
ಶಾಂತಿ ಒಪ್ಪಂದಕ್ಕಾಗಿ ಇರಾನಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಭಾನುವಾರ ಮುಂಜಾನೆ ಸ್ವಿಟ್ಜರ್‌ಲ್ಯಾಂಡ್‌ನ ಲುಸೆರ್ನ್ ಬಳಿಯ ಒಬ್ಬುರ್ಗೆನ್‌ನಲ್ಲಿರುವ ಬ್ಯೂರ್ಗೆನ್‌ಸ್ಟಾಕ್ ರೆಸಾರ್ಟ್‌ಗೆ ಆಗಮಿಸಿದರು.
ಪಶ್ಚಿಮ ಏಷ್ಯಾ ಜಾಗತಿಕ ರಾಜತಾಂತ್ರಿಕ ನಡೆ: ಅಮೆರಿಕ-ಇರಾನ್ ಮಹತ್ವದ ಶಾಂತಿ ಮಾತುಕತೆ ಆರಂಭ
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್‌ನ ಪ್ರಮುಖ ಸಮಾಲೋಚಕ ಮೊಹಮ್ಮದ್ ಬಕರ್ ಖಲೀಬಾಫ್ ನೇತೃತ್ವದ ನಿಯೋಗಗಳು ಈಗಾಗಲೇ ಸ್ವಿಟ್ಜರ್‌ಲ್ಯಾಂಡ್ ತಲುಪಿದ್ದು, ಮಾತುಕತೆ ಆರಂಭಿಸಿವೆ.
ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾನುವಾರ ಅತ್ಯಂತ ನಿರ್ಣಾಯಕ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಲೆಬನಾನ್‌ನಲ್ಲಿ ಘೋಷಿಸಲಾಗಿದ್ದ ಕದನ ವಿರಾಮವು ಮುರಿದುಬೀಳುವ ಭೀತಿಯಲ್ಲಿದ್ದರೂ, ಅಮೆರಿಕ ಮತ್ತು ಇರಾನ್ ದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಹತ್ವದ ಶಾಂತಿ ಶೃಂಗಸಭೆಗಾಗಿ ಒಟ್ಟಾಗಿ ಕುಳಿತಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್‌ನ ಪ್ರಮುಖ ಸಮಾಲೋಚಕ ಮೊಹಮ್ಮದ್ ಬಕರ್ ಖಲೀಬಾಫ್ ನೇತೃತ್ವದ ನಿಯೋಗಗಳು ಈಗಾಗಲೇ ಸ್ವಿಟ್ಜರ್‌ಲ್ಯಾಂಡ್ ತಲುಪಿದ್ದು, ಮಾತುಕತೆ ಆರಂಭಿಸಿವೆ. ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಈ ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಸ್ವಿಟ್ಜರ್‌ಲ್ಯಾಂಡ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಹಾರ್ಮುಜ್ ಜಲಸಂಧಿ: ಉಲ್ಬಣಗೊಂಡ ಹೊಸ ಉದ್ವಿಗ್ನತೆ
ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯ ಮೇಲಿನ ಹತೋಟಿ ಜಾಗತಿಕ ಮಟ್ಟದಲ್ಲಿ ಹೊಸ ಆತಂಕ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ 60 ದಿನಗಳ ತಾತ್ಕಾಲಿಕ ಕದನ ವಿರಾಮ ಒಪ್ಪಂದ ನಡೆದಿತ್ತು.
ಆದರೆ, ಶನಿವಾರ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಅಮೆರಿಕ ತನ್ನ ಬದ್ಧತೆಗಳನ್ನು ಮೀರುತ್ತಿದೆ ಎಂದು ಆರೋಪಿಸಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಯುಎಸ್ ಮಿಲಿಟರಿ, ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದೆ. ಈ ಜಲಮಾರ್ಗದ ಮೂಲಕ ನಿತ್ಯ 17 ಮಿಲಿಯನ್ ಬ್ಯಾರೆಲ್‌ಗೂ ಹೆಚ್ಚು ತೈಲ ಸಾಗಣೆಯಾಗುತ್ತಿದ್ದು, ಅಮೆರಿಕದ ಪಡೆಗಳು ಇದಕ್ಕೆ ರಕ್ಷಣೆ ನೀಡುತ್ತಿವೆ. ಆದಾಗ್ಯೂ, ವಾಷಿಂಗ್ಟನ್‌ನಿಂದ ಹೊರಡುವ ಮುನ್ನ ಮಾತನಾಡಿದ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್, "ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ ಎನ್ನಲು ಯಾವುದೇ ಸಾಕ್ಷ್ಯಗಳಿಲ್ಲ. ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಲೆಬನಾನ್ ಕದನ ವಿರಾಮದ ವಿಷಯದಲ್ಲಿ ಈ ಮಾತುಕತೆಯು ಸಕಾರಾತ್ಮಕ ಪ್ರಗತಿ ಕಾಣುವ ಆಶಾವಾದವಿದೆ" ಎಂದು ಹೇಳಿದ್ದಾರೆ.
ಮೊದಲ ದಿನವೇ ಹಳಿ ತಪ್ಪಿದ ಕದನ ವಿರಾಮ!
ಈ ಜಾಗತಿಕ ರಾಜತಾಂತ್ರಿಕ ಸಭೆಗೆ ಮುನ್ನುಡಿಯಾಗಿದ್ದ ಇಸ್ರೇಲ್-ಲೆಬನಾನ್ ಕದನ ವಿರಾಮವು ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಧೂಳೀಪಟವಾಗಿದೆ. ಹಿಜ್ಬೊಲ್ಲಾ ಸಂಘಟನೆ ರಾತ್ರಿ ವೇಳೆ 50ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ 20 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಪಡೆ ವರದಿ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಶಪಡಿಸಿಕೊಂಡ ಲೆಬನಾನ್ ಪ್ರದೇಶದಲ್ಲಿ ತನ್ನ ಮಿಲಿಟರಿ ಸ್ಥಾನಗಳನ್ನು ಕಾಯ್ದುಕೊಳ್ಳಲು ಸೈನ್ಯಕ್ಕೆ ಆದೇಶಿಸಿದ್ದಾರೆ.
ಪ್ರಧಾನಿ ನೆತನ್ಯಾಹು ವಿರುದ್ಧ ಇಸ್ರೇಲ್ ಜನತೆಯ ಆಕ್ರೋಶ
ಮತ್ತೊಂದೆಡೆ, ಯುದ್ಧದ ವಿಚಾರವಾಗಿ ಇಸ್ರೇಲ್ ದೇಶದ ಒಳಗಡೆಯೇ ಪ್ರಧಾನಿ ನೆತನ್ಯಾಹು ವಿರುದ್ಧ ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಹೀಬ್ರೂ ವಿಶ್ವವಿದ್ಯಾಲಯ ನಡೆಸಿದ ವಿಶೇಷ ಸಮೀಕ್ಷೆಯ ಆಘಾತಕಾರಿ ಮುಖ್ಯಾಂಶಗಳೆಂದರೆ, ಇಸ್ರೇಲ್-ಯುಎಸ್ ಜಂಟಿ ಮಿಲಿಟರಿ ಕಾರ್ಯಾಚರಣೆಯಿಂದ ಇಸ್ರೇಲ್‌ಗಿಂತ ಇರಾನ್ ದೇಶವೇ ಹೆಚ್ಚು ಲಾಭ ಮಾಡಿಕೊಂಡಿದೆ ಎಂದು ಶೇ. 92 ಇಸ್ರೇಲಿಗಳು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದ ಇಸ್ರೇಲ್‌ನ ಮುಖ್ಯ ಉದ್ದೇಶಗಳು ಇನ್ನೂ ಸಾಧನೆಯಾಗಿಲ್ಲ ಎಂದು ಶೇ.90 ಕ್ಕೂ ಹೆಚ್ಚು ಜನರು ಭಾವಿಸಿದ್ದಾರೆ. ಯುದ್ಧದಲ್ಲಿ ಇಸ್ರೇಲ್ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ ಎಂಬ ನೆತನ್ಯಾಹು ಅವರ ವಾದವನ್ನು ಶೇ. 70 ಕ್ಕೂ ಹೆಚ್ಚು ಜನರು ತಳ್ಳಿಹಾಕಿದ್ದಾರೆ.

