ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪ: 1,430 ಸಾವು, 68 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ
x

ಸಾಂದರ್ಭಿಕ ಚಿತ್ರ

ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪ: 1,430 ಸಾವು, 68 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

ಅತಿ ಹೆಚ್ಚು ಹಾನಿಗೊಳಗಾದ ಲಾ ಗುಯಿರಾ ರಾಜ್ಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಅವಶೇಷಗಳಡಿ ಸಿಲುಕಿರುವವರ ಹುಡುಕಾಟಕ್ಕಾಗಿ ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.


Click the Play button to hear this message in audio format

ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾದಲ್ಲಿ ಸಂಭವಿಸಿದ ಸರಣಿ ಭೂಕಂಪ ತೀವ್ರ ವಿನಾಶವನ್ನು ಸೃಷ್ಟಿಸಿದ್ದು, ಸಾವಿನ ಸಂಖ್ಯೆ ಭೀಕರವಾಗಿ 1,430 ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಅವಳಿ ಭೂಕಂಪಗಳು ಸಂಭವಿಸಿ ಮೂರು ದಿನಗಳು ಕಳೆದರೂ, ಇನ್ನೂ ಕನಿಷ್ಠ 68,900 ಜನರು ಕಾಣೆಯಾಗಿದ್ದಾರೆ ಎಂದು ವೆನೆಜುವೆಲಾ ಸರ್ಕಾರ ಅಧಿಕೃತವಾಗಿ ತಿಳಿಸಿದೆ.

ಅತಿ ಹೆಚ್ಚು ಹಾನಿಗೊಳಗಾದ ಲಾ ಗುಯಿರಾ ರಾಜ್ಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಅವಶೇಷಗಳಡಿ ಸಿಲುಕಿರುವವರ ಹುಡುಕಾಟಕ್ಕಾಗಿ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಸರ್ಕಾರದ ವಿರುದ್ಧ ತಿರುಗಿಬಿದ್ದ ಜನತೆ

ದುರಂತ ನಡೆದು ಮೂರು ದಿನಗಳಾಗುತ್ತಿದ್ದರೂ ಸರ್ಕಾರದ ವತಿಯಿಂದ ಸೂಕ್ತ ಹಾಗೂ ಸಕಾಲಿಕ ಸ್ಪಂದನೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈನಿಕರು, ಅಗ್ನಿಶಾಮಕ ದಳ ಮತ್ತು ಪೊಲೀಸರು ಇಂತಹ ದೊಡ್ಡ ಮಟ್ಟದ ವಿಪತ್ತನ್ನು ನಿರ್ವಹಿಸಲು ಸಿದ್ಧರಿರಲಿಲ್ಲ ಎಂಬುದು ಜನರ ಆರೋಪವಾಗಿದೆ.

"ನಿನ್ನೆ ರಾತ್ರಿಯಿಂದ ಇಲ್ಲಿ ನವಜಾತ ಶಿಶುಗಳು ಸೇರಿದಂತೆ ಶವಗಳ ರಾಶಿ ಬಿದ್ದಿದೆ. ನಿನ್ನೆ ರಾತ್ರಿ 8 ಗಂಟೆಯವರೆಗೂ ಅಲ್ಲಿ ಜನರು ಜೀವಂತವಾಗಿದ್ದರು, ಆದರೆ ಅಧಿಕಾರಿಗಳು ಅವರನ್ನು ರಕ್ಷಿಸಲು ಮುಂದಾಗಲಿಲ್ಲ. ಕೇವಲ ಪ್ರಚಾರಕ್ಕಾಗಿ, ಫೋಟೋ ತೆಗೆದುಕೊಳ್ಳಲು ಅಧಿಕಾರಿಗಳು ಬರುತ್ತಾರೆ ವಿನಃ ನಿಜವಾದ ರಕ್ಷಣಾ ಕೆಲಸ ಮಾಡುತ್ತಿಲ್ಲ," ಎಂದು ಸ್ಥಳೀಯ ನಿವಾಸಿ ಮಿಲೀಡಿ ರೊಮೆರೊ ಆಕ್ರೋಶ ಹೊರಹಾಕಿದ್ದಾರೆ. ಕೆಲವೆಡೆ ಹತಾಶೆಗೊಂಡ ಸಾರ್ವಜನಿಕರು, ಸಹಾಯ ಮಾಡದೆ ಕೇವಲ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಆಡಳಿತ ಪಕ್ಷದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಗಳೂ ನಡೆದಿವೆ.

ಹೆಚ್ಚಿದ ಅಂತರರಾಷ್ಟ್ರೀಯ ನೆರವು

ವಿಪತ್ತು ವಲಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು 14,000 ಕ್ಕೂ ಹೆಚ್ಚು ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಬಾಧಿತ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ತಿಳಿಸಿದ್ದಾರೆ.

ಮತ್ತೊಂದೆಡೆ, ಮೆಕ್ಸಿಕೊ, ಅಮೆರಿಕ (US), ಬ್ರೆಜಿಲ್, ಎಲ್ ಸಾಲ್ವಡಾರ್ ಮತ್ತು ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದ ರಕ್ಷಣಾ ತಂಡಗಳು ವೆನೆಜುವೆಲಾಗೆ ಧಾವಿಸಿವೆ. ಶನಿವಾರದ ವೇಳೆಗೆ 1,600 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ಹೊತ್ತ 17 ವಿಮಾನಗಳು ಬಂದಿಳಿದಿವೆ. ಮೆಕ್ಸಿಕನ್ ಮಿಲಿಟರಿ ರಕ್ಷಕರು ಕುಸಿದ ಕಾಂಕ್ರೀಟ್ ರಂಧ್ರಗಳ ಮೂಲಕ ಜೀವಂತವಾಗಿರುವವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

60 ಲಕ್ಷ ಜನರ ಮೇಲೆ ಪರಿಣಾಮ

ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ (IOM) ಪ್ರಕಾರ, ಈ ಭೂಕಂಪದಿಂದಾಗಿ ದೇಶದ ಒಟ್ಟು 60 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಧಾನಿ ಕ್ಯಾರಕಾಸ್ ಒಂದರಲ್ಲೇ ಸುಮಾರು 20 ಲಕ್ಷ ಜನರಿಗೆ ತೊಂದರೆಯಾಗಿದೆ. ಕ್ಯಾರಕಾಸ್‌ನ ಪ್ರಮುಖ ಸೈಮನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತೀವ್ರವಾಗಿ ಹಾನಿಗೊಳಗಾಗಿದ್ದು, ರನ್‌ವೇ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

"ಭೂಕಂಪದಲ್ಲಿ ಸಿಲುಕಿದವರನ್ನು ಜೀವಂತವಾಗಿ ಹೊರತೆಗೆಯಲು ಮೊದಲ 48 ರಿಂದ 72 ಗಂಟೆಗಳು ಅತ್ಯಂತ ನಿರ್ಣಾಯಕ. ಪ್ರಸ್ತುತ ರಕ್ಷಣಾ ಕಾರ್ಯವು 'ಗಡಿಯಾರದ ವಿರುದ್ಧದ ಓಟ'ದಂತಾಗಿದೆ," ಎಂದು ಅಮೆರಿಕದ ಹಿರಿಯ ಅಧಿಕಾರಿ ಜೆರೆಮಿ ಲೆವಿನ್ ತಿಳಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಯುಎಸ್ ನೌಕಾಪಡೆಯ ವೈದ್ಯಕೀಯ ಹಡಗನ್ನು ಕರಾವಳಿಯಲ್ಲಿ ನಿಯೋಜಿಸಲಾಗಿದೆ.

ಸತತವಾಗಿ ಸಂಭವಿಸುತ್ತಿರುವ ಸಣ್ಣ ಸಣ್ಣ ಕಂಪನಗಳು (Aftershocks) ಮತ್ತು ಕೊಳೆಯುತ್ತಿರುವ ಶವಗಳ ದುರ್ವಾಸನೆಯ ನಡುವೆಯೂ, ತಮ್ಮವರು ಬದುಕಿ ಬರಬಹುದು ಎಂಬ ಸಣ್ಣ ಭರವಸೆಯೊಂದಿಗೆ ಜನರು ಅವಶೇಷಗಳ ಮುಂದೆ ಕಾಯುತ್ತಿದ್ದಾರೆ.

Read More
Next Story