
ಸಾಂದರ್ಭಿಕ ಚಿತ್ರ (ಎಐ ಆಧಾರಿತ)
Job News | ಕರಾವಳಿ ಭದ್ರತಾ ಪೊಲೀಸ್, ಸೈಬರ್ ವಿಭಾಗದಲ್ಲಿ ನೇಮಕ ಆರಂಭ; ಇಂದೇ ಅರ್ಜಿ ಸಲ್ಲಿಸಿ!
ಸೈಬರ್ ಭದ್ರತೆ ಮತ್ತು ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳಿಗೆ 25 ರಿಂದ 35 ವರ್ಷ.ದೋಣಿ ಕ್ಯಾಪ್ಟನ್ ಹುದ್ದೆಗೆ ಗರಿಷ್ಠ 58 ವರ್ಷ ನಿಗದಿಪಡಿಸಲಾಗಿದ್ದು, ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಭಾರತ ಗೃಹ ಸಚಿವಾಲಯದ ಕೋಸ್ಟಲ್ ಸೆಕ್ಯುರಿಟಿ ಯೋಜನೆಯ ಹಂತ-1 ರ ಅಡಿಯಲ್ಲಿ, ಕರ್ನಾಟಕ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಠಾಣೆಗಳು ಹಾಗೂ ಸೈಬರ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 41 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂ. 6 ರೊಳಗೆ ಆಫ್‌ಲೈನ್ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ, ಮಾಸಿಕ ವೇತನ
ಇಲಾಖೆಯು ವಿವಿಧ ದರ್ಜೆಯ ತಾಂತ್ರಿಕ ಮತ್ತು ಕರಾವಳಿ ಭದ್ರತಾ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಪಿಎಸ್‌ಐ ದರ್ಜೆಯ ದೋಣಿ ಕ್ಯಾಪ್ಟನ್‌ಗೆ ಆರಂಭಿಕ ವೇತನ 39,100 ರೂ. ಎಎಸ್‌ಐ ದರ್ಜೆಯ ಸಹಾಯಕ ದೋಣಿ ಕ್ಯಾಪ್ಟನ್‌ಗೆ 31,050 ರೂ. ಮೋಟಾರ್ ಲಾಂಚ್ ಮೆಕ್ಯಾನಿಕ್ 31,050 ರೂ. ಹೆಡ್ ಕಾನ್ಸ್‌ಟೇಬಲ್ ದರ್ಜೆಯ ಎಂಜಿನ್ ಚಾಲಕನಿಗೆ 28,750 ರೂ. ಪೊಲೀಸ್ ಕಾನ್ಸ್‌ಟೇಬಲ್ ದರ್ಜೆಯ ಖಲಾಸಿ ಹುದ್ದೆಗೆ 26,450 ರೂ. ಸೈಬರ್ ಭದ್ರತಾ ವಿಶ್ಲೇಷಕ ಹುದ್ದೆಗೆ 75 ಸಾವಿರ ರೂ. ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗೆ 50 ಸಾವಿರ ರೂ. ಆರಂಭಿಕ ವೇತನ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಸೈಬರ್ ಭದ್ರತೆ ಮತ್ತು ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳಿಗೆ 25 ರಿಂದ 35 ವರ್ಷ. ದೋಣಿ ಕ್ಯಾಪ್ಟನ್ ಹುದ್ದೆಗೆ ಗರಿಷ್ಠ 58 ವರ್ಷ ನಿಗದಿಪಡಿಸಲಾಗಿದ್ದು, ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಐಟಿಐ, ಬಿಸಿಎ , ಬಿಇ ಅಥವಾ ಬಿ.ಟೆಕ್, ಎಂಸಿಎ ಅಥವಾ ಎಂ.ಎಸ್ಸಿ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಸ್ವಯಂ ದೃಢೀಕೃತ ನಕಲು ಪ್ರತಿಗಳನ್ನು ಸೂಕ್ತ ವಿಳಾಸಕ್ಕೆ ಕಳುಹಿಸಬೇಕು. ಎಂಜಿನ್ ಡ್ರೈವರ್ ಮತ್ತು ಕರಾವಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು, ಪೊಲೀಸ್ ಅಧೀಕ್ಷಕರು, ಕರಾವಳಿ ಭದ್ರತಾ ಪೊಲೀಸ್, ಉಡುಪಿ ಮತ್ತು ತಾಂತ್ರಿಕ ಹುದ್ದೆಗಳಿಗೆ ವಿಶೇಷ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ, ಮಲ್ಪೆ, ಉಡುಪಿ ವಿಳಾಸಕ್ಕೆ ಕಳಿಸಬೇಕು. ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳಿಗೆ ಇನ್‌ಫೆಂಟ್ರಿ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು - 560001. ಈ ಹುದ್ದೆಗಳಿಗೆ [email protected] ಇಮೇಲ್ ಐಡಿ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

