
ಸಾಂದರ್ಭಿಕ ಚಿತ್ರ
KEA Exam | ರಾಜ್ಯ ಸರ್ಕಾರದ ನೇಮಕಾತಿಯ ಹಲವು ಪರೀಕ್ಷೆಗಳು ರದ್ದು!
ಕೃಷಿ ಇಲಾಖೆ ಹಾಗೂ ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹಲವು ಹುದ್ದೆಗಳಿಗೆ ಮೇ 9 ಮತ್ತು 10 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ, ಈಗಾಗಲೇ ನಿಗದಿಯಾಗಿದ್ದ ಹಲವು ಪ್ರಮುಖ ನೇಮಕಾತಿ ಪರೀಕ್ಷೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಅಲ್ಲದೆ, ಹಳೆಯ ಅಧಿಸೂಚನೆಗಳನ್ನು ಹಿಂಪಡೆದು ಪರಿಷ್ಕೃತ ಅಧಿಸೂಚನೆ ಹೊರಡಿಸಲು ಆದೇಶಿಸಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ಪರೀಕ್ಷೆಗಳನ್ನು ರದ್ದುಗೊಳಿಸಿದೆ.
ಒಳಮೀಸಲಾತಿಯನ್ನು ಅಳವಡಿಸಿಕೊಳ್ಳದೆ ಹೊರಡಿಸಲಾಗಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣವೇ ಹಿಂಪಡೆಯಲು ಏ. 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಯಾವ ಹುದ್ದೆಗಳಿಗೆ ಇನ್ನೂ ಪರೀಕ್ಷೆ ನಡೆದಿಲ್ಲವೋ ಅಂತಹ ಎಲ್ಲಾ ಅಧಿಸೂಚನೆಗಳಿಗೆ ಒಳಮೀಸಲಾತಿ ಅನ್ವಯಿಸಿ ಹೊಸದಾಗಿ ಹೊರಡಿಸುವುದು ಕಡ್ಡಾಯ ಎಂದು ತಿಳಿಸಿತ್ತು.
ಯಾವೆಲ್ಲಾ ಪರೀಕ್ಷೆಗಳು ರದ್ದು?
ಕೃಷಿ ಇಲಾಖೆ ಹಾಗೂ ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹಲವು ಹುದ್ದೆಗಳಿಗೆ ಮೇ 9 ಮತ್ತು 10 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಜೂನಿಯರ್ ಪ್ರೋಗ್ರಾಮರ್, ಸಹಾಯಕ ಎಂಜಿನಿಯರ್, ಸಹಾಯಕ ಎಂಜಿನಿಯರ್ (ಸಿವಿಲ್ ಮತ್ತು ಮೆಕ್ಯಾನಿಕಲ್), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ವ್ಯವಸ್ಥಾಪಕ ಹುದ್ದೆಗೆ ಪರೀಕ್ಷೆ
ಏ. 26 ಮತ್ತು 27ರಂದು ಈಗಾಗಲೇ ಪತ್ರಿಕೆ-2 ಪರೀಕ್ಷೆ ಬರೆದಿರುವ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಮತ್ತು ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗಳ ಅಭ್ಯರ್ಥಿಗಳಿಗೆ ಮಾತ್ರ ಪತ್ರಿಕೆ-1 (ಸಾಮಾನ್ಯ ಜ್ಞಾನ) ಪರೀಕ್ಷೆಯನ್ನು ನಡೆಸಲಾಗುವುದು. ಈ ಅಭ್ಯರ್ಥಿಗಳಿಗೆ ಮೇ 9 ಮತ್ತು 10ರಂದು ಪರೀಕ್ಷೆ ನಡೆಯಲಿದ್ದು, ಪರಿಷ್ಕೃತ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಕೆಇಎ ಸೂಚಿಸಿದೆ.
ಶೀಘ್ರವೇ ಅಧಿಸೂಚನೆ ಪ್ರಕಟ
ಈಗ ರದ್ದಾಗಿರುವ ಹುದ್ದೆಗಳಿಗೆ ಒಳಮೀಸಲಾತಿಯನ್ನು ಸೇರ್ಪಡೆಗೊಳಿಸಿ, ರೋಸ್ಟರ್ ಬಿಂದುಗಳ ಆಧಾರದ ಮೇಲೆ ಪರಿಷ್ಕೃತ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು. ಅಲ್ಲಿಯವರೆಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿನ ಮಾಹಿತಿಯನ್ನು ಗಮನಿಸುತ್ತಿರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

