ಮುಖಾಮುಖಿ ಡಿಕ್ಕಿಯಾದ ಎರಡು ನೌಕಾಪಡೆಯ ಯುದ್ಧ ವಿಮಾನಗಳು- ವಿಡಿಯೋ ವೈರಲ್
x

ಮುಖಾಮುಖಿ ಡಿಕ್ಕಿಯಾದ ಎರಡು ನೌಕಾಪಡೆಯ ಯುದ್ಧ ವಿಮಾನಗಳು- ವಿಡಿಯೋ ವೈರಲ್

ಯುಎಸ್‌ನ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ನಲ್ಲಿ ನಡೆದ ಏರ್ ಶೋ ವೇಳೆ ನೌಕಾಪಡೆಯ ಎರಡು EA-18G ಗ್ರೌಲರ್ ಯುದ್ಧ ವಿಮಾನಗಳು ಗಾಳಿಯಲ್ಲೇ ಮುಖಾಮುಖಿ ಡಿಕ್ಕಿಯಾಗಿವೆ. ಪೈಲಟ್‌ಗಳು ಪಾರಾಗಿದ್ದು, ಭೀಕರ ಅಪಘಾತದ ವಿಡಿಯೋ ವೈರಲ್ ಆಗಿದೆ.


ವೆಸ್ಟರ್ನ್ ಐಡಾಹೋದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ನಲ್ಲಿ ಭಾನುವಾರ ನಡೆದ ವೈಮಾನಿಕ ಪ್ರದರ್ಶನದ (Air Show) ವೇಳೆ ಯುಎಸ್ ನೌಕಾಪಡೆಯ (US Navy) ಎರಡು ಅತ್ಯಾಧುನಿಕ ಯುದ್ಧ ವಿಮಾನಗಳು ಗಾಳಿಯಲ್ಲೇ ಮುಖಾಮುಖಿ ಡಿಕ್ಕಿಯಾಗಿ ಪತನಗೊಂಡಿವೆ. ಅದೃಷ್ಟವಶಾತ್, ಎರಡೂ ವಿಮಾನಗಳಲ್ಲಿದ್ದ ಒಟ್ಟು ನಾಲ್ವರು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಎಜೆಕ್ಟ್ (Eject) ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ:

ವಾಷಿಂಗ್ಟನ್‌ನ ವಿಡ್ಬೇ ಐಲ್ಯಾಂಡ್ನ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್ 129 ಗೆ ಸೇರಿದ ಎರಡು EA-18G ಗ್ರೌಲರ್ (EA-18G Growler) ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನೀಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿಮಾನಗಳು ಡಿಕ್ಕಿ ಹೊಡೆದ ತಕ್ಷಣ ಪೈಲಟ್ಗಳು ಪ್ಯಾರಾಚೂಟ್ ಮೂಲಕ ಕೆಳಗೆ ಜಿಗಿದಿದ್ದಾರೆ. ಪ್ರಸ್ತುತ ನಾಲ್ವರೂ ಸಿಬ್ಬಂದಿ ಸ್ಥಿರವಾಗಿದ್ದಾರೆ ಎಂದು ಬೇಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ, ಒಟ್ಟಿಗೆ ತಲೆಕೆಳಗಾಗಿ ಸುತ್ತುತ್ತಾ ಕೆಳಗೆ ಬೀಳುವ ದೃಶ್ಯ ಹಾಗೂ ಪೈಲಟ್ಗಳ ನಾಲ್ಕು ಪ್ಯಾರಾಚೂಟ್ಗಳು ಆಕಾಶದಲ್ಲಿ ತೆರೆದುಕೊಳ್ಳುವ ದೃಶ್ಯಗಳು ಸೆರೆಯಾಗಿವೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನಗಳು ಭಾರಿ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿವೆ.

ತನಿಖೆ ಮತ್ತು ಭದ್ರತೆ:

ಅಪಘಾತದ ಬೆನ್ನಲ್ಲೇ ಏರ್ ಫೋರ್ಸ್ ಬೇಸ್ ಅನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದ್ದು, ಪ್ರದರ್ಶನದ ಮುಂದಿನ ಭಾಗವನ್ನು ರದ್ದುಗೊಳಿಸಲಾಗಿದೆ. ಘಟನೆಯ ಕುರಿತು ನೌಕಾಪಡೆಯು ತನಿಖೆ ಆರಂಭಿಸಿದೆ. ಇಬ್ಬರೂ ವಿಮಾನಗಳ ಪೈಲಟ್ಗಳು ಬದುಕುಳಿದಿರುವುದರಿಂದ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಶೀಘ್ರದಲ್ಲೇ ಬೆಳಕಿಗೆ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏರ್ ಶೋ ಸುರಕ್ಷತೆ ಮತ್ತು ಇತಿಹಾಸ:

ಗನ್ ಫೈಟರ್ ಸ್ಕೈಸ್ ಈ ವೈಮಾನಿಕ ಪ್ರದರ್ಶನವು 2018 ರ ನಂತರ ಇದೇ ಮೊದಲ ಬಾರಿಗೆ ಈ ಬೇಸ್ನಲ್ಲಿ ಆಯೋಜಿಸಲಾಗಿತ್ತು. 2018 ರಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ಒಬ್ಬರು ಇಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಏರ್ ಶೋಸ್ ಪ್ರಕಾರ, ಯುಎಸ್ನಲ್ಲಿ ಏರ್ ಶೋ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 1991 ರಿಂದ 2006 ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 3.8 ಸಾವುಗಳು ಸಂಭವಿಸುತ್ತಿದ್ದವು, ಆದರೆ 2017 ರ ನಂತರ ಈ ಸರಾಸರಿ 1.1 ಕ್ಕೆ ಇಳಿದಿದೆ. ವಿಶೇಷವೆಂದರೆ, 1952 ರ ನಂತರ ಯುಎಸ್ ಏರ್ ಶೋಗಳಲ್ಲಿ ಯಾವುದೇ ವೀಕ್ಷಕರು (Spectator) ಪ್ರಾಣ ಕಳೆದುಕೊಂಡಿಲ್ಲ.

Read More
Next Story