
ಸರತಿ ಸಾಲಿನಲ್ಲಿ ನಿಂತಿರುವ ಪರೀಕ್ಷಾರ್ಥಿಗಳು(ಎಐ ಆಧಾರಿತ ಚಿತ್ರ)
ಕೆಇಎ ನೇಮಕಾತಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಮತ್ತು ಸಿಸಿಟಿವಿ ಹದ್ದಿನ ಕಣ್ಣು
ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು. ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆಇಎ ತಿಳಿಸಿದೆ.
ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್‌ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ಒಟ್ಟು 8 ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕ ಹಾಗೂ ಸಮಾನಾಂತರ ಒಟ್ಟು 325 ಹುದ್ದೆಗಳ ನೇಮಕಾತಿಗೆ ಭಾನುವಾರ (ಜ.25) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸುತ್ತಿದೆ.
ಈ ಸಂಬಂಧ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ಕೆಇಎ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ರಾಜ್ಯದ 12 ಜಿಲ್ಲೆಗಳ (ಬೆಂಗಳೂರು, ಮೈಸೂರು, ತುಮಕೂರು, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ಶಿವಮೊಗ್ಗ, ವಿಜಯಪುರ ಮತ್ತು ದಾವಣಗೆರೆ) ಒಟ್ಟು 319 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 1,33,346 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಸಿಟಿವಿ, ಜಾಮರ್ ಅಳವಡಿಕೆ
ಅತ್ಯಂತ ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಜತೆಗೆ ಮೊಬೈಲ್ ಜಾಮರ್ ಕೂಡ ಹಾಕಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಇದ್ದು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಜಾತಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ
ಸಿಇಟಿ ಹಾಗೂ ಕ್ರೈಸ್ ಪರೀಕ್ಷೆ ಗಳಿಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳಮೀಸಲಾತಿ ವಿವರಗಳು ಮುದ್ರಿತವಾಗಿರುವ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ) ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರೆ ಮಾತ್ರವೇ ಆಯಾ ವರ್ಗಕ್ಕೆ ನಿಗದಿಯಾಗಿರುವ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು. ಜೊತೆಗೆ, ಆನ್‌ಲೈನ್ ಅರ್ಜಿಯಲ್ಲಿ ಒಳ ಮೀಸಲಾತಿ ಇರುವ ಆರ್.ಡಿ.ಸಂಖ್ಯೆಯನ್ನು ನಮೂದಿಸಿರಬೇಕು ಎಂದು ಕೆಇಎ ಸ್ಪಷ್ಟಪಡಿಸಿದೆ.
ಹಳೆ ಜಾತಿ ಪ್ರಮಾಣ ಪತ್ರ: ಪರಿಗಣನೆ ಇಲ್ಲ
ಈಗಾಗಲೇ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ಈ ಮೊದಲೇ ಪಡೆದಿದ್ದ ಒಳಮೀಸಲಾತಿ ವಿವರಗಳು ಮುದ್ರಿತವಾಗಿರದ ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆಯನ್ನೇ ಅರ್ಜಿಯಲ್ಲಿ ನಮೂದಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಇಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಅಭ್ಯರ್ಥಿಗಳು ಈ ಕುರಿತು ಗಮನ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

