
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್
ಬ್ರಿಟನ್ ಪ್ರಧಾನಿ ಹುದ್ದೆಗೆ ಕೀರ್ ಸ್ಟಾರ್ಮರ್ ದಿಢೀರ್ ರಾಜೀನಾಮೆ: ಲೇಬರ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ!
ಎರಡು ವರ್ಷಗಳ ಹಿಂದೆ ತಾವು ಪ್ರಧಾನಿಯಾಗಿ ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ್ದನ್ನು ನೆನಪಿಸಿಕೊಂಡ ಅವರು, "ಅದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು" ಎಂದು ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ತಮ್ಮ ಪ್ರಧಾನಿ ಹುದ್ದೆ ಹಾಗೂ ಆಡಳಿತಾರೂಢ ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದ ಒಳಗಿನಿಂದಲೇ ನಾಯಕತ್ವ ಬದಲಾವಣೆಗೆ ಒತ್ತಡ ಮತ್ತು ರಾಜೀನಾಮೆ ಬೇಡಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.
10 ಡೌನಿಂಗ್ ಸ್ಟ್ರೀಟ್‌ನಿಂದ ಹೊರಬಂದು ಘೋಷಣೆ
ಸೋಮವಾರ (ಜೂ. 22) ತಮ್ಮ ಪತ್ನಿ ವಿಕ್ಟೋರಿಯಾ ಅವರೊಂದಿಗೆ ಪ್ರಧಾನಿ ಅಧಿಕೃತ ನಿವಾಸ '10 ಡೌನಿಂಗ್ ಸ್ಟ್ರೀಟ್'ನಿಂದ ಹೊರಬಂದ ಸ್ಟಾರ್ಮರ್, ಅಲ್ಲಿ ನೆರೆದಿದ್ದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ ಈ ನಿರ್ಧಾರವನ್ನು ಪ್ರಕಟಿಸಿದರು. ಎರಡು ವರ್ಷಗಳ ಹಿಂದೆ ತಾವು ಪ್ರಧಾನಿಯಾಗಿ ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ್ದನ್ನು ನೆನಪಿಸಿಕೊಂಡ ಅವರು, "ಅದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು. ದೇಶದ ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ ಏಕೈಕ ಬಯಕೆಯಿಂದ ನಾನು ರಾಜಕೀಯ ಪ್ರವೇಶಿಸಿದ್ದೆ" ಎಂದು ಭಾವುಕರಾಗಿ ನುಡಿದರು. ಈಗಾಗಲೇ ತಾವು ರಾಜೀನಾಮೆ ನೀಡುವ ನಿರ್ಧಾರವನ್ನು ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಅವರಿಗೆ ಅಧಿಕೃತವಾಗಿ ತಿಳಿಸಿರುವುದಾಗಿಯೂ ಅವರು ದೃಢಪಡಿಸಿದರು.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ಪತ್ನಿ ವಿಕ್ಟೋರಿಯಾ
ಪಕ್ಷದ ತೀರ್ಮಾನಕ್ಕೆ ತಲೆಬಾಗಿದ ಪ್ರಧಾನಿ
ತಮ್ಮ ನಿರ್ಗಮನಕ್ಕೆ ಕಾರಣವಾದ ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಿ, ತಾವು ಯಾವುದೇ ಕಹಿಯಿಲ್ಲದೆ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿದರು. "ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ನನ್ನ ಪಕ್ಷದ ಸಂಸದರು ಕೇಳುತ್ತಿದ್ದಾರೆ. ಲೇಬರ್ ಪಕ್ಷದ ಸಂಸದರು ವ್ಯಕ್ತಪಡಿಸಿದ ಈ ಕಳವಳವನ್ನು ನಾನು ಆಲಿಸಿದ್ದೇನೆ ಮತ್ತು ಅವರ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳುತ್ತೇನೆಂದು" ತಿಳಿಸಿದ್ದಾರೆ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.

