
ಪ್ರಪಂಚದಲ್ಲೇ ಆಫ್ರಿಕಾ ಅತಿ ದೊಡ್ಡ ಖಂಡ… ಬದಲಾಯ್ತು ವಿಶ್ವ ಭೂಪಟ
ವಿಶ್ವಸಂಸ್ಥೆಯು ಮಹಾಸಭೆಯು ಮೆರ್ಕೇಟರ್ ನಕ್ಷೆಯ ಬದಲಿಗೆ ಈಕ್ವಲ್ ಅರ್ಥ್ ನಕ್ಷೆಯನ್ನು ಬಳಸಲು ನಿರ್ಣಯ ಅಂಗೀಕರಿಸಿದೆ. ನಕ್ಷೆಯ ಬದಲಾವಣೆಗೆ ಕಾರಣ, ಅಮೆರಿಕದ ವಿರೋಧ ಮತ್ತು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವದ ಭೂಪಟದಲ್ಲಿ ಬದಲಾವಣೆ ತರಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ. ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಬಳಕೆಯಲ್ಲಿ ಕಾಲಕ್ರಮೇಣ ಬಳಕೆಯಲ್ಲಿರುವ ‘ಮೆರ್ಕೇಟರ್’ ವಿಶ್ವ ನಕ್ಷೆಯ ಬದಲಿಗೆ ‘ಈಕ್ವಲ್ ಅರ್ಥ್’ ನಕ್ಷೆಯನ್ನು ಬಳಸಲು ನಿರ್ಣಯ ಅಂಗೀಕರಿಸಿದೆ.
ಶುಕ್ರವಾರ ನಡೆದ ಮತದಾನದಲ್ಲಿ 164 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಅಮೆರಿಕ ವಿರೋಧವಾಗಿ ಮತ ಹಾಕಿದೆ. ಆರು ದೇಶಗಳು ಮತದಾನದಿಂದ ದೂರ ಉಳಿದಿವೆ.
ಮೆರ್ಕೇಟರ್ ನಕ್ಷೆ ಎಂದರೆ ಏನು? ಮತ್ತು ಅದರಲ್ಲಿದ್ದ ಲೋಪವೇನು?
1569 ರಲ್ಲಿ ಫ್ಲೆಮಿಷ್ ಕಾರ್ಟೋಗ್ರಾಫರ್ ಗೆರಾರ್ಡಸ್ ಮೆರ್ಕೇಟರ್ ಎಂಬುವರು ಈ ನಕ್ಷೆಯನ್ನು ರೂಪಿಸಿದರು. ಹಡಗು ಯಾನಿಗಳಿಗೆ (ಸಮುದ್ರಯಾನ) ದಿಕ್ಕು ಮತ್ತು ಕೋನಗಳನ್ನು ನಿಖರವಾಗಿ ತೋರಿಸುವುದು ಇದರ ಮೂಲ ಉದ್ದೇಶವಾಗಿತ್ತು.
ಗೋಳಾಕಾರದ ಭೂಮಿಯನ್ನು ಸಮತಟ್ಟಾದ ಕಾಗದದ ಮೇಲೆ ತಂದಾಗ ಈ ನಕ್ಷೆಯಲ್ಲಿ ಪ್ರದೇಶಗಳ ಗಾತ್ರವು ವಿಕೃತಗೊಳ್ಳುತ್ತದೆ ಎಂಬುದು ಅತಿ ದೊಡ್ಡ ಸಮಸ್ಯೆಯಾಗಿತ್ತು. ಸಮಭಾಜಕ ವೃತ್ತದಿಂದ ಧ್ರುವಗಳ ಕಡೆಗೆ ಹೋದಂತೆ ಭೂಪ್ರದೇಶಗಳು ನೈಜ ಗಾತ್ರಕ್ಕಿಂತ ಅತ್ಯಂತ ದೊಡ್ಡದಾಗಿ ಕಾಣಿಸುತ್ತವೆ.
ಉದಾಹರಣೆಗೆ ಮೆರ್ಕೇಟರ್ ನಕ್ಷೆಯಲ್ಲಿ 'ಗ್ರೀನ್‌ಲ್ಯಾಂಡ್' ಮತ್ತು ಇಡೀ 'ಆಫ್ರಿಕಾ ಖಂಡ' ಒಂದೇ ಗಾತ್ರದಲ್ಲಿ ಕಾಣಿಸುತ್ತವೆ. ಆದರೆ ವಾಸ್ತವದಲ್ಲಿ, ಆಫ್ರಿಕಾ ಖಂಡವು ಗ್ರೀನ್‌ಲ್ಯಾಂಡ್‌ಗಿಂತ 14 ಪಟ್ಟು ದೊಡ್ಡದಾಗಿದೆ. ಇದರಿಂದಾಗಿ ಯುರೋಪ್, ಉತ್ತರ ಅಮೆರಿಕ ಮತ್ತು ರಷ್ಯಾಗಳು ನೈಜ ಗಾತ್ರಕ್ಕಿಂತ ದೊಡ್ಡದಾಗಿ ಹಾಗೂ ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಭಾಗಗಳು ಚಿಕ್ಕದಾಗಿ ಕಾಣಿಸುತ್ತಿದ್ದವು.
‘ಈಕ್ವಲ್ ಅರ್ಥ್’ ನಕ್ಷೆ ಹೇಗೆ ವಿಭಿನ್ನವಾಗಿದೆ?
2018 ರಲ್ಲಿ ಭೂಗೋಳ ತಜ್ಞರು ಅಭಿವೃದ್ಧಿಪಡಿಸಿದ ಈ ನಕ್ಷೆಯು 'ಈಕ್ವಲ್-ಏರಿಯಾ ಪ್ರೊಜೆಕ್ಷನ್' ಮಾದರಿಯಲ್ಲಿದೆ. ಇದು ದೇಶಗಳು ಮತ್ತು ಖಂಡಗಳನ್ನು ಅವುಗಳ ನೈಜ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರದರ್ಶಿಸುತ್ತದೆ. ಈ ನಕ್ಷೆಯಲ್ಲಿ ಆಫ್ರಿಕಾ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾದ ಭೂಪ್ರದೇಶಗಳು ನೈಜ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸಿದರೆ, ಯುರೋಪ್ ಮತ್ತು ಉತ್ತರ ಅಮೆರಿಕಗಳು ತಮ್ಮ ನೈಜ ಅನುಪಾತಕ್ಕೆ ಸೂಕ್ತವಾಗಿ ಚಿಕ್ಕದಾಗಿ ಕಾಣಿಸುತ್ತವೆ.
ಆಫ್ರಿಕನ್ ದೇಶಗಳು ಬದಲಾವಣೆಗೆ ಪಟ್ಟು ಹಿಡಿದಿದ್ದು ಏಕೆ?
ಟೋಗೋ ದೇಶದ ವಿದೇಶಾಂಗ ಸಚಿವ ರಾಬರ್ಟ್ ಡುಸ್ಸೆ ಪ್ರಕಾರ, "ಸಮಾನತೆಯ ಜಗತ್ತು ನಿರ್ಮಾಣವಾಗಲು ಮೊದಲು ಸಮಾನತೆಯ ನಕ್ಷೆ ಅಗತ್ಯ. ನಕ್ಷೆಗಳು ಶಿಕ್ಷಣ ಮತ್ತು ಜನರ ಮಾನಸಿಕ ಗ್ರಹಿಕೆಯ ಮೇಲೆ ಪರಿಣಾಮ ಬೀರುತ್ತವೆ. ನೂರಾರು ವರ್ಷಗಳಿಂದ ಮೆರ್ಕೇಟರ್ ನಕ್ಷೆಯು ಭೂಗೋಳವನ್ನು ವಿಕೃತಗೊಳಿಸಿ ಆಫ್ರಿಕಾದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ತೋರಿಸಿತ್ತು.
ಇದು ಕೇವಲ ತಾಂತ್ರಿಕ ವಿಷಯವಲ್ಲ; ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ಜಾಗತಿಕ ವೇದಿಕೆಯಲ್ಲಿ ಆಫ್ರಿಕಾಕ್ಕೆ ಸೂಕ್ತ ಸ್ಥಾನ ಮತ್ತು ನ್ಯಾಯ ಒದಗಿಸುವ ಯತ್ನ ಎಂದು ಆಫ್ರಿಕನ್ ಯೂನಿಯನ್ ಹೇಳಿದೆ.
ಅಮೆರಿಕದ ವಿರೋಧ ಏಕೆ?
ಅಮೆರಿಕವು ಈ ನಿರ್ಣಯವನ್ನು ತೀವ್ರವಾಗಿ ಟೀಕಿಸಿದ್ದು, ವಿಶ್ವಸಂಸ್ಥೆಯು 16ನೇ ಶತಮಾನದ ನಕ್ಷೆಯ ಬದಲು ಜಾಗತಿಕ ಮಟ್ಟದ ನೈಜ ಸವಾಲುಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದೆ. ಅಮೆರಿಕದ ಪ್ರತಿನಿಧಿ ಯಾರಿನಾ ಫೆರೆನ್ಸೆವಿಚ್, ಇಂತಹ ಚರ್ಚೆಗಳಿಂದ ಸಂಸ್ಥೆಯ ವಿಶ್ವಾಸಾರ್ಹತೆ ಕುಸಿಯುತ್ತಿದೆ ಎಂದು ಆರೋಪಿಸಿದರು.
ಈ ನಿರ್ಧಾರ ಕಡ್ಡಾಯವೇ? ಮುಂದೆ ಏನಾಗಲಿದೆ?
• ಕಡ್ಡಾಯವಲ್ಲ: ಯುಎನ್ ನಿರ್ಣಯವು ಕಾನೂನುಬದ್ಧವಾಗಿ ಕಡ್ಡಾಯವಲ್ಲ. ಇದು ಯಾವುದೇ ಶಾಲೆ ಅಥವಾ ತಂತ್ರಜ್ಞಾನ ಕಂಪನಿಗಳಿಗೆ ತಕ್ಷಣ ನಕ್ಷೆ ಬದಲಾಯಿಸಲು ಬಲವಂತಪಡಿಸುವುದಿಲ್ಲ.
• ಸಮುದ್ರಯಾನಕ್ಕೆ ವಿನಾಯಿತಿ: ನೌಕಾಯಾನ ಮತ್ತು ವಿಮಾನಯಾನದಲ್ಲಿ ದಿಕ್ಕುಗಳನ್ನು ಗುರುತಿಸಲು ಮೆರ್ಕೇಟರ್ ನಕ್ಷೆಯ ಬಳಕೆ ಮುಂದುವರಿಯಲಿದೆ.
• ಮುಂದಿನ ಹೆಜ್ಜೆ: ಟೋಗೋ ತನ್ನ ಶಾಲಾ ಪಠ್ಯಪುಸ್ತಕಗಳಲ್ಲಿ ಈ ವರ್ಷದ ಅಂತ್ಯದೊಳಗೆ ನಕ್ಷೆಯನ್ನು ಬದಲಾಯಿಸಲಿದೆ. ಫ್ರಾನ್ಸ್ ಕೂಡ ಈ ನಿರ್ಣಯಕ್ಕೆ ಬೆಂಬಲ ನೀಡಿದ್ದು, ಮೆರ್ಕೇಟರ್ ನಕ್ಷೆಯ ಬಳಕೆಯನ್ನು ಕೈಬಿಡುವುದಾಗಿ ಘೋಷಿಸಿದೆ. ಗೂಗಲ್ ಮ್ಯಾಪ್ಸ್‌ನಂತಹ ಡಿಜಿಟಲ್ ವೇದಿಕೆಗಳು ಹಾಗೂ ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಇದನ್ನು ಅಳವಡಿಸಿಕೊಂಡಾಗ ಮಾತ್ರ ಇದರ ಪೂರ್ಣ ಪರಿಣಾಮ ಕಾಣ ಸಿಗಲಿದೆ.

