
ಇರಾನ್ ಮೇಲೆ ಅಮೆರಿಕ 12ನೇ ದಿನವೂ ವಾಯುದಾಳಿ ಮುಂದುವರಿಸಿದೆ.
ಇರಾನ್ ಮೇಲೆ 12ನೇ ದಿನವೂ ಅಮೆರಿಕ ದಾಳಿ; ಟ್ರಂಪ್‌ನಿಂದ ಕಠಿಣ ಎಚ್ಚರಿಕೆ
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಅಹ್ವಾಜ್, ರಾಮ್‌ಶೀರ್ ಮತ್ತು ಅಂದಿಮೇಶ್ ಪ್ರದೇಶಗಳನ್ನು ಗುರಿಯಾಗಿಸಲಾಗಿದೆ.
ಇರಾನ್ ವಿರುದ್ಧ ಅಮೆರಿಕದ ಸೇನಾ ಕಾರ್ಯಾಚರಣೆ 12ನೇ ದಿನಕ್ಕೂ ಮುಂದುವರಿದಿದ್ದು, ಬುಧವಾರ ರಾತ್ರಿ ಕೂಡ ಹಲವು ಪ್ರದೇಶಗಳ ಮೇಲೆ ವಾಯುದಾಳಿ ನಡೆಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಉಂಟಾಗಿರುವ ಬೆದರಿಕೆಯನ್ನು ತಡೆಯುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಯಾವುದೇ ಹಡಗಿನ ಮೇಲೆ ಕ್ಷಿಪಣಿ, ರಾಕೆಟ್, ಡ್ರೋನ್ ಅಥವಾ ಬೇರೆ ಯಾವುದೇ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದರೆ, ಪ್ರತಿಯಾಗಿ ಅಮೆರಿಕ ಇರಾನ್‌ನ ಒಂದು ಸೇತುವೆ ಅಥವಾ ವಿದ್ಯುತ್ ಸ್ಥಾವರವನ್ನು ಧ್ವಂಸಗೊಳಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಕೂಡ ಅಮೆರಿಕದ ಬೆದರಿಕೆಗೆ ತಿರುಗೇಟು ನೀಡಿದ್ದು, ದೇಶದ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ, "ಕಣ್ಣಿಗೆ ಕಣ್ಣು" ಎಂಬ ರಕ್ಷಣಾ ನೀತಿಯನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಇರಾನ್‌ನ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೆ ಅದಕ್ಕೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಅಹ್ವಾಜ್, ರಾಮ್‌ಶೀರ್ ಮತ್ತು ಅಂದಿಮೇಶ್ ಪ್ರದೇಶಗಳನ್ನು ಗುರಿಯಾಗಿಸಲಾಗಿದೆ. ಇರಾಕ್ ಗಡಿಯ ಸಮೀಪದ ಶಾಲಾಮ್ಚೆ ಪಟ್ಟಣದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಬೆಂಬಲಿತ ಪಡೆಗಳು ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯ ಹಾಗೂ ಕುಡಿಯುವ ನೀರು ಪೂರೈಸುವ ಉಪ್ಪು ನೀರು ಶುದ್ಧೀಕರಣ ಘಟಕಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗಿದೆ. ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಶತ್ರು ಡ್ರೋನ್‌ಗಳ ದಾಳಿಯನ್ನು ತಡೆದಿವೆ ಎಂದು ತಿಳಿಸಿದೆ.
ಯುದ್ಧದ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ
ವಿಶ್ವದ ತೈಲ ಮತ್ತು ಅನಿಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಸಾಗುವ ಹೋರ್ಮುಜ್ ಜಲಸಂಧಿ ಬಹುತೇಕ ಮುಚ್ಚಿರುವುದರಿಂದ ಜಾಗತಿಕ ವ್ಯಾಪಾರ ಮತ್ತು ಇಂಧನ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 93 ಡಾಲರ್‌ಗಿಂತ ಹೆಚ್ಚಾಗಿದ್ದು, ಪೆಟ್ರೋಲ್ ಬೆಲೆಯೂ ಏರಿಕೆಯಾಗಿದೆ. ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲೂ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ರಾಜತಾಂತ್ರಿಕ ಪ್ರಯತ್ನಗಳಿಗೆ ಇನ್ನೂ ಯಶಸ್ಸಿಲ್ಲ
ಯುದ್ಧ ನಿಲ್ಲಿಸಲು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದರೂ ಯಾವುದೇ ಮಹತ್ವದ ಪ್ರಗತಿ ಕಂಡುಬಂದಿಲ್ಲ. ಇರಾನ್‌ನ ಆಂತರಿಕ ಸಚಿವ ಎಸ್ಕಂದರ್ ಮೊಮೆನಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಆದರೆ ಹೋರ್ಮುಜ್ ಜಲಸಂಧಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಇನ್ನೂ ಸ್ಪಷ್ಟತೆ ಮೂಡಿಲ್ಲ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಯಾವುದೇ ದೇಶ ಅಂತಾರಾಷ್ಟ್ರೀಯ ಜಲಮಾರ್ಗದ ಮೇಲೆ ಏಕಪಕ್ಷೀಯ ನಿಯಂತ್ರಣ ಸಾಧಿಸಿ ಸುಂಕ ವಿಧಿಸುವುದು ಅಥವಾ ಹಡಗುಗಳನ್ನು ಗುರಿಯಾಗಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ಮಾತುಕತೆಗೆ ಅಮೆರಿಕ ಇನ್ನೂ ಸಿದ್ಧವಿದ್ದರೂ, ಇರಾನ್ ಅದಕ್ಕೆ ಗಂಭೀರವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಭೂಗತ ಅಣು ಸ್ಥಾವರದ ಮೇಲೂ ದಾಳಿಯ ಸುಳಿವು
ಅಮೆರಿಕ ಅಧ್ಯಕ್ಷ ಟ್ರಂಪ್, ಇರಾನ್‌ನ ನತಾಂಜ್ ಸಮೀಪ ನಿರ್ಮಾಣ ಹಂತದಲ್ಲಿರುವ ಪಿಕ್‌ಆಕ್ಸ್ ಮೌಂಟನ್ ಭೂಗತ ಅಣು ಕೇಂದ್ರದ ಮೇಲೂ ದಾಳಿ ನಡೆಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ. ಇರಾನ್ ತನ್ನ ಅಣು ಕಾರ್ಯಕ್ರಮ ಸಂಪೂರ್ಣವಾಗಿ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಹೇಳುತ್ತಿದೆಯಾದರೂ, ಯುರೇನಿಯಂ ಸಂಸ್ಕರಣೆಯನ್ನು ಮುಂದುವರಿಸಿರುವುದು ಅಮೆರಿಕದ ಆತಂಕಕ್ಕೆ ಕಾರಣವಾಗಿದೆ.

