
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಸುಪ್ರೀಂ ಲೀಡರ್ ಮಸೂದ್ ಹೊಸೇನಿ ಖಮೇನಿ
ಒಪ್ಪಂದ ಉಲ್ಲಂಘಿಸಿದರೆ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡಲು ಸಜ್ಜು: ಇರಾನ್
ದಶಕಗಳಷ್ಟು ಹಳೆಯ ವೈರಿಗಳ ನಡುವಿನ ಯುದ್ಧವು ಮತ್ತೆ ಪುನರಾರಂಭವಾದ ಹಿನ್ನೆಲೆಯಲ್ಲಿ ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಘಾಲಿಬಾಫ್ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ "ಮುಗಿದಿದೆ" ಎಂದು ಘೋಷಿಸಿದ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ಕವಿದಿದೆ. ಅಮೆರಿಕದ ಈ ಏಕಪಕ್ಷೀಯ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ವಾಷಿಂಗ್ಟನ್ ಯಾವುದೇ ರೀತಿಯ ಒಪ್ಪಂದ ಅಥವಾ ಬದ್ಧತೆಗಳನ್ನು ಉಲ್ಲಂಘಿಸಿದರೆ ಅದಕ್ಕೆ ತಕ್ಕುದಾದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡಿದೆ.
"ಯಾವುದೇ ಯುಎಸ್ ಬದ್ಧತೆಗಳ ಉಲ್ಲಂಘನೆಯನ್ನು ನಮ್ಮ ಪರಸ್ಪರ ಕ್ರಮದಿಂದಲೇ ಎದುರಿಸಲಾಗುವುದು" ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರು ಅಲ್ಲಿನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಟ್ರಂಪ್ ಅವರ ಕದನ ವಿರಾಮ ಮುಕ್ತಾಯದ ಹೇಳಿಕೆಗೆ ಇರಾನ್ ತಕ್ಕ ತಿರುಗೇಟು ನೀಡಿದೆ.
ಟ್ರಂಪ್ ಹೇಳಿಕೆ ನಿರಾಕರಿಸಿದ ಇರಾನ್
ಮಾತುಕತೆಗಳನ್ನು ಮುಂದುವರಿಸಲು ಇರಾನ್ ಅಮೆರಿಕವನ್ನು ವಿನಂತಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ. "ನಾವು ಅಮೆರಿಕದೊಂದಿಗೆ ಯಾವುದೇ ಮಾತುಕತೆಗಾಗಿ ವಿನಂತಿಸಿಲ್ಲ. ಕೇವಲ ಕತಾರ್ ಮಧ್ಯವರ್ತಿಗಳ ಇರಾನ್ ಪ್ರವಾಸವನ್ನು ಮಾತ್ರ ನಾವು ಒಪ್ಪಿಕೊಂಡಿದ್ದೇವೆ ಅಷ್ಟೇ" ಎಂದು ಇರಾನ್ ಸಚಿವಾಲಯ ಸ್ಪಷ್ಟಪಡಿಸಿದೆ.
'ಇರಾನ್‌ನ ಶರಣಾಗತಿಯೊಂದಿಗೆ ಯುದ್ಧ ಕೊನೆಗೊಳ್ಳುವುದಿಲ್ಲ'
ದಶಕಗಳಷ್ಟು ಹಳೆಯ ವೈರಿಗಳ ನಡುವಿನ ಯುದ್ಧವು ಮತ್ತೆ ಪುನರಾರಂಭವಾದ ಹಿನ್ನೆಲೆಯಲ್ಲಿ ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಘಾಲಿಬಾಫ್ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. "ಯುದ್ಧವನ್ನು ಕೊನೆಗೊಳಿಸುವುದು ಇಡೀ ಜಗತ್ತಿನ ಆದ್ಯತೆಯಾಗಿದೆ. ಆದರೆ ಈ ಮುಖಾಮುಖಿಯು ಇರಾನ್‌ನ ಶರಣಾಗತಿಯೊಂದಿಗೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದಿರಬೇಕು" ಎಂದು ಅವರು ಪ್ರತಿಪಾದಿಸಿದ್ದಾರೆ.
"ಅಮೆರಿಕನ್ನರು ಒಪ್ಪಂದಕ್ಕೆ ದ್ರೋಹ ಮಾಡಿದಾಗಲೆಲ್ಲಾ, ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ನಾವು ಅವರ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಮತ್ತು ಇರಾನ್ ಜನರ ಹಕ್ಕುಗಳನ್ನು ರಕ್ಷಿಸುತ್ತೇವೆ" ಎಂದು ಅವರು ಗುಡುಗಿದ್ದಾರೆ. ಅಲ್ಲದೆ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಇರಾನ್‌ಗೆ "ಅಮೆರಿಕದ ಮೇಲೆ ಯಾವುದೇ ನಂಬಿಕೆ ಇಲ್ಲ" ಎಂಬುದನ್ನು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ ಅವರು, "ನನ್ನ ದೃಷ್ಟಿಕೋನದಲ್ಲಿ, ಅಮೆರಿಕದೊಂದಿಗೆ ಮಾತುಕತೆ ನಡೆಸಬಲ್ಲವರು ಯುದ್ಧಕ್ಕೆ ಸಿದ್ಧರಾಗಿರುವವರು ಮಾತ್ರ" ಎಂದು ಹೇಳಿದ್ದಾರೆ.
ಅಮೆರಿಕ ಜೊತೆ ಶಾಂತಿ ಮಾತುಕತೆ ಎಂದರೆ ದೇಶದ್ರೋಹ!
"ಇಸ್ಲಾಮಿಕ್ ಗಣರಾಜ್ಯವು ಮಾತುಕತೆಗಳ ಬಗ್ಗೆ ಮಾತನಾಡುತ್ತಿದ್ದರೆ ಅದು ಶಾಂತಿಗಾಗಿ ಅಲ್ಲ. ನಾವು ಕ್ರಿಮಿನಲ್ ಅಮೆರಿಕದೊಂದಿಗೆ ಶಾಂತಿ ಸ್ಥಾಪಿಸಲು ಸಾಧ್ಯವೇ? ನಮ್ಮ ಗುರುತು 'ದುರಹಂಕಾರದೊಂದಿಗೆ ರಾಜಿ ಮಾಡಿಕೊಳ್ಳದಿರುವುದು'. ಇಲ್ಲಿ ಮಾತುಕತೆ ಎಂದರೆ ಯುದ್ಧ, ಮತ್ತು ಯುದ್ಧವು ವಿಭಿನ್ನ ರೂಪಗಳನ್ನು ಹೊಂದಿದೆ. ಅಮೆರಿಕದೊಂದಿಗೆ ಶಾಂತಿ ತಲುಪಲು ಮಾತುಕತೆ ನಡೆಸಲು ಬಯಸುವ ಯಾರೇ ಆದರೂ ಅವರು ದೇಶದ್ರೋಹಿಗಳು" ಎಂದು ಖಮೇನಿ ಅವರ ಆಪ್ತರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿದ ಯುಎಸ್-ಇರಾನ್ ಉದ್ವಿಗ್ನತೆ
ಕಳೆದ ತಿಂಗಳು ಇರಾನ್-ಯುಎಸ್ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದಲೂ, ಎರಡೂ ಕಡೆಯವರು ಮಧ್ಯಪ್ರಾಚ್ಯದಲ್ಲಿ ಗುಂಡಿನ ಚಕಮಕಿ ನಡೆಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಕದನ ವಿರಾಮವು ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿದೆ. ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅವರ ವಾರಪೂರ್ತಿ ನಡೆದ ಅಂತ್ಯಕ್ರಿಯೆಯ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಗುಂಡಿನ ಚಕಮಕಿ ಕಡಿಮೆಯಾಗಿತ್ತು. ಆದರೆ, ಅಂತ್ಯಕ್ರಿಯೆ ಮುಗಿದ ಮರುದಿನವೇ ಇರಾನ್‌ನಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ನಿರಾಕರಿಸಿದೆ.
ಮತ್ತೊಂದೆಡೆ, ಉದ್ವಿಗ್ನತೆಯ ನಡುವೆಯೂ ಇರಾನ್‌ನೊಂದಿಗೆ ಹೆಚ್ಚಿನ ಮಾತುಕತೆ ನಡೆಸಲು ಅಧ್ಯಕ್ಷ ಟ್ರಂಪ್ ಒಪ್ಪಿಕೊಂಡಿದ್ದಾರೆ. ಇದರ ಭಾಗವಾಗಿ ಮಧ್ಯವರ್ತಿ ಕತಾರ್ ದೇಶದ ನಿಯೋಗವೊಂದು ಶುಕ್ರವಾರವಷ್ಟೇ ಮಾತುಕತೆಗಾಗಿ ಇರಾನ್‌ಗೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಇರಾನ್ ಹಾಗೂ ಯುಎಸ್ ನಡುವಿನ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

