
ವೆನೆಜುವೆಲಾ ಭೂಕಂಪ; ಫುಟ್ಬಾಲ್ ಆಟಗಾರನ ಪತ್ನಿ ದುರಂತ ಅಂತ್ಯ
ವೆನೆಜುವೆಲಾದ ಖ್ಯಾತ ಫುಟ್ಬಾಲ್ ಕ್ಲಬ್ 'ಕರಬೊಬೊ ಎಫ್‌ಸಿ' ಪರ ಆಡುವ ಹೆಕ್ಟರ್ ಬೆಲ್ಲೊ ಅವರ ಕುಟುಂಬಕ್ಕೆ ಜಾಗತಿಕ ಫುಟ್ಬಾಲ್ ಸಮುದಾಯವು ತೀವ್ರ ಸಂತಾಪ ಸೂಚಿಸಿದೆ.
ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಬೆಲ್ಲೊ ಅವರು ಭೀಕರ ಭೂಕಂಪದ ವೇಳೆ ತಮ್ಮ ಒಂಬತ್ತು ತಿಂಗಳ ಹೆಣ್ಣು ಮಗಳನ್ನು ರಕ್ಷಿಸುವ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಭೂಕಂಪ ಸಂಭವಿಸಿ ಕಟ್ಟಡ ಕುಸಿಯುತ್ತಿದ್ದಂತೆ ಆಂಡ್ರಿಯಾ ಅವರು ತಮ್ಮ ಮಗಳನ್ನು ಎದೆಗೆ ಬಿಗಿದಪ್ಪಿಕೊಂಡು, ಅವಳ ಮೇಲೆ ಯಾವುದೇ ಕಲ್ಲು-ಬಂಡೆಗಳು ಬೀಳದಂತೆ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿದಾಗ, ಆಂಡ್ರಿಯಾ ಅವರ ಮೃತದೇಹದ ಅಡಿಯಲ್ಲಿ ಮಗು ಸುರಕ್ಷಿತವಾಗಿ, ಸಣ್ಣ ಗಾಯಗಳೂ ಇಲ್ಲದೆ ಬದುಕುಳಿದಿರುವುದು ಪತ್ತೆಯಾಗಿದೆ. ತಾಯಿಯ ಈ ಸರ್ವೋಚ್ಚ ತ್ಯಾಗ ಜಾಗತಿಕ ಮಟ್ಟದಲ್ಲಿ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಒಂದೇ ಕುಟುಂಬದ ಮೂವರ ಸಾವು
ಆಂಡ್ರಿಯಾ ಬೆಲ್ಲೊ ಅವರ ಸಾವು ಕೇವಲ ಈ ಘಟನೆಗೆ ಸೀಮಿತವಾಗಿಲ್ಲ. ಈ ಭೀಕರ ಭೂಕಂಪದ ದುರಂತದಲ್ಲಿ ಹೆಕ್ಟರ್ ಬೆಲ್ಲೊ ಅವರ ಕುಟುಂಬದ ಇತರ ಇಬ್ಬರು ಸದಸ್ಯರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಹೆಕ್ಟರ್ ಅವರ ತಾಯಿ ಯೆಸ್ಮೇನಿಯಾ ಮತ್ತು ಸಹೋದರಿ ಯೋಹೆಲಿಸ್ ಬೆಲ್ಲೊ ಅವರು ಸಹ ಕಟ್ಟಡ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಧೃಡಪಡಿಸಿದ್ದಾರೆ. ಕ್ಯಾರಕಾಸ್‌ನ ಪೂರ್ವ ಭಾಗದಲ್ಲಿರುವ ಪೆಟಾರೆ ಎಂಬಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಹೆಕ್ಟರ್ ಬೆಲ್ಲೊ ಅವರ ಇಡೀ ಕುಟುಂಬ ಪ್ರಸ್ತುತ ತೀವ್ರ ಆಘಾತ ಮತ್ತು ದುಃಖದಲ್ಲಿದೆ.
ಫುಟ್ಬಾಲ್ ಲೋಕದ ಕಂಬನಿ
ವೆನೆಜುವೆಲಾದ ಖ್ಯಾತ ಫುಟ್ಬಾಲ್ ಕ್ಲಬ್ 'ಕರಬೊಬೊ ಎಫ್‌ಸಿ' ಪರ ಆಡುವ ಹೆಕ್ಟರ್ ಬೆಲ್ಲೊ ಅವರ ಕುಟುಂಬಕ್ಕೆ ಜಾಗತಿಕ ಫುಟ್ಬಾಲ್ ಸಮುದಾಯವು ತೀವ್ರ ಸಂತಾಪ ಸೂಚಿಸಿದೆ. ಕರಬೊಬೊ ಎಫ್‌ಸಿ ಮತ್ತು ವೆನೆಜುವೆಲಾದ ಫುಟ್ಬಾಲ್ ಫೆಡರೇಶನ್ ಅಧಿಕೃತ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಹೆಕ್ಟರ್ ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಮತ್ತು ಮಗಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಆಂಡ್ರಿಯಾ ಅವರ ಧೀರತನಕ್ಕೆ ಗೌರವ ಸಲ್ಲಿಸುವುದಾಗಿ ತಿಳಿಸಿವೆ. ಸಹ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಕ್ಟರ್ ಬೆಲ್ಲೊಗೆ ಧೈರ್ಯ ತುಂಬುವ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ವೆನೆಜುವೆಲಾದಲ್ಲಿ ನಡುಕ ಹುಟ್ಟಿಸಿದ ಸರಣಿ ಭೂಕಂಪಗಳು
ವೆನೆಜುವೆಲಾದ ಉತ್ತರ ಕರಾವಳಿಯ ಸುಕ್ರೆ ರಾಜ್ಯದಲ್ಲಿ 6.0 ಮತ್ತು 5.0 ತೀವ್ರತೆಯ ಸರಣಿ ಭೂಕಂಪಗಳು ಸಂಭವಿಸಿದ್ದು, ಇಡೀ ದೇಶವನ್ನೇ ನಡುಗಿಸಿದೆ. ಕರಾವಳಿ ಪ್ರದೇಶದಿಂದ ಆರಂಭವಾದ ಭೂಕಂಪದ ಕಂಪನಗಳು ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಭಾರಿ ಆತಂಕ ಸೃಷ್ಟಿಸಿವೆ. ಭೂಕಂಪದ ತೀವ್ರತೆಗೆ ಹಲವು ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಕುಸಿದು ಬಿದ್ದಿದ್ದು, ನೂರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಸದ್ಯ ವೆನೆಜುವೆಲಾದ ಸಾರ್ವಜನಿಕ ರಕ್ಷಣಾ ಪಡೆ ಮತ್ತು ತುರ್ತು ನಿರ್ವಹಣಾ ಸಿಬ್ಬಂದಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

