
ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಮೇಯರ್ ಜೊಹ್ರಾನ್ ಮಮ್ದಾನಿ ವಿರೋಧ
ನ್ಯೂಯಾರ್ಕ್ ಇತಿಹಾಸದಲ್ಲಿಯೇ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗಿರುವ ಮಮ್ದಾನಿ, ತಮ್ಮ ತಾಯಿಯ ಕುಟುಂಬ ಇಂದಿಗೂ ಭಾರತದಲ್ಲೇ ನೆಲೆಸಿದೆ ಎಂಬುದನ್ನು ಸ್ಮರಿಸಿದರು.
ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಕೇರ್ ಗಾರ್ಡನ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರತ್ಯೇಕತಾವಾದಿ ಚಳವಳಿಯ ಭಾಗವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದು, ಭಾರತೀಯ-ಅಮೆರಿಕನ್ ಆಗಿ ಹಾಗೂ ಎಲ್ಲ ಸಮುದಾಯಗಳನ್ನು ಒಳಗೊಂಡ ನಗರದ ಓರ್ವ ಮೇಯರ್ ಆಗಿ ಈ ಕಾರ್ಯಕ್ರಮವನ್ನು ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 29ರಂದು ಆಯೋಜನೆಗೊಂಡಿರುವ ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಲ್ಲಿನ ಸ್ಥಳೀಯ ಸಂಘಟನೆಗಳಿಂದ ಒತ್ತಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮೇಯರ್ ಮಮ್ದಾನಿ, ತಾವು ಖುದ್ದಾಗಿ ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದೊಂದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಇದನ್ನು ಕಾನೂನಾತ್ಮಕವಾಗಿ ರದ್ದುಗೊಳಿಸುವ ಅಧಿಕಾರ ನಗರದ ಆಡಳಿತಕ್ಕೆ ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆರ್‌ಎಸ್‌ಎಸ್‌ನ ಶತಮಾನೋತ್ಸವದ ಜಾಗತಿಕ ಕಾರ್ಯಕ್ರಮಗಳ ಭಾಗವಾಗಿ ಅಮೆರಿಕಕ್ಕೆ ಆಗಮಿಸಿರುವ ಮೋಹನ್ ಭಾಗವತ್ ಅವರು, ಯುನಿವರ್ಸಲ್ ಒನ್‌ನೆಸ್ (ವಿಶ್ವ ಏಕತೆ) ಕಾರ್ಯಕ್ರಮದಲ್ಲಿ ಸುಮಾರು ೫,೦೦೦ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಾತ್ಯತೀತ ಮತ್ತು ಬಹುತ್ವದ ಆಶಯ
ನ್ಯೂಯಾರ್ಕ್ ಇತಿಹಾಸದಲ್ಲಿಯೇ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗಿರುವ ಮಮ್ದಾನಿ, ತಮ್ಮ ತಾಯಿಯ ಕುಟುಂಬ ಇಂದಿಗೂ ಭಾರತದಲ್ಲೇ ನೆಲೆಸಿದೆ ಎಂಬುದನ್ನು ಸ್ಮರಿಸಿದರು. ಜಾತ್ಯತೀತ ಗಣರಾಜ್ಯವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಬಹುತ್ವದ ಸಮಾಜವಾಗಿ ಭಾರತವನ್ನು ತಾವು ತಮ್ಮ ಕುಟುಂಬದಿಂದ ಅರಿತುಕೊಂಡಿರುವುದಾಗಿ ಅವರು ವಿವರಿಸಿದರು. ಆದರೆ, ಯಾವುದೇ ಅನ್ಯಕೋಮನ್ನು ಅಥವಾ ವರ್ಗವನ್ನು ಹೊರಗಿಡುವ ಪ್ರತ್ಯೇಕತಾವಾದಿ ಸಿದ್ಧಾಂತಗಳ ಆಧಾರದ ಮೇಲೆ ಬೆಳೆಯುತ್ತಿರುವ ಚಳವಳಿಗಳು ತೀವ್ರ ಆತಂಕಕಾರಿಯಾಗಿವೆ. ಬಣ್ಣ, ಧರ್ಮ, ಜಾತಿ, ನಂಬಿಕೆಗಳ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಅಪ್ಪಿಕೊಳ್ಳುವ ನಗರದ ಪ್ರತಿನಿಧಿಯಾಗಿ ಇಂತಹ ಆಲೋಚನೆಗಳನ್ನು ವಿರೋಧಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಅವರು ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸಿದರು.
ಆಯೋಜಕರ ಸಮರ್ಥನೆ
ನ್ಯೂಯಾರ್ಕ್ ಸಿಟಿ ಹಾಲ್ ಎದುರು ಜಮಾಯಿಸಿದ್ದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಇಂಟರ್‌ಫೇಯ್ತ್ ಸೆಂಟರ್ ಆಫ್ ನ್ಯೂಯಾರ್ಕ್ ಸೇರಿದಂತೆ ಹಲವು ಮಾನವ ಹಕ್ಕು ಹಾಗೂ ನಾಗರಿಕ ಸಂಘಟನೆಗಳು ಈ ಸಮಾವೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿವೆ. ಮ್ಯಾಡಿಸನ್ ಸ್ಕೇರ್ ಗಾರ್ಡನ್ ಆಡಳಿತ ಮಂಡಳಿಯು ಈ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಈ ಸಂಘಟನೆಗಳು ಒತ್ತಾಯಿಸಿವೆ. ಮತ್ತೊಂದೆಡೆ, ಅಹೆಡ್ ಫೋರಂ ಆಯೋಜಿಸುತ್ತಿರುವ ಈ ಕಾರ್ಯಕ್ರಮವು 'ವಸುಧೈವ ಕುಟುಂಬಕಂ' (ಇಡೀ ವಿಶ್ವವೇ ಒಂದು ಕುಟುಂಬ) ಎಂಬ ಜಾಗತಿಕ ಸಂದೇಶವನ್ನು ಸಾರುತ್ತದೆ. ಮನುಕುಲವನ್ನು ಒಗ್ಗೂಡಿಸುವ ಮತ್ತು ಕೃತಕ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವವನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಆಯೋಜಕರು ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

