6 ಬಿಲಿಯನ್ ಡಾಲರ್ ಆಸ್ತಿ ಬಿಡುಗಡೆ: ಅಮೆರಿಕ-ಇರಾನ್ ನಡುವೆ ಹೊಸ ಒಪ್ಪಂದದ ಭರವಸೆ
x

6 ಬಿಲಿಯನ್ ಡಾಲರ್ ಆಸ್ತಿ ಬಿಡುಗಡೆ: ಅಮೆರಿಕ-ಇರಾನ್ ನಡುವೆ ಹೊಸ ಒಪ್ಪಂದದ ಭರವಸೆ

ಅಮೆರಿಕದೊಂದಿಗೆ ಯಾವುದೇ ಮಟ್ಟದ ಮಾತುಕತೆ ನಡೆಸುವ ಬಗ್ಗೆ ಒಪ್ಪಿಕೊಂಡಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯು ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ, ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.


Click the Play button to hear this message in audio format

ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿನ ಯುದ್ಧ ಪರಿಸ್ಥಿತಿ ಮತ್ತು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮಿತಿಮೀರಿರುವ ಬೆನ್ನಲ್ಲೇ, ಎರಡೂ ದೇಶಗಳು ಈ ವಾರ ಕತಾರ್‌ಗೆ ನಿಯೋಗಗಳನ್ನು ಕಳುಹಿಸುವುದಾಗಿ ಪ್ರಕಟಿಸಿವೆ. ಆದರೆ, ಅಮೆರಿಕದೊಂದಿಗೆ ಯಾವುದೇ ಮಟ್ಟದ ಮಾತುಕತೆ ನಡೆಸುವ ಬಗ್ಗೆ ತಾವು ಒಪ್ಪಿಕೊಂಡಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯು ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಕತಾರ್‌ನ ದೋಹಾದಲ್ಲಿ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವ್ಹಿಟ್ ಅವರು, ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್‌ಕಾಫ್ ಮತ್ತು ಅಧ್ಯಕ್ಷರ ಅಳಿಯ ಜೇರೆಡ್ ಕುಶ್ನರ್ ಕತಾರ್‌ಗೆ ಪ್ರಯಾಣಿಸುತ್ತಿದ್ದಾರೆ ಎಂದಿದ್ದರು. ಆದರೆ, ಇರಾನ್ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದೆ. ಇರಾನ್‌ನ ಹಿರಿಯ ಸಂಧಾನಕಾರ ಕಾಜೆಮ್ ಘರಿಬಾಬಾದಿ ಅವರು ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್‌ಮಾಯಿಲ್ ಬಘೇಯ್ ಮಾತನಾಡಿ, "ನಾವು ಕತಾರ್‌ಗೆ ನಿಯೋಗವನ್ನು ಕಳುಹಿಸುತ್ತಿದ್ದೇವೆ, ಆದರೆ ಅದು ಅಮೆರಿಕದ ಜೊತೆಗಿನ ಮಾತುಕತೆಗಾಗಿ ಅಲ್ಲ. ಬದಲಿಗೆ, ತಾತ್ಕಾಲಿಕ ಒಪ್ಪಂದದ ನಿಯಮಗಳು ಮತ್ತು ಇರಾನ್‌ನ ಫ್ರೀಜ್ ಮಾಡಲಾದ ಆಸ್ತಿಯ ಬಿಡುಗಡೆಯ ಬಗ್ಗೆ ಚರ್ಚಿಸಲು ಹೋಗುತ್ತಿದ್ದೇವೆ. ಅಮೆರಿಕದೊಂದಿಗೆ ಯಾವುದೇ ಮಟ್ಟದ ಮಾತುಕತೆ ನಿಗದಿಯಾಗಿಲ್ಲ" ಎಂದು ಹೇಳಿದ್ದಾರೆ. ಈ ಹೇಳಿಕೆಯು ಎರಡೂ ದೇಶಗಳ ನಡುವಿನ ಅಂತರವನ್ನು ಎತ್ತಿ ತೋರಿಸಿದೆ.

ಹಾರ್ಮುಜ್ ಜಲಸಂಧಿ ಮತ್ತು ಇಂಧನ ಬಿಕ್ಕಟ್ಟು

ಫೆ.28ರಂದು ಯುದ್ಧ ಪ್ರಾರಂಭವಾದಾಗಿನಿಂದ, ವಿಶ್ವದ ಶೇ. 20ರಷ್ಟು ತೈಲ ಸರಬರಾಜಾಗುವ ಹಾರ್ಮುಜ್ ಜಲಸಂಧಿಯು ಸಂಘರ್ಷದ ಕೇಂದ್ರಬಿಂದುವಾಗಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಹಡಗುಗಳ ಮೇಲೆ ದಾಳಿ ನಡೆಸಿದ್ದು, ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಕತಾರಿ ತೈಲ ಹೊತ್ತ ಟ್ಯಾಂಕರ್ ಮೇಲಿನ ಇರಾನ್ ದಾಳಿಯು ಅಮೆರಿಕದ ಪ್ರತೀಕಾರದ ವೈಮಾನಿಕ ದಾಳಿಗೆ ಕಾರಣವಾಯಿತು. ಭಾನುವಾರ ಇರಾನ್ ಬರ್ಹೈನ್ ಮತ್ತು ಕುವೈತ್ ಗುರಿಯಾಗಿಸಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಮಾತುಕತೆಗಳ ಮೇಲೆ ಕಪ್ಪು ಛಾಯೆ ಮೂಡಿಸಿತ್ತು. ಆದರೆ ಸೋಮವಾರ ಎರಡೂ ಕಡೆಯಿಂದ ದಾಳಿಗಳು ನಿಂತಿದ್ದು, ತುಸು ಶಾಂತಿಯುತ ವಾತಾವರಣ ಉಂಟಾಗಿದೆ.

6 ಬಿಲಿಯನ್ ಡಾಲರ್ ಆಸ್ತಿ ಬಿಡುಗಡೆ

ಈ ಮಧ್ಯೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಕತಾರ್‌ನಲ್ಲಿ ಇರಿಸಲಾಗಿರುವ ಇರಾನ್‌ನ 6 ಬಿಲಿಯನ್ ಡಾಲರ್ ಆಸ್ತಿಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಘೋಷಿಸಿದ್ದಾರೆ. ಈ ಹಣವನ್ನು ಇರಾನ್ ಜನರು ಆಹಾರ ಪದಾರ್ಥಗಳನ್ನು ಖರೀದಿಸಲು ಬಳಸಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಯುದ್ಧವನ್ನು ಕೊನೆಗೊಳಿಸುವ ಒಪ್ಪಂದದ ಒಂದು ಭಾಗವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸೇವಾ ಶುಲ್ಕ ವಿಧಿಸುವ ಬಗ್ಗೆ ಒಮಾನ್ ಮತ್ತು ಇರಾನ್ ಚರ್ಚಿಸುತ್ತಿವೆ. ನೀರು ಸುರಕ್ಷತೆ, ಮಾಲಿನ್ಯ ನಿಯಂತ್ರಣ ಮತ್ತು ಸಂಚಾರ ನೆರವು ನೀಡುವ ಬದಲಾಗಿ ಈ ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ. ಆದರೆ, ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಜಲಸಂಧಿಯಲ್ಲಿ ಯಾವುದೇ ಶುಲ್ಕ ವಿಧಿಸುವುದು ನಿಷಿದ್ಧ ಎಂದು ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್-ಬುಸೈದಿ ಒಪ್ಪಿಕೊಂಡಿದ್ದಾರೆ. ಆದರೂ, ಇದು ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಜಲಸಂಧಿಯಲ್ಲಿರುವ ಮೈನ್ಸ್‌ಗಳನ್ನು (ಬಿಗಿಯಾದ ಸ್ಫೋಟಕಗಳು) ತೆರವುಗೊಳಿಸಲು ಫ್ರಾನ್ಸ್ ಮುಂದಾಗಿರುವುದು ಇರಾನ್‌ನ ಕೆಂಗಣ್ಣಿಗೆ ಗುರಿಯಾಗಿದೆ. "ಈ ಕೆಲಸವನ್ನು ಇರಾನ್ ಮಾತ್ರ ಮಾಡಬೇಕು, ಬೇರೆ ಯಾವುದೇ ದೇಶಕ್ಕೆ ಅವಕಾಶವಿಲ್ಲ" ಎಂದು ಇರಾನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಇದು ಪ್ರತಿಕ್ರಿಯೆಯಾಗಿದೆ. ಮತ್ತೊಂದೆಡೆ, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು, ಇಸ್ರೇಲ್ ಜೊತೆಗಿನ ಒಪ್ಪಂದದಂತೆ ದಕ್ಷಿಣ ಗಡಿಯಲ್ಲಿ ಸೈನ್ಯವನ್ನು ನಿಯೋಜಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಆದರೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಈ ಒಪ್ಪಂದವನ್ನು ತಿರಸ್ಕರಿಸಿದೆ. ಹಿಜ್ಬುಲ್ಲಾ ನಿಶ್ಯಸ್ತ್ರೀಕರಣವಾದರೆ ಮಾತ್ರ ಇಸ್ರೇಲ್ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಒಪ್ಪಂದದಲ್ಲಿದೆ. ಈ ಪ್ರಯತ್ನವು ದೇಶದೊಳಗೆ ಅಂತರ್ಯುದ್ಧಕ್ಕೆ ದಾರಿ ಮಾಡಿಕೊಡಬಹುದು ಎಂದು ಹಿಜ್ಬುಲ್ಲಾ ಎಚ್ಚರಿಸಿದೆ.

Read More
Next Story