
ಸಾಂದರ್ಭಿಕ ಚಿತ್ರ
ಫೋನ್ ನಂಬರ್ ಇಲ್ಲದೆಯೇ ವಾಟ್ಸ್ಆ್ಯಪ್ ಚಾಟ್: ಬರಲಿದೆ ಹೊಸ 'ಯೂಸರ್‌ನೇಮ್' ಪ್ರೈವೆಸಿ ಫೀಚರ್!
ಒಮ್ಮೆ ಈ ವೈಶಿಷ್ಟ್ಯವು ದೇಶದಲ್ಲಿ ಲಭ್ಯವಾದರೆ, ನೀವು ವೈಯಕ್ತಿಕ ಅಥವಾ ವ್ಯವಹಾರದ ಉದ್ದೇಶಗಳಿಗಾಗಿ ಯಾರಿಗಾದರೂ ಮೊದಲ ಬಾರಿಗೆ ಸಂದೇಶ ಕಳುಹಿಸಿದಾಗ, ಅವರಿಗೆ ನಿಮ್ಮ ಫೋನ್ ನಂಬರ್ ಕಾಣಿಸುವುದಿಲ್ಲ.
ನೀವು ಕೆಲಸದ ನಿಮಿತ್ತ ಅಥವಾ ಯಾವುದಾದರೂ ಗ್ರೂಪ್‌ಗಳ ಮೂಲಕ ಅಪರಿಚಿತರೊಂದಿಗೆ ವಾಟ್ಸ್ಆ್ಯಪ್ ಸಂಪರ್ಕ ಸಾಧಿಸುವಾಗ ನಿಮ್ಮ ವೈಯಕ್ತಿಕ ಫೋನ್ ನಂಬರ್ ಅವರಿಗೆ ತಿಳಿಯುತ್ತದೆ ಎಂಬ ಆತಂಕ ನಿಮಗಿತ್ತೇ? ನಿಮ್ಮ ಆ ಪ್ರೈವೆಸಿ ಆತಂಕಕ್ಕೆ ಈಗ ವಾಟ್ಸ್ಆ್ಯಪ್ ಅದ್ಭುತ ಪರಿಹಾರವೊಂದನ್ನು ಕಂಡುಹಿಡಿದಿದೆ. ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಇನ್ಮುಂದೆ 'ಯೂಸರ್‌ನೇಮ್' ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ.
ಹೌದು, ಇನ್ನು ಮುಂದೆ ಯಾರೊಂದಿಗಾದರೂ ಚಾಟ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ. ಕೇವಲ ಒಂದು ಯೂಸರ್‌ನೇಮ್ ಬಳಸಿ ನೀವು ಇತರರೊಂದಿಗೆ ಸುರಕ್ಷಿತವಾಗಿ ಸಂವಹನ ನಡೆಸಬಹುದು.
ಏನಿದು ಹೊಸ ವೈಶಿಷ್ಟ್ಯ?
ಜೂ. 29 ರಂದು ಪ್ರಕಟವಾದ ಬ್ಲಾಗ್ ಪೋಸ್ಟ್‌ನಲ್ಲಿ ವಾಟ್ಸ್ಆ್ಯಪ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ವರ್ಷದ ಕೊನೆಯಲ್ಲಿ ಈ ವೈಶಿಷ್ಟ್ಯವು ಜಾಗತಿಕವಾಗಿ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ಸದ್ಯದಲ್ಲೇ ಬಳಕೆದಾರರು ತಮಗಾಗಿ ವಿಶಿಷ್ಟವಾದ ಯೂಸರ್‌ನೇಮ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ತಿಳಿಸಿದೆ.
ಒಮ್ಮೆ ಈ ವೈಶಿಷ್ಟ್ಯವು ನಿಮ್ಮ ದೇಶದಲ್ಲಿ ಲಭ್ಯವಾದರೆ, ನೀವು ವೈಯಕ್ತಿಕ ಅಥವಾ ವ್ಯವಹಾರದ ಉದ್ದೇಶಗಳಿಗಾಗಿ ಯಾರಿಗಾದರೂ ಮೊದಲ ಬಾರಿಗೆ ಸಂದೇಶ ಕಳುಹಿಸಿದಾಗ, ಅವರಿಗೆ ನಿಮ್ಮ ಫೋನ್ ನಂಬರ್ ಕಾಣಿಸುವುದಿಲ್ಲ. ಬದಲಿಗೆ ನಿಮ್ಮ ಯೂಸರ್‌ನೇಮ್ ಮಾತ್ರ ಕಾಣಿಸಿಕೊಳ್ಳುತ್ತದೆ.
"ಸಮಯವೇ ಎಲ್ಲವೂ. ಈ ವೈಶಿಷ್ಟ್ಯವನ್ನು ಜಗತ್ತಿಗೆ ಬಿಡುಗಡೆ ಮಾಡುವ ಮುನ್ನವೇ ನನ್ನ ಯೂಸರ್‌ನೇಮ್ ಪಡೆಯಲು ನಾನು ಸಾಕಷ್ಟು ಬೇಗನೆ ವಾಟ್ಸ್ಆ್ಯಪ್ ಸೇರಿದ್ದೇನೆ. ಈಗ ನಿಮ್ಮ ಯೂಸರ್‌ನೇಮ್ ಪಡೆಯುವ ಸಮಯ ನಿಮ್ಮದಾಗಿದೆ. ಇದು ಸಂಪರ್ಕಿಸಲು ಅತ್ಯಂತ ಖಾಸಗಿ ಮಾರ್ಗವಾಗಿದೆ. ಶೀಘ್ರದಲ್ಲೇ ಇದು ನಿಮ್ಮ ವಾಟ್ಸಾಪ್‌ಗೆ ಬರಲಿದೆ," ಎಂದು ವಾಟ್ಸಾಪ್ ಜಾಗತಿಕ ಮುಖ್ಯಸ್ಥ ಕುನಾಲ್ ಶಾ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಯೂಸರ್‌ನೇಮ್ ಜನರೇಟರ್ ನೆರವು
ಒಂದೇ ಹೆಸರಿನ ಇಬ್ಬರು ಬಳಕೆದಾರರಿದ್ದರೆ ಯೂಸರ್‌ನೇಮ್ ಸಂಘರ್ಷ ಉಂಟಾಗಬಹುದಲ್ಲವೇ? ಇದಕ್ಕೂ ವಾಟ್ಸ್ಆ್ಯಪ್ ಪರಿಹಾರ ಹುಡುಕಿದೆ. ನೀವು ಬಯಸುವ ಹೆಸರು ಈಗಾಗಲೇ ಬೇರೆಯವರ ಪಾಲಾಗಿದ್ದರೆ, ವಾಟ್ಸ್ಆ್ಯಪ್ ನ 'ಯೂಸರ್‌ನೇಮ್ ಜನರೇಟರ್' ಸಹಾಯದಿಂದ ಲಭ್ಯವಿರುವ ಮತ್ತೊಂದು ವಿಶಿಷ್ಟ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹೆಸರುಗಳು ಸಿಗಲಿವೆ.
ಇನ್ನು ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವ ಕಂಟೆಂಟ್ ಕ್ರಿಯೇಟರ್ಸ್, ಸಣ್ಣ ಉದ್ಯಮಿಗಳು ಮತ್ತು ಸಂಸ್ಥೆಗಳು ತಮ್ಮ ಬ್ರ್ಯಾಂಡ್ ಹೆಸರನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ, ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಇರುವ ಅವರದ್ದೇ ಯೂಸರ್‌ನೇಮ್ ಅನ್ನು ವಾಟ್ಸ್ಆ್ಯಪ್ನಲ್ಲೂ ಕಾಯ್ದಿರಿಸಿಕೊಳ್ಳಲು ಮುಖ್ಯಾಂಶ ನೀಡಲಾಗಿದೆ ಎಂದು ಬ್ಲಾಗ್‌ನಲ್ಲಿ ತಿಳಿಸಲಾಗಿದೆ.
ಸುರಕ್ಷತೆಗಾಗಿ 'ಯೂಸರ್‌ನೇಮ್ ಕೀ'
ವಾಟ್ಸ್ಆ್ಯಪ್ ಪ್ರಕಾರ, ಇದು ಕೇವಲ ಸೋಷಿಯಲ್ ಮೀಡಿಯಾ ಪ್ರೊಫೈಲ್ ತರಹ ಇರುವುದಿಲ್ಲ. ಯೂಸರ್‌ನೇಮ್‌ಗಳನ್ನು ಹುಡುಕಲು ಯಾವುದೇ ಸಾರ್ವಜನಿಕ ಡೈರೆಕ್ಟರಿ ಅಥವಾ ಸಜೆಷನ್‌ಗಳು ಇರುವುದಿಲ್ಲ. ಅಂದರೆ, ಒಬ್ಬರು ನಿಮ್ಮನ್ನು ಸಂಪರ್ಕಿಸಬೇಕಾದರೆ ಅವರಿಗೆ ನಿಮ್ಮ ನಿಖರವಾದ ಯೂಸರ್‌ನೇಮ್ ತಿಳಿದಿರಲೇಬೇಕು. ಇದರ ಜೊತೆಗೆ ಮತ್ತೊಂದು ಹಂತದ ಭದ್ರತೆಗಾಗಿ 'ಯೂಸರ್‌ನೇಮ್ ಕೀ' ಎಂಬ ಐಚ್ಛಿಕ ವೈಶಿಷ್ಟ್ಯವನ್ನೂ ತರಲಾಗುತ್ತಿದೆ. ಅಪರಿಚಿತರು ನಿಮಗೆ ಸಂದೇಶ ಕಳುಹಿಸಬೇಕಾದರೆ ಯೂಸರ್‌ನೇಮ್ ಜೊತೆಗೆ ಈ 'ಕೀ' ಕೂಡ ತಿಳಿದಿರಬೇಕಾಗುತ್ತದೆ. ಇದರಿಂದ ಯಾರು ನಿಮ್ಮನ್ನು ಸಂಪರ್ಕಿಸಬೇಕು ಎಂಬುದನ್ನು ನೀವೇ ನಿಯಂತ್ರಿಸಬಹುದು.
ಇದನ್ನು ಸೆಟ್ ಮಾಡುವುದು ಹೇಗೆ?
ನಿಮ್ಮ ವಾಟ್ಸ್ಆ್ಯಪ್ ನಲ್ಲಿ ಯೂಸರ್‌ನೇಮ್ ಸೆಟ್ ಮಾಡುವುದು ಅತ್ಯಂತ ಸುಲಭ. ಮೊದಲು ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ, ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ 'ಖಾತೆ' ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಂತರ ಕಾಣಿಸುವ 'ಯೂಸರ್‌ನೇಮ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ ಹೆಸರನ್ನು ಸೆಟ್ ಮಾಡಿ ಕಾಯ್ದಿರಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಈ ವೈಶಿಷ್ಟ್ಯವನ್ನು ಹಂತ-ಹಂತವಾಗಿ ಜಗತ್ತಿನಾದ್ಯಂತ ಬಿಡುಗಡೆ ಮಾಡಲಾಗುವುದು ಮತ್ತು ನಿಮ್ಮ ದೇಶದಲ್ಲಿ ಇದು ಲಭ್ಯವಾದಾಗ ವಾಟ್ಸಾಪ್ ಆಪ್ ಮೂಲಕವೇ ನೋಟಿಫಿಕೇಶನ್ ಬರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

