ಟ್ರಂಪ್  ವಲಸೆ ನೀತಿ ಬಿಗಿ; ವಿಶ್ವಾದ್ಯಂತ ವೀಸಾ ವಿತರಣೆ ಸ್ಥಗಿತಗೊಳಿಸಿದ ಅಮೆರಿಕ
x

ಟ್ರಂಪ್ ವಲಸೆ ನೀತಿ ಬಿಗಿ; ವಿಶ್ವಾದ್ಯಂತ ವೀಸಾ ವಿತರಣೆ ಸ್ಥಗಿತಗೊಳಿಸಿದ ಅಮೆರಿಕ

ವೀಸಾ ಪ್ರಕ್ರಿಯೆ ಸ್ಥಗಿತ ಮಾತ್ರವಲ್ಲದೆ, ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು ಎರಡು ಲಕ್ಷ ವಿದೇಶಿಯರ ಬಿ-1 ಮತ್ತು ಬಿ-2 (ವಾಣಿಜ್ಯ ಮತ್ತು ಪ್ರವಾಸೋದ್ಯಮ) ವೀಸಾಗಳನ್ನು ರದ್ದುಗೊಳಿಸಲು ಅಲ್ಲಿನ ಆಡಳಿತ ಸಿದ್ಧತೆ ನಡೆಸಿದೆ.


Click the Play button to hear this message in audio format

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ವಲಸೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕ ಸರ್ಕಾರವು ಜಾಗತಿಕ ಮಟ್ಟದಲ್ಲಿ ವೀಸಾ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಮೆರಿಕದ ರಾಯಭಾರಿ ಕಚೇರಿಗಳು ಮತ್ತು ವಾಣಿಜ್ಯ ದೂತಾವಾಸಗಳಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗತಿಕ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೀಸಾ ಸೇವೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಈಗಾಗಲೇ ಸಂದರ್ಶನಕ್ಕೆ ದಿನಾಂಕ ನಿಗದಿಪಡಿಸಿಕೊಂಡಿದ್ದ ಅರ್ಜಿದಾರರ ನೇಮಕಾತಿಗಳನ್ನು ರದ್ದುಗೊಳಿಸಲಾಗಿದ್ದು, ಹೊಸ ದಿನಾಂಕ ಮತ್ತು ಸಮಯದ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಸಾ ಅರ್ಜಿಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಮತ್ತು ಸಮಗ್ರವಾಗಿ ನಡೆಸುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಅಮೆರಿಕದ ಸಾರ್ವಜನಿಕ ಸೌಲಭ್ಯಗಳು ಹಾಗೂ ಯೋಜನೆಗಳ ಮೇಲೆ ಅವಲಂಬಿತರಾಗುವ ಸಾಧ್ಯತೆಯಿರುವ ಅರ್ಜಿದಾರರನ್ನು ಗುರುತಿಸಿ, ಅವರಿಂದ ಸಲ್ಲಿಕೆಯಾಗುವ ವೀಸಾ ಅರ್ಜಿಗಳನ್ನು ಆರಂಭಿಕ ಹಂತದಲ್ಲಿಯೇ ತಡೆಯಲು ಕಾನ್ಸುಲರ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಈ ತರಬೇತಿಯ ಸ್ವರೂಪ ಮತ್ತು ಇದು ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ಬಗ್ಗೆ ವಿದೇಶಾಂಗ ಇಲಾಖೆ ಯಾವುದೇ ನಿರ್ದಿಷ್ಟ ಒದಗಿಸಿಲ್ಲ.

ಬಿ-1, ಬಿ-2 ವೀಸಾ ರದ್ದತಿಯ ಮಹತ್ವದ ನಿರ್ಧಾರ

ವೀಸಾ ಪ್ರಕ್ರಿಯೆ ಸ್ಥಗಿತ ಮಾತ್ರವಲ್ಲದೆ, ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು ಎರಡು ಲಕ್ಷ ವಿದೇಶಿಯರ ಬಿ-1 ಮತ್ತು ಬಿ-2 (ವಾಣಿಜ್ಯ ಮತ್ತು ಪ್ರವಾಸೋದ್ಯಮ) ವೀಸಾಗಳನ್ನು ರದ್ದುಗೊಳಿಸಲು ಅಲ್ಲಿನ ಆಡಳಿತ ಸಿದ್ಧತೆ ನಡೆಸಿದೆ. 2016 ಮತ್ತು 2026ರ ನಡುವೆ ವೀಸಾ ಪಡೆದು ಬಳಿಕ ಆಶ್ರಯ ಕೋರಿದವರನ್ನು ಗುರಿಯಾಗಿಸಿಕೊಂಡು ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಗೃಹರಕ್ಷಣೆ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಯಲಿದ್ದು, ಇದು ಜಾರಿಯಾದಲ್ಲಿ ಅಮೆರಿಕದ ಇತಿಹಾಸದಲ್ಲಿಯೇ ಒಂದೇ ಕಂತಿನಲ್ಲಿ ನಡೆಯುವ ಅತಿ ದೊಡ್ಡ ಸಾಮೂಹಿಕ ವೀಸಾ ರದ್ದತಿ ಪ್ರಕ್ರಿಯೆ ಎನಿಸಿಕೊಳ್ಳಲಿದೆ. ಆದರೆ, ಈ ಕ್ರಮದಿಂದ ತಕ್ಷಣದ ಗಡೀಪಾರು ಪ್ರಕ್ರಿಯೆ ನಡೆಯುವುದಿಲ್ಲ, ಬದಲಾಗಿ ಅವರ ಪ್ರವಾಸಿ ಅಥವಾ ವಾಣಿಜ್ಯ ಸ್ಥಾನಮಾನವು ರದ್ದಾಗಲಿದೆ.

ಎಚ್-1ಬಿ ವೀಸಾ ಶುಲ್ಕದಲ್ಲಿ ಭಾರೀ ಏರಿಕೆ ಪ್ರಸ್ತಾಪ

ಇತರ ಮಹತ್ವದ ಬೆಳವಣಿಗೆಯಲ್ಲಿ, ಎಚ್-1ಬಿ (H-1B) ವೀಸಾ ಅರ್ಜಿಗಳ ಮೇಲೆ ಹೆಚ್ಚುವರಿಯಾಗಿ 1,03,265 ಡಾಲರ್ (ಸುಮಾರು 99 ಲಕ್ಷ ರೂಪಾಯಿ) ಶುಲ್ಕ ವಿಧಿಸಲು ಅಮೆರಿಕದ ಗೃಹರಕ್ಷಣೆ ಇಲಾಖೆ ಪ್ರಸ್ತಾಪಿಸಿದೆ. ಈ ಪ್ರಸ್ತಾಪವು ಅಂತಿಮವಾಗಿ ಜಾರಿಗೆ ಬಂದರೆ, ವಿದೇಶಿ ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅಮೆರಿಕದ ಕಂಪನಿಗಳ ಮೇಲೆ ಆರ್ಥಿಕ ಹೊರೆ ಅಪಾರವಾಗಿ ಹೆಚ್ಚಾಗಲಿದೆ. ವಿಶೇಷವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೀಸಾ ಪಡೆಯುವ ಭಾರತೀಯ ವೃತ್ತಿಪರರ ಮೇಲೆ ಇದು ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದ ಅಂಗೀಕೃತ ಸಂಶೋಧನಾ ಸಂಸ್ಥೆಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ೩೦ ದಿನಗಳ ಕಾಲಾವಕಾಶ ನೀಡಲಾಗಿದೆ.

ಕಾನೂನು ಸವಾಲುಗಳು ಮತ್ತು ಟೀಕೆಗಳು

ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವ ಹಾಗೂ ದೇಶೀಯ ಆಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಈ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಆಡಳಿತ ಸಮರ್ಥಿಸಿಕೊಂಡಿದೆ. ಆದರೆ, ಈ ನೀತಿಗಳು ತಾರತಮ್ಯದಿಂದ ಕೂಡಿವೆ ಹಾಗೂ ವಾಕ್ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಮಧ್ಯೆ, 75 ದೇಶಗಳ ವಲಸೆ ವೀಸಾ ವಿತರಣೆಯನ್ನು ಅಮಾನತುಗೊಳಿಸಿದ್ದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಆದೇಶವನ್ನು ಅಮೆರಿಕದ ನ್ಯಾಯಾಲಯವೊಂದು ಆಗಸ್ಟ್ ೨೧ರಂದು ವಜಾಗೊಳಿಸಿದ್ದು, ಟ್ರಂಪ್ ಆಡಳಿತದ ಬಿಗಿ ವಲಸೆ ನೀತಿಗಳಿಗೆ ಆರಂಭಿಕ ಹಿನ್ನಡೆಯುಂಟಾಗಿದೆ.

Read More
Next Story