್ ಮತ್ತು ಒಳಮೀಸಲಾತಿ ಅನ್ವಯಿಸಿ ವರ್ಗೀಕರಣ ವಿವರ ಸಲ್ಲಿಸಲು ಡಿಜಿ ಮತ್ತು ಐಜಿಪಿ ಕಚೇರಿಯು ಸೂಚನೆ ನೀಡಿದ್ದು, ಶೀಘ್ರವೇ ಪೊಲೀಸ್ ಇಲಾಖೆ 8,226 ಹುದ್ದೆಗಳಿಗೆ ಬೃಹತ್ ಅಧಿಸೂಚನೆ ಹೊರಡಿಸಲಿದೆ.
ಪರಿಶಿಷ್ಟ ಜಾತಿಯ ಒಟ್ಟಾರೆ ಶೇ. 15 ಮೀಸಲಾತಿಯಲ್ಲಿ ಸರ್ಕಾರವು ಹೊಸದಾಗಿ ನಿಗದಿಪಡಿಸಿರುವ ಪ್ರವರ್ಗ-ಎ (ಶೇ. 5.25), ಪ್ರವರ್ಗ-ಬಿ (ಶೇ. 5.25) ಮತ್ತು ಪ್ರವರ್ಗ-ಸಿ (ಶೇ.4.5) ಒಳಮೀಸಲಾತಿಯನ್ನು ಪ್ರಸ್ತುತ ನೇಮಕಾತಿಗಳಲ್ಲಿ ಅಳವಡಿಸಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರ ಹೊರಡಿಸಿರುವ 400 ಬಿಂದುಗಳ ರೋಸ್ಟರ್ ಮತ್ತು ಒಳಮೀಸಲಾತಿಗಾಗಿ 60 ಬಿಂದುಗಳ ರೋಸ್ಟರ್ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಈಗಾಗಲೇ ವಿವಿಧ ಘಟಕಗಳಿಂದ ಕಳುಹಿಸಲಾಗಿದ್ದ ಹುದ್ದೆಗಳ ವರ್ಗೀಕರಣ ವಿವರಗಳನ್ನು ಹೊಸ ನಿಯಮಗಳನ್ವಯ ಮರು ಪರಿಶೀಲಿಸಿ, ತಿದ್ದುಪಡಿ ಮಾಡಿದ ವರದಿಯನ್ನು ಸಲ್ಲಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಯಾವ ವಿಭಾಗಕ್ಕೆ ಎಷ್ಟು ಹುದ್ದೆಗಳು ?
ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಸಬ್‌ಇನ್ಸ್‌ಪೆಕ್ಟ್ ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 5 ಹುದ್ದೆಗಳು ಹಾಗೂ ಉಳಿಕೆ ಮೂಲವೃಂದಕ್ಕೆ 15 ಹುದ್ದೆಗಳು, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ವಿಭಾಗದಲ್ಲಿ ಒಟ್ಟು 1,650 ಹುದ್ದೆಗಳಿದ್ದು, ಕಲ್ಯಾಣ ಕರ್ನಾಟಕಕ್ಕೆ 275 ಹುದ್ದೆಗಳು ಹಾಗೂ ಉಳಿಕೆ ಮೂಲವೃಂದಕ್ಕೆ 1,375 ಹುದ್ದೆಗಳು, ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿದ್ದು ಒಟ್ಟು 4,110 ಹುದ್ದೆಗಳಿದ್ದು, ಕಲ್ಯಾಣ ಕರ್ನಾಟಕಕ್ಕೆ 610 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದಕ್ಕೆ 3,500 ಹುದ್ದೆಗಳಿವೆ. ಕೆಎಸ್‌ಆರ್‌ಪಿ ವೃಂದದಲ್ಲಿ ಒಟ್ಟು 2,032 ಹುದ್ದೆಗಳಿದ್ದು, ಕಲ್ಯಾಣ ಕರ್ನಾಟಕಕ್ಕೆ 532 ಹಾಗೂ ಉಳಿಕೆ ಮೂಲವೃಂದಕ್ಕೆ 1,500 ಹುದ್ದೆಗಳಿವೆ. ಕೆಎಸ್‌ಐಎಸ್‌ಎಫ್ ವಿಭಾಗದಲ್ಲಿ ಕಲ್ಯಾಣ ಕರ್ನಾಟಕಕ್ಕೆ 364 ಹುದ್ದೆಗಳನ್ನು ನಿಗದಿಪಡಿಸಿ ಆದೇಶಿಸಲಾಗಿದೆ.
ಎಲ್ಲಾ ವಿಭಾಗೀಯ ಮುಖ್ಯಸ್ಥರು ತಮ್ಮ ಘಟಕಗಳಿಗೆ ಹಂಚಿಕೆಯಾಗಿರುವ ಹುದ್ದೆಗಳಿಗೆ ಸಂಬಂಧಿಸಿದ ಪರಿಷ್ಕೃತ ವರ್ಗೀಕರಣ ವಿವರಗಳನ್ನು ಶೀಘ್ರವೇ ನೇಮಕಾತಿ ವಿಭಾಗಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಕ್ರಮದಿಂದಾಗಿ ಪೊಲೀಸ್ ನೇಮಕಾತಿಯಲ್ಲಿ ಸರ್ಕಾರದ ಹೊಸ ಮೀಸಲಾತಿ ನೀತಿಯು ಅಧಿಕೃತವಾಗಿ ಜಾರಿಗೆ ಬಂದಂತಾಗಿದೆ.

