
ಹಾರ್ಮುಜ್ ಜಲಸಂಧಿ
ಹಾರ್ಮುಜ್ ಜಲಸಂಧಿ ಸಂಘರ್ಷ: ಇರಾನ್ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಭೀಕರ ವಾಯುದಾಳಿ
ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಕಂಟೇನರ್ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಭಾನುವಾರ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ. ಭಾನುವಾರ ತಡರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು ಮೂರು ಸುತ್ತಿನ ಭೀಕರ ದಾಳಿಗಳು ನಡೆದಿದ್ದು, ಕ್ಷಿಪಣಿ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಇರಾನಿನ ಕ್ರಾಂತಿಕಾರಿ ಗಾರ್ಡ್ ನೌಕೆಗಳನ್ನು ಗುರಿಯಾಗಿಸಿಕೊಂಡು ಸುಮಾರು 140 ತಾಣಗಳನ್ನು ಯುಎಸ್ ಮಿಲಿಟರಿ ಧ್ವಂಸಗೊಳಿಸಿದೆ.
ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ದಾಳಿಯಲ್ಲಿ ತನ್ನ ನೌಕಾಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಪ್ರತಿಕಾರ
ಅಮೆರಿಕದ ದಾಳಿಯಿಂದ ಕೆರಳಿದ ಇರಾನ್, ಯುಎಸ್ ಸೇನಾ ನೆಲೆಗಳನ್ನು ಹೊಂದಿರುವ ಬಹ್ರೇನ್, ಕುವೈತ್, ಕತಾರ್, ಜೋರ್ಡಾನ್ ಮತ್ತು ಓಮನ್ ಸೇರಿದಂತೆ ಪ್ರಾದೇಶಿಕ ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಯುದ್ಧವನ್ನು ತೀವ್ರಗೊಳಿಸಿದೆ. ಇರಾನ್ ದಾಳಿಯಿಂದ ಕುವೈತ್‌ನ ಮೂರು ಭೂ ಗಡಿ ಪೋಸ್ಟ್‌ಗಳು ಹಾಗೂ ತೈಲ ಕಂಪನಿಗೆ ಹಾನಿಯಾಗಿದ್ದು, ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ. ಕತಾರ್ ಮಿಲಿಟರಿಯು ಒಳಬರುವ ಇರಾನಿನ ಕ್ಷಿಪಣಿಗಳನ್ನು ತಡೆದಿದ್ದು, ಈ ವೇಳೆ ಬಿದ್ದ ಚೂರುಗಳಿಂದ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ನೆರೆಯ ಯುಎಇನಲ್ಲೂ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ.
ಜೋರ್ಡಾನ್ ಮೇಲೆ ದಾಳಿ
ಜೋರ್ಡಾನ್ ಮೇಲೂ ಇರಾನ್‌ನ ಮೂರು ಕ್ಷಿಪಣಿಗಳು ಅಪ್ಪಳಿಸಿದ್ದು, ಅಲ್ಪ ಹಾನಿಯಾಗಿದೆ. ಅಮೆರಿಕ ನೌಕಾಪಡೆಯ 5ನೇ ಪಡೆಯ ನೆಲೆ ಇರುವ ಬಹ್ರೇನ್‌ನಲ್ಲಿ ಕ್ಷಿಪಣಿ ಎಚ್ಚರಿಕೆ ನೀಡಲಾಗಿದೆ. ಇರಾನ್‌ನ ಈ ಬೇಜವಾಬ್ದಾರಿಯುತ ಕೃತ್ಯವನ್ನು ಖಂಡಿಸಿ ಓಮನ್ ಸರ್ಕಾರವು ಇರಾನಿನ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಭಾರತೀಯ ಸಿಬ್ಬಂದಿ ನಾಪತ್ತೆ
ಇದಕ್ಕೂ ಮುನ್ನ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಪಡೆಗಳು ಸೈಪ್ರಸ್ ಧ್ವಜದ ಕಂಟೇನರ್ ಹಡಗಿನ ಮೇಲೆ ದಾಳಿ ನಡೆಸಿದ್ದವು. ಇದರಿಂದ ಹಡಗಿನ ಎಂಜಿನ್ ಕೋಣೆಗೆ ತೀವ್ರ ಹಾನಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಓಮನ್ ಕಡಲ ಪ್ರಾಧಿಕಾರವು ಹಡಗಿನಲ್ಲಿದ್ದ 23 ಸಿಬ್ಬಂದಿಯನ್ನು ರಕ್ಷಿಸದರೂ, ಒಬ್ಬ ಸಿಬ್ಬಂದಿ ಕಾಣೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿ ಭಾರತೀಯ ಪ್ರಜೆ ಎಂದು ಭಾರತದ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.
ಜಲಸಂಧಿ ಬಂದ್ ಎಂದ ಇರಾನ್
ಶಾಂತತೆ ಮರಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ತನ್ನ ನೀರಲ್ಲೇ ಹಡಗು ಸಂಚಾರ ನಿಯಂತ್ರಣ ಇರಲಿದೆ ಎಂದು ಇರಾನ್ ಘೋಷಿಸಿದೆ. ಆದರೆ ಜಲಸಂಧಿ ಮುಕ್ತವಾಗಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಈ ದಿಢೀರ್ ಸಂಘರ್ಷದಿಂದಾಗಿ ಇರಾನ್ ಮತ್ತು ಯುಎಸ್ ನಡುವೆ ಯುದ್ಧ ಕೊನೆಗೊಳಿಸಲು ನಡೆಯುತ್ತಿದ್ದ 60 ದಿನಗಳ ಮಧ್ಯಂತರ ಒಪ್ಪಂದದ ಮಾತುಕತೆಗಳು ಸಂಪೂರ್ಣ ಕುಸಿತದ ಅಂಚಿಗೆ ತಲುಪಿವೆ.
"ಪೂರ್ಣ ಪ್ರಮಾಣದ ಹಗೆತನಕ್ಕೆ ಮರಳುವುದು ಜಾಗತಿಕವಾಗಿ ದುರಂತ ಪರಿಣಾಮಗಳನ್ನು ಬೀರುತ್ತದೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನ, ಕತಾರ್ ಮತ್ತು ಈಜಿಪ್ಟ್ ರಾಷ್ಟ್ರಗಳು ಉಭಯ ದೇಶಗಳ ನಡುವೆ ಸಂಘರ್ಷ ತಣಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿವೆ.

