ಗ್ರೀನ್ ಕಾರ್ಡ್ ನಿಯಮ ಬದಲಾವಣೆ ಗೊಂದಲ: ಅಮೆರಿಕ ಸ್ಪಷ್ಟನೆ, ವಲಸಿಗರು ನಿರಾಳ
x

ಗ್ರೀನ್ ಕಾರ್ಡ್ ನಿಯಮ ಬದಲಾವಣೆ ಗೊಂದಲ: ಅಮೆರಿಕ ಸ್ಪಷ್ಟನೆ, ವಲಸಿಗರು ನಿರಾಳ

ಗ್ರೀನ್‌ ಕಾರ್ಡ್‌ ಸಂಬಂಧ ಸಾರ್ವಜನಿಕವಾಗಿ ಮತ್ತು ಕಾನೂನು ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ, ಗೃಹ ಇಲಾಖೆ ಸ್ಪಷ್ಟಪಡಿಸಿದೆ. ಇದು ಯಾವುದೇ ಹೊಸ ಕಠಿಣ ಕಾನೂನಲ್ಲ ಎಂದು ಇಲಾಖೆ ತಿಳಿಸಿದೆ.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ವಲಸೆ ನೀತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಚರ್ಚೆಗಳು ಜಾಗತಿಕವಾಗಿ ಸದ್ದು ಮಾಡುತ್ತಿವೆ. ಕಳೆದ ವಾರ, ಅಮೆರಿಕದಲ್ಲಿ ನೆಲೆಸಿ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಲಕ್ಷಾಂತರ ವಿದೇಶಿಯರಲ್ಲಿ ಆತಂಕ ಮೂಡುವಂತಹ ಸುದ್ದಿಯೊಂದು ಹರಿದಾಡಿತ್ತು. ಗ್ರೀನ್ ಕಾರ್ಡ್ ಪಡೆಯಲು ಬಯಸುವವರು ಇನ್ನು ಮುಂದೆ ಅಮೆರಿಕದಲ್ಲಿ ಉಳಿಯುವಂತಿಲ್ಲ ಮತ್ತು ತಮ್ಮ ತಾಯ್ನಾಡಿಗೆ ತೆರಳಿ ಅರ್ಜಿ ಸಲ್ಲಿಸಬೇಕು ಎಂಬ ಹೇಳಿಕೆ ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಈಗ ಈ ಕುರಿತು ಅಮೆರಿಕದ ಗೃಹ ಇಲಾಖೆ ನೀಡಿರುವ ಸ್ಪಷ್ಟನೆಯು ಪರಿಸ್ಥಿತಿಯನ್ನು ತಿಳಿಗೊಳಿಸಿದೆ.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಕ್ತಾರ ಝಾಕ್ ಕಹ್ಲರ್ ಅವರ ಹೇಳಿಕೆಯಿಂದ ಗೊಂದಲವು ಪ್ರಾರಂಭವಾಯಿತು. ಅವರು ಬ್ಲೂಮ್‌ಬರ್ಗ್ ವರದಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ಇನ್ನು ಮುಂದೆ ತಾತ್ಕಾಲಿಕವಾಗಿ ಅಮೆರಿಕದಲ್ಲಿರುವ ವಿದೇಶಿಯರು ಗ್ರೀನ್ ಕಾರ್ಡ್ ಪಡೆಯಲು ಬಯಸಿದರೆ, ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ತಮ್ಮ ತಾಯ್ನಾಡಿಗೆ ಮರಳಿ ಅಲ್ಲಿಂದಲೇ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿಯ ಒಂದು ಭಾಗ ಎಂದು ವ್ಯಾಖ್ಯಾನಿಸಲಾಯಿತು. ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಕಾನೂನುಬಾಹಿರವಾಗಿ ಉಳಿಯುವವರನ್ನು ನಿಯಂತ್ರಿಸಲು ಈ ಬದಲಾವಣೆ ಅವಶ್ಯಕ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಸಾವಿರಾರು ಜನರ ಆತಂಕ

ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಮಂದಿ ಪ್ರಸ್ತುತ ಅಡ್ಜಸ್ಟ್‌ಮೆಂಟ್-ಆಫ್-ಸ್ಟೇಟಸ್ ಎಂಬ ಪ್ರಕ್ರಿಯೆಯ ಮೂಲಕ ಗ್ರೀನ್ ಕಾರ್ಡ್ ಪಡೆಯುತ್ತಾರೆ. ಉದ್ಯೋಗದಾತರು ಅಥವಾ ಅಮೆರಿಕದಲ್ಲಿರುವ ಕುಟುಂಬ ಸದಸ್ಯರ ಪ್ರಾಯೋಜಕತ್ವದಲ್ಲಿ, ತಾಯ್ನಾಡಿಗೆ ಮರಳದೆಯೇ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸುವುದು ಈ ವ್ಯವಸ್ಥೆಯ ವಿಶೇಷತೆ. 2024ರ ಅಂಕಿಅಂಶಗಳ ಪ್ರಕಾರ, ಸುಮಾರು 14 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಅದರಲ್ಲಿ ಬಹುಪಾಲು ಅರ್ಜಿಗಳು ಇದೇ ಪ್ರಕ್ರಿಯೆಯ ಮೂಲಕ ಅನುಮೋದನೆ ಪಡೆದಿವೆ. ಕಹ್ಲರ್ ಅವರ ಹೇಳಿಕೆಯಿಂದಾಗಿ, ಈ ಪ್ರಕ್ರಿಯೆಯು ಸಂಪೂರ್ಣವಾಗಿ ರದ್ದಾಗುತ್ತದೆಯೇ ಎಂಬ ಭೀತಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿತ್ತು.

ಡಿಎಚ್‌ಎಸ್ ಸ್ಪಷ್ಟನೆ

ಸಾರ್ವಜನಿಕವಾಗಿ ಮತ್ತು ಕಾನೂನು ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ, ಗೃಹ ಇಲಾಖೆ ವಿಷಯವನ್ನು ಸ್ಪಷ್ಟಪಡಿಸಿತು. ಈ ನಿರ್ದೇಶನವು ಯಾವುದೇ ಹೊಸ ಕಠಿಣ ಕಾನೂನಲ್ಲ ಅಥವಾ ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ ಎಂದು ಇಲಾಖೆ ತಿಳಿಸಿದೆ. ವಲಸೆ ಅಧಿಕಾರಿಗಳಿಗೆ ಈಗಾಗಲೇ ಇದ್ದ ವಿವೇಚನಾ ಅಧಿಕಾರವನ್ನು ಬಳಸುವಂತೆ ಮಾತ್ರ ನೆನಪಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಅಮೆರಿಕದಲ್ಲಿಯೇ ಇದ್ದು ಅರ್ಜಿ ಸಲ್ಲಿಸಬೇಕೋ ಅಥವಾ ತಾಯ್ನಾಡಿಗೆ ತೆರಳಬೇಕೋ ಎಂಬುದನ್ನು ನಿರ್ಧರಿಸುವ ಅಧಿಕಾರ ವಲಸೆ ಅಧಿಕಾರಿಗಳಿಗೆ ಮೊದಲಿನಿಂದಲೂ ಇದೆ. ಇದನ್ನು ಪ್ರಕರಣದಿಂದ ಪ್ರಕರಣಕ್ಕೆ ಅನ್ವಯಿಸಲಾಗುತ್ತದೆ ಹೊರತು, ಇದು ಸಾರ್ವತ್ರಿಕ ನಿಯಮವಲ್ಲ ಎಂದು ಡಿಎಚ್‌ಎಸ್ ಸ್ಪಷ್ಟಪಡಿಸಿದೆ.

ಗೊಂದಲಗಳನ್ನು ಶಮನಗೊಳಿಸಲು ಝಾಕ್ ಕಹ್ಲರ್ ನಂತರ ಇನ್ನೊಂದು ಹೇಳಿಕೆಯನ್ನು ನೀಡಿದರು. ಅಮೆರಿಕದ ಆರ್ಥಿಕತೆಗೆ ಕೊಡುಗೆ ನೀಡುವವರು, ಉದ್ಯೋಗದಾತರ ಪ್ರಾಯೋಜಕತ್ವ ಪಡೆದವರು ಅಥವಾ ರಾಷ್ಟ್ರೀಯ ಹಿತಾಸಕ್ತಿಯಿರುವ ವ್ಯಕ್ತಿಗಳು ವಿದೇಶಕ್ಕೆ ಹೋಗುವ ಅಗತ್ಯವಿಲ್ಲದೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿನಾಯಿತಿ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು. ಮೇ 21ರಂದು ಹೊರಡಿಸಿದ ಈ ಮೆಮೊ ವಿದ್ಯಾರ್ಥಿ ವೀಸಾ (F-1), ಪ್ರವಾಸೀ ವೀಸಾ (B-1/B-2) ಮತ್ತು ಹೆಚ್-1ಬಿ (H-1B) ವೀಸಾ ಹೊಂದಿರುವವರಲ್ಲಿ ಆತಂಕ ಉಂಟುಮಾಡಿತ್ತು.

ಎಚ್‌-1ಬಿ ವೀಸಾ ಹೊಂದಿರುವವರಿಗೆ ನಿರಾಳ

ಈ ಬೆಳವಣಿಗೆಯಿಂದ ಎಚ್-1ಬಿ ವೀಸಾ ಹೊಂದಿರುವ ಭಾರತೀಯ ವೃತ್ತಿಪರರು ನಿರಾಳರಾಗಿದ್ದಾರೆ. ಏಕೆಂದರೆ ಹೆಚ್-1ಬಿ ವೀಸಾದಲ್ಲಿ ಡ್ಯುಯಲ್ ಇಂಟೆಂಟ್ ಎಂಬ ಸೌಲಭ್ಯವಿದೆ. ಅಂದರೆ, ಒಬ್ಬ ವ್ಯಕ್ತಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಲೇ ಶಾಶ್ವತ ನಿವಾಸಕ್ಕಾಗಿ (ಗ್ರೀನ್ ಕಾರ್ಡ್) ಅರ್ಜಿ ಸಲ್ಲಿಸಬಹುದು. ಈ ವರ್ಗದವರಿಗೆ ಪ್ರಸ್ತುತ ಯಾವುದೇ ದೊಡ್ಡ ಅಪಾಯವಿಲ್ಲ ಎಂದು ವಲಸೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಿಎಚ್‌ಎಸ್ ಸ್ಪಷ್ಟನೆ ನೀಡಿದರೂ, ಗ್ರೀನ್ ಕಾರ್ಡ್ ಪ್ರಕ್ರಿಯೆಯಲ್ಲಿ ಮುಂದೆ ಏನೆಲ್ಲಾ ಬದಲಾವಣೆಗಳು ಬರಬಹುದು ಎಂಬ ಪ್ರಶ್ನೆಗಳು ಇನ್ನೂ ಉಳಿದುಕೊಂಡಿವೆ. ಟ್ರಂಪ್ ಆಡಳಿತವು ವಲಸೆ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸುವ ಇಂಗಿತವನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತದೆ. ಅಮೆರಿಕದಲ್ಲಿ ವಾಸಿಸುವ ವಿದೇಶಿಯರಿಗೆ, ತಮ್ಮ ವೀಸಾ ಸ್ಥಿತಿ ಮತ್ತು ಕಾನೂನುಬದ್ಧ ದಾಖಲೆಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕವಾಗಿದೆ.

Read More
Next Story