
ಜಪಾನ್‌ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಭಾನುವಾರ ಸಂಜೆ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
Earthquake| ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ: ಇವಾಟೆ ಕರಾವಳಿಗೆ ಸುನಾಮಿ ಎಚ್ಚರಿಕೆ
ಜಪಾನ್‌ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಭಾನುವಾರ ಸಂಜೆ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಜಪಾನ್‌ನ ಉತ್ತರ ಕರಾವಳಿ ಭಾಗದಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೇ ಇವಾಟೆ ಪ್ರಾಂತ್ಯದ ಕರಾವಳಿ ಭಾಗಗಳಲ್ಲಿ ಸುನಾಮಿ ಆಲರ್ಟ್ ಘೋಷಿಸಲಾಗಿದೆ. ಪೆಸಿಫಿಕ್ ಸಾಗರದ ಆಳದಲ್ಲಿ ಸಂಭವಿಸಿದ ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ 6.9 ರಷ್ಟು ತೀವ್ರತೆಯನ್ನು ದಾಖಲಿಸಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಸನ್ರಿಕು ಕರಾವಳಿಯಿಂದ ಸುಮಾರು 30 ಕಿಲೋಮೀಟರ್ ಆಳದಲ್ಲಿದ್ದು, ಇದರ ಕಂಪನಗಳು ಇವಾಟೆ ಮಾತ್ರವಲ್ಲದೆ ಮಿಯಾಗಿ ಮತ್ತು ಅಯೋಮೋರಿ ಪ್ರಾಂತ್ಯಗಳಲ್ಲೂ ಅನುಭವಕ್ಕೆ ಬಂದಿವೆ. ರಾಜಧಾನಿ ಟೋಕಿಯೋದಲ್ಲೂ ಸಾಧಾರಣ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದ್ದು, ಸಮುದ್ರದಲ್ಲಿ ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈಗಾಗಲೇ ಕುಜಿ ಮತ್ತು ಓಫುನಾಟೊ ಬಂದರುಗಳಲ್ಲಿ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಸ್ಥಳೀಯ ಆಡಳಿತವು ಜನರನ್ನು ಸಮುದ್ರ ತೀರದಿಂದ ದೂರವಿರಲು ಸೂಚಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ ಶಿಂಕನ್ಸೆನ್ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇನ್ನು ಈ ಭಾಗದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟಪಡಿಸಿವೆ. ಈ ಘಟನೆಯು 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪ ಮತ್ತು ಸುನಾಮಿಯ ಕಹಿ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಮುಂದಿನ ಒಂದು ವಾರಗಳ ಕಾಲ ಸಣ್ಣ ಪ್ರಮಾಣದ ಕಂಪನಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

