ಶ್ವೇತಭವನದ ಬಳಿ ಭೀಕರ ಗುಂಡಿನ ದಾಳಿ: ಸೀಕ್ರೆಟ್ ಸರ್ವೀಸ್ ಗುಂಡಿಗೆ ದಾಳಿಕೋರ ಬಲಿ
x
ಅಮೆರಿಕದ ಶ್ವೇತಭವನದ ಬಳಿ ನಡೆದ ಶೂಟೌಟ್

ಶ್ವೇತಭವನದ ಬಳಿ ಭೀಕರ ಗುಂಡಿನ ದಾಳಿ: ಸೀಕ್ರೆಟ್ ಸರ್ವೀಸ್ ಗುಂಡಿಗೆ ದಾಳಿಕೋರ ಬಲಿ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಸರಣಿ ಹತ್ಯೆ ಯತ್ನಗಳು ನಡೆಯುತ್ತಿರುವುದು ಅಮೆರಿಕದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ನಿವಾಸವಾದ ಶ್ವೇತಭವನದ ಭದ್ರತಾ ಚೆಕ್‌ಪಾಯಿಂಟ್ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ದಾಳಿ ನಡೆದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ನಡೆಸಿದ ಪ್ರತಿದಾಳಿಯಲ್ಲಿ ಸಶಸ್ತ್ರ ಬಂದೂಕುಧಾರಿಯು ಸ್ಥಳದಲ್ಲೇ ಹತ್ಯೆಯಾಗಿದ್ದಾನೆ. ಘಟನೆ ಸಂಭವಿಸಿದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಒಳಗಡೆ ಇದ್ದರಾದರೂ, ಅವರು ಸಂಪೂರ್ಣ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ದಿಢೀರ್ ಮುನ್ನುಗ್ಗಿದ ಬಂದೂಕುಧಾರಿ

ಸ್ಥಳೀಯ ಕಾಲಮಾನ ಶನಿವಾರ (ಮೇ 23) ಸಂಜೆ ಸುಮಾರು 6 ಗಂಟೆಗೆ ಶ್ವೇತಭವನ ಸಂಕೀರ್ಣದ ಹೊರಗಿರುವ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಬಳಿಯ ಮುಖ್ಯ ಭದ್ರತಾ ಚೆಕ್‌ಪಾಯಿಂಟ್‌ಗೆ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಅನಿರೀಕ್ಷಿತವಾಗಿ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದ ಆತ ಅಲ್ಲಿದ್ದ ಭದ್ರತಾ ಅಧಿಕಾರಿಗಳ ಮೇಲೆ ದಿಢೀರ್ ಗುಂಡಿನ ಮಳೆಗರೆದಿದ್ದಾನೆ. ಸುಮಾರು 20 ರಿಂದ 30 ಸುತ್ತುಗಳ ನಿರಂತರ ಫೈರಿಂಗ್ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತ ಸೀಕ್ರೆಟ್ ಸರ್ವೀಸ್ ಪಡೆಗಳು ಆತನನ್ನು ಗುಂಡಿಕ್ಕಿ ಹೊಡೆದುರುಳಿಸಿವೆ.

ದಾಳಿಕೋರ ಮಾನಸಿಕ ಅಸ್ವಸ್ಥ

ಹತರಾದ ಶಂಕಿತ ದಾಳಿಕೋರನನ್ನು ಮೇರಿಲ್ಯಾಂಡ್ ಮೂಲದ 21 ವರ್ಷದ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈತ ಮಾನಸಿಕ ಅಸ್ವಸ್ಥನಾಗಿದ್ದು, ಈ ಹಿಂದೆಯೂ ಕೂಡ ಶ್ವೇತಭವನದ ಆವರಣಕ್ಕೆ ನುಗ್ಗಲು ಯತ್ನಿಸಿ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.

ಪತ್ರಕರ್ತರು ಪಾರು, ಸಾರ್ವಜನಿಕರಿಗೆ ಗಾಯ

ಘಟನೆ ನಡೆಯುವ ಸಂದರ್ಭದಲ್ಲಿ ಶ್ವೇತಭವನದ ನಾರ್ಥ್ ಲಾನ್‌ನಲ್ಲಿ ಎಬಿಸಿ ನ್ಯೂಸ್ ವರದಿಗಾರ್ತಿ ಲೈವ್ ವರದಿ ಮಾಡುತ್ತಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲಿದ್ದ ಪತ್ರಕರ್ತರು ತಕ್ಷಣವೇ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರಿಗೆ ಗುಂಡು ತಗುಲಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಂಪ್ ಹತ್ಯೆಗೆ ಸರಣಿ ಯತ್ನಗಳು

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಸರಣಿ ಹತ್ಯೆ ಯತ್ನಗಳು ನಡೆಯುತ್ತಿರುವುದು ಅಮೆರಿಕದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

2026 ಏಪ್ರಿಲ್ 25 ರಂದು ಶ್ವೇತಭವನದ ವರದಿಗಾರರ ಸಂಘದ ಭೋಜನಕೂಟದಲ್ಲಿ ಟ್ರಂಪ್ ಮತ್ತು ದಂಪತಿ ಭಾಗವಹಿಸಿದ್ದಾಗ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ದಾಳಿಗೆ ಯತ್ನಿಸಿ ಬಂಧನಕ್ಕೊಳಗಾಗಿದ್ದ.

2024 ರಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಬಟ್ಲರ್‌ನಲ್ಲಿ ಥಾಮಸ್ ಮ್ಯಾಥ್ಯು ಕ್ರೂಕ್ಸ್ (20) ಎಂಬಾತ ನಡೆಸಿದ ಗುಂಡಿನ ದಾಳಿಯಲ್ಲಿ ಟ್ರಂಪ್ ಕಿವಿ ಸೀಳಿಕೊಂಡು ಹೋಗಿತ್ತು. ಆತನನ್ನು ಸ್ಥಳದಲ್ಲೇ ಹೊಡೆದುರುಳಿಸಲಾಗಿತ್ತು.

ವೆಸ್ಟ್ ಪಾಮ್ ಬೀಚ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಮತ್ತೊಮ್ಮೆ ಹತ್ಯೆಗೆ ಯತ್ನಿಸಿದ್ದ ಆರೋಪಿ ರಾನ್ ವೆಸ್ಲಿ ರೂತ್‌ಗೆ ನ್ಯಾಯಾಲಯ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದೆ.ಪ್ರಸಕ್ತ ಘಟನೆಯ ಬೆನ್ನಲ್ಲೇ ಸೀಕ್ರೆಟ್ ಸರ್ವೀಸ್ ಇಲಾಖೆಯು ಸಮಗ್ರ ತನಿಖೆಗೆ ಆದೇಶಿಸಿದೆ.

ದಾಳಿಕೋರನ ನಿಖರ ಉದ್ದೇಶ ಹಾಗೂ ಈತನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಕೋನದಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಶ್ವೇತಭವನದ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Read More
Next Story