Golden opportunity in the Indian Navy for diploma graduates: Last day to apply is June 29!
x

ಎಐ ಆಧಾರಿತ ಚಿತ್ರ

ಡಿಪ್ಲೊಮಾ ಪದವೀಧರರಿಗೆ ಭಾರತೀಯ ನೌಕಾಪಡೆಯಲ್ಲಿ ಸುವರ್ಣಾವಕಾಶ: ಅರ್ಜಿ ಸಲ್ಲಿಸಲು ಜೂ. 29 ಕೊನೆ ದಿನ!

ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ AICTE ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.


Click the Play button to hear this message in audio format

ಭಾರತೀಯ ನೌಕಾಪಡೆಯಲ್ಲಿ ದೇಶಸೇವೆ ಮಾಡುವ ಜೊತೆಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಡಿಪ್ಲೊಮಾ ಪದವೀಧರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ (ಅಪ್ರೆಂಟಿಸ್) ಪ್ರವೇಶಕ್ಕಾಗಿ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂ. 29 ಕೊನೆಯ ದಿನವಾಗಿದೆ.

ಶೈಕ್ಷಣಿಕ ಅರ್ಹತೆ

ಭಾರತೀಯ ನೌಕಾಪಡೆ ಅಗ್ನಿವೀರ್ (ಅಪ್ರೆಂಟಿಸ್) ಗೆ ಅಧಿಸೂಚನೆ ಹೊರಡಿಸಿದ್ದು, ಒಡಿಶಾದಲ್ಲಿನ ಐಎನ್‌ಎಸ್ ಚಿಲ್ಕಾದಲ್ಲಿ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಹುದ್ದೆಗಳಿಗೆ ಕೇವಲ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ AICTE ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಎಂಜಿನಿಯರಿಂಗ್ ಶಾಖೆಯಲ್ಲಿ ಮೆರೈನ್, ಮೆಕ್ಯಾನಿಕಲ್, ಆಟೋಮೊಬೈಲ್, ಪ್ರೊಡಕ್ಷನ್, ಮೆಕಾಟ್ರಾನಿಕ್ಸ್, ಮೆಟಲರ್ಜಿ, ಕನ್ಸ್ಟ್ರಕ್ಷನ್ ಸೇರಿದಂತೆ ಸಂಬಂಧಿತ ಸ್ಟ್ರೀಮ್‌ಗಳು ಹಾಗೂ ಎಲೆಕ್ಟ್ರಿಕಲ್ ಶಾಖೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಇನ್ಸ್ಟ್ರುಮೆಂಟೇಶನ್ ಸೇರಿದಂತೆ ಸಂಬಂಧಿತ ಸ್ಟ್ರೀಮ್‌ಗಳಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಮೊದಲ ಬ್ಯಾಚ್‌ಗೆ ಅರ್ಜಿ ಸಲ್ಲಿಸುವವರು 2004 ಡಿ. 1ರಿಂದ 2008 ಮೇ 31ರ ನಡುವೆ ಜನಿಸಿರಬೇಕು. ಎರಡನೇ ಬ್ಯಾಚ್‌ಗೆ ಅರ್ಜಿ ಸಲ್ಲಿಸುವವರು 2005 ಮೇ 1ರಿಂದ 2008 ಅ. 31ರ ಒಳಗೆ ಜನಿಸಿರಬೇಕು. ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಕರ್ಷಕ ಸಂಬಳ ಮತ್ತು 'ಸೇವಾ ನಿಧಿ' ಪ್ಯಾಕೇಜ್

ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಅಗ್ನಿವೀರರಿಗೆ ಅತ್ಯುತ್ತಮ ಮಾಸಿಕ ಪ್ಯಾಕೇಜ್ ಸಿಗಲಿದ್ದು, ಪ್ರತಿ ವರ್ಷ ಸಂಬಳ ಹೆಚ್ಚಾಗುತ್ತಾ ಹೋಗುತ್ತದೆ. ಒಟ್ಟು ವೇತನದ ಶೇ. 70 ಹಣ ಕೈಗೆ ಸಿಕ್ಕರೆ, ಇನ್ನುಳಿದ ಶೇ. 30 ಹಣ ಅಗ್ನಿವೀರ್ ಕಾರ್ಪಸ್ ನಿಧಿಗೆ ಜಮೆಯಾಗುತ್ತದೆ. ಮೊದಲ ವರ್ಷ 30 ಸಾವಿರ ರೂ. ಕೈಗೆ ಸಿಗುವ ಹಣ 21 ಸಾವಿರ, ಎರಡನೇ ವರ್ಷ 33 ಸಾವಿರ, ಕೈಗೆ ಸಿಗುವ ಹಣ 23,100 ರೂ. ಮೂರನೇ ವರ್ಷ 36,500 ರೂ. ಕೈಗೆ ಸಿಗುವ ಹಣ 25,550 ರೂ. ನಾಲ್ಕನೇ ವರ್ಷ 40 ಸಾವಿರ ರೂ, ಕೈಗೆ ಸಿಗುವ ಹಣ 28 ಸಾವಿರ ರೂ. 4 ವರ್ಷಗಳ ಯಶಸ್ವಿ ಸೇವೆ ಮುಗಿದ ನಂತರ, ಆದಾಯ ತೆರಿಗೆ ಮುಕ್ತವಾದ ಸುಮಾರು 5.02 ಲಕ್ಷ ರೂ. ಗಳ ಸೇವಾ ನಿಧಿ ಪ್ಯಾಕೇಜ್ ಲಭಿಸಲಿದೆ. ಇದರೊಂದಿಗೆ 48 ಲಕ್ಷ ರೂ. ಜೀವ ವಿಮೆ ಸೌಲಭ್ಯ ಇರಲಿದ್ದು, ಪ್ರತಿ ಬ್ಯಾಚ್‌ನ ಶೇ. 25 ವರೆಗಿನ ಅತ್ಯುತ್ತಮ ಅಭ್ಯರ್ಥಿಗಳನ್ನು ಖಾಯಂ ನೌಕಾಪಡೆ ಕೇಡರ್‌ಗೆ ಸೇರಿಸಿಕೊಳ್ಳುವ ಅವಕಾಶವೂ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳನ್ನು ಎರಡು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಂತ 1 ರಲ್ಲಿ ಮೊದಲಿಗೆ ಕಂಪ್ಯೂಟರ್ ಆಧಾರಿತ ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ ನಡೆಯಲಿದೆ. ಇದು 100 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಋಣಾತ್ಮಕ ಅಂಕಗಳು ಇರಲಿದೆ. ಹಂತ 2 ರಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಇರಲಿದ್ದು, ಲಿಖಿತ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದವರಿಗೆ ಐಎನ್‌ಎಸ್ ಚಿಲ್ಕಾದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ನಡೆಯಲಿದೆ. ಅಭ್ಯರ್ಥಿಗಳ ಕನಿಷ್ಠ ಎತ್ತರ 157 ಸೆಂ.ಮೀ ಇರಬೇಕು ಎಂದು ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ನೇಮಕಾತಿ ಪೋರ್ಟಲ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 550 ರೂ. ಹಾಗೂ ಶೇ. 18 ಜಿಎಸ್‌ಟಿ ಶುಲ್ಕವಿರುತ್ತದೆ. ಇದನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು. ಭಾರತೀಯ ನೌಕಾಪಡೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಿ. ಲಾಗಿನ್ ಆದ ನಂತರ “ಅಪ್ರೆಂಟಿಸ್ — 2/26” ಲಿಂಕ್ ಅನ್ನು ಆಯ್ಕೆ ಮಾಡಿ. ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ. 10ನೇ ತರಗತಿ, ಡಿಪ್ಲೊಮಾ ಅಂಕಪಟ್ಟಿ, ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಫಾರ್ಮ್ ಸಬ್ಮಿಟ್ ಮಾಡಿ ಮತ್ತು ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ಪಡೆದುಕೊಳ್ಳುವಂತೆ ನೌಕಾಪಡೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.

Read More
Next Story