Instability in British politics: Prime Minister Keir Starmer likely to resign!
x

ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ 

ಬ್ರಿಟನ್ ರಾಜಕೀಯದಲ್ಲಿ ಅಸ್ಥಿರತೆ: ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ಸಾಧ್ಯತೆ!

ಮೇಕರ್‌ಫೀಲ್ಡ್ ಉಪಚುನಾವಣೆಯಲ್ಲಿ ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಂಡಿ ಬರ್ನ್‌ಹ್ಯಾಮ್ ಅವರು ನಿಗೆಲ್ ಫರಾಜ್ ಅವರನ್ನು ಯಶಸ್ವಿಯಾಗಿ ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಇದು ಸ್ಟಾರ್ಮರ್ ನಾಯಕತ್ವಕ್ಕೆ ಸವಾಲಾಗಿದೆ.


Click the Play button to hear this message in audio format

ಬ್ರಿಟನ್ ರಾಜಕೀಯದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದೆ. ಪ್ರಧಾನಿ ಕೀರ್ ಸ್ಟಾರ್ಮರ್ ಅವರು ತಮ್ಮ ಲೇಬರ್ ಪಾರ್ಟಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವಂತೆ ತೀವ್ರ ಒತ್ತಡ ಎದುರಿಸುತ್ತಿದ್ದು, ಸೋಮವಾರ (ಜೂ. 22) ಅಧಿಕೃತವಾಗಿ ರಾಜೀನಾಮೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಬ್ರಿಟನ್‌ನ ಪ್ರಮುಖ ಪತ್ರಿಕೆ ‘ದಿ ಅಬ್ಸರ್ವರ್’ ವರದಿ ಮಾಡಿದೆ.

ಒಂದೊಮ್ಮೆ ಸ್ಟಾರ್ಮರ್ ಅವರು ಪ್ರಧಾನಿ ಹುದ್ದೆ ತೊರೆದರೆ, ಕಳೆದ ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಅಧಿಕಾರ ಕಳೆದುಕೊಂಡ ಬ್ರಿಟನ್‌ನ 6ನೇ ಪ್ರಧಾನಿ ಎಂಬ ಇತಿಹಾಸಕ್ಕೆ ಅವರು ಪಾತ್ರರಾಗಲಿದ್ದಾರೆ. ಬ್ರೆಕ್ಸಿಟ್ ನಿರ್ಧಾರದ ನಂತರ ಬ್ರಿಟನ್ ಎದುರಿಸುತ್ತಿರುವ ನಿರಂತರ ರಾಜಕೀಯ ಅಸ್ಥಿರತೆ, ಆರ್ಥಿಕ ಹಿಂಜರಿತ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳಿಗೆ ಈ ಬೆಳವಣಿಗೆ ಮತ್ತೊಂದು ಸಾಕ್ಷಿಯಾಗಿದೆ.

ಸ್ಥಾನಕ್ಕೆ ಕುತ್ತು ತಂದ ಉಪಚುನಾವಣೆ

ಮೇಕರ್‌ಫೀಲ್ಡ್ ಉಪಚುನಾವಣೆಯಲ್ಲಿ ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಂಡಿ ಬರ್ನ್‌ಹ್ಯಾಮ್ ಅವರು ನಿಗೆಲ್ ಫರಾಜ್ ಅವರ 'ರಿಫಾರ್ಮ್ ಯುಕೆ' ಪಕ್ಷದ ಸವಾಲನ್ನು ಯಶಸ್ವಿಯಾಗಿ ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಇದು ಕೀರ್ ಸ್ಟಾರ್ಮರ್ ಅವರಿಗೆ ನೇರ ನಾಯಕತ್ವದ ಸವಾಲೊಡ್ಡಲು ಬರ್ನ್‌ಹ್ಯಾಮ್ ಅವರಿಗೆ ದಾರಿ ಮಾಡಿಕೊಟ್ಟಿದೆ.

ಭಿನ್ನಮತೀಯರ ಒತ್ತಡ

ಲೇಬರ್ ಪಕ್ಷದ ಸುಮಾರು ಕಾಲು ಭಾಗದಷ್ಟು (100ಕ್ಕೂ ಹೆಚ್ಚು) ಸಂಸದರು ಸ್ಟಾರ್ಮರ್ ಅವರ ರಾಜೀನಾಮೆಗೆ ಅಥವಾ ನಾಯಕತ್ವ ಬದಲಾವಣೆಯ ಸ್ಪಷ್ಟ ವೇಳಾಪಟ್ಟಿಗೆ ಬಹಿರಂಗವಾಗಿ ಒತ್ತಾಯಿಸಿದ್ದಾರೆ. ಈ ನಡುವೆ, "ಪ್ರಧಾನಿ ಸ್ಟಾರ್ಮರ್ ಅವರು ಸದ್ಯ ಆಡಳಿತದ ಕಡೆಗೆ ಗಮನ ಹರಿಸಿದ್ದಾರೆ" ಎಂದು ಸರ್ಕಾರದ ಆಂತರಿಕ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಸ್ಥಿರತೆಯ ಕೇಂದ್ರಬಿಂದು 'ಬ್ರೆಕ್ಸಿಟ್'

2016 ರಲ್ಲಿ ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಐರೋಪ್ಯ ಒಕ್ಕೂಟದಿಂದ (EU) ಬ್ರಿಟನ್ ಹೊರಬರುವ ಕುರಿತು (ಬ್ರೆಕ್ಸಿಟ್) ಜನಾಭಿಪ್ರಾಯ ಸಂಗ್ರಹಣೆಗೆ ಕರೆ ನೀಡಿದ ದಿನದಿಂದ ಬ್ರಿಟನ್ ರಾಜಕೀಯದ ಅಸ್ಥಿರತೆಯ ಪರ್ವ ಆರಂಭವಾಯಿತು. ಬ್ರೆಕ್ಸಿಟ್ ಜಾರಿಯಾದ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ ಎಂಬ ಭರವಸೆ ಹುಸಿಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ನಿರಂತರ ಜೀವನ ವೆಚ್ಚದ ಏರಿಕೆ, ಸಾರ್ವಜನಿಕ ಸೇವೆಗಳ ಕುಸಿತ ಮತ್ತು ಹಣದುಬ್ಬರದಿಂದಾಗಿ ಬ್ರಿಟನ್‌ನ ಮತದಾರರು ಸತತ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಕಳೆದ ಒಂದು ದಶಕದಲ್ಲಿ ಬ್ರಿಟನ್ ಪ್ರಧಾನಿಗಳ ಏರಿಳಿತದ ಇತಿಹಾಸ

ಕೀರ್ ಸ್ಟಾರ್ಮರ್

2024 ರಿಂದ ಪ್ರಸ್ತುತ ಪ್ರಧಾನಿಯಾಗಿರುವ ಇವರಿಗೆ ಪಿಂಚಣಿದಾರರ ಚಳಿಗಾಲದ ಇಂಧನ ಭತ್ಯೆ ಕಡಿತದ ವಿವಾದ, ವಿವಾದಾತ್ಮಕ ರಾಜತಾಂತ್ರಿಕ ನೇಮಕಾತಿಗಳು ಮತ್ತು ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಲೇಬರ್ ಪಕ್ಷದ 1,400ಕ್ಕೂ ಹೆಚ್ಚು ಸ್ಥಾನಗಳ ಭಾರಿ ಸೋಲು ಮುಳುವಾಗಿದೆ. ಕನ್ಸರ್ವೇಟಿವ್ ಪಕ್ಷದ ಪ್ರಕ್ಷುಬ್ಧತೆಯ ನಂತರ 'ಸ್ಥಿರತೆ'ಯ ಭರವಸೆ ನೀಡಿ ಬಂದರೂ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ವಿಫಲರಾಗಿದ್ದಾರೆ.

ರಿಷಿ ಸುನಕ್

2022 ರಿಂದ 2024ರವರೆಗೆ ಅಧಿಕಾರದಲ್ಲಿದ್ದ ಇವರು ಆರ್ಥಿಕ ನಿಶ್ಚಲತೆ, ಕಾರ್ಮಿಕರ ಕೊರತೆ ಮತ್ತು ಹಣದುಬ್ಬರದ ಒತ್ತಡಗಳಿಂದಾಗಿ ಸಾರ್ವಜನಿಕರ ತೀವ್ರ ಅಸಮಾಧಾನ ಎದುರಿಸಿದರು. ಜು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಐತಿಹಾಸಿಕ ಸೋಲುಂಟಾಯಿತು. ಬ್ರೆಕ್ಸಿಟ್ ನಂತರದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಹೆಣಗಾಡಿದರು.

ಲಿಜ್ ಟ್ರಸ್

2022ರಲ್ಲಿ ಕೇವಲ 49 ದಿನಗಳ ಅಲ್ಪಾವಧಿ ಆಡಳಿತ ನಡೆಸಿದರು. ಯಾವುದೇ ಆರ್ಥಿಕ ಯೋಜನೆ ಇಲ್ಲದೆ ಜಾರಿಗೆ ತರಲು ಯತ್ನಿಸಿದ "ಮಿನಿ-ಬಜೆಟ್" ಮತ್ತು ತೆರಿಗೆ ಕಡಿತದ ಪ್ರಸ್ತಾವನೆಗಳು ಆರ್ಥಿಕ ಮಾರುಕಟ್ಟೆಯಲ್ಲಿ ಭೀತಿ ಸೃಷ್ಟಿಸಿ, ಬ್ರಿಟಿಷ್ ಪೌಂಡ್ ಮೌಲ್ಯ ಕುಸಿಯುವಂತೆ ಮಾಡಿತು. ಬ್ರೆಕ್ಸಿಟ್ ನಂತರದ ಆರ್ಥಿಕ ಸುಧಾರಣೆ ತರಲು ಹೋಗಿ ವೈಫಲ್ಯ ಕಂಡರು.

ಬೋರಿಸ್ ಜಾನ್ಸನ್

2019 ರಿಂದ 2022ರವರೆಗೆ ಅಧಿಕಾರದಲ್ಲಿದ್ದ ಇವರು, ಕೋವಿಡ್-19 ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಔತಣಕೂಟ ಆಯೋಜಿಸಿದ ‘ಪಾರ್ಟಿಗೇಟ್’ ಹಗರಣದಿಂದಾಗಿ ಸಾಲು ಸಾಲು ಸಚಿವರು ರಾಜೀನಾಮೆ ನೀಡಿದ್ದರಿಂದ ಅಧಿಕಾರ ತ್ಯಜಿಸಬೇಕಾಯಿತು. "ಬ್ರೆಕ್ಸಿಟ್ ಮುಗಿಸಿ" ಎಂಬ ಘೋಷಣೆಯೊಂದಿಗೆ 2019 ರಲ್ಲಿ ಐತಿಹಾಸಿಕ 80 ಸ್ಥಾನಗಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರು.

ಥೆರೆಸಾ ಮೇ

2016 ರಿಂದ 2019ರವರೆಗೆ ಅಧಿಕಾರದಲ್ಲಿದ್ದ ಇವರಿಗೆ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸುವ ಒಪ್ಪಂದವನ್ನು ಸ್ವಂತ ಪಕ್ಷದ ಸಂಸದರ ವಿರೋಧದಿಂದಾಗಿ ಸಂಸತ್ತಿನಲ್ಲಿ ಅಂಗೀಕರಿಸಲು ವಿಫಲರಾಗಿದ್ದರು. ಇವರ ಇಡೀ ಅವಧಿ ಬ್ರೆಕ್ಸಿಟ್ ಒಪ್ಪಂದದ ಮಾತುಕತೆಗಳಲ್ಲೇ ಕಳೆದುಹೋಯಿತು.

ಡೇವಿಡ್ ಕ್ಯಾಮರೂನ್

2010 ರಿಂದ 2016ರವರೆಗೆ ಅಧಿಕಾರದಲ್ಲಿದ್ದರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಶಮನಗೊಳಿಸಲು 2016 ರಲ್ಲಿ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆಗೆ ಕರೆ ನೀಡಿದರು. ತಾವು ಐರೋಪ್ಯ ಒಕ್ಕೂಟದಲ್ಲೇ ಉಳಿಯುವ ಪರ ಪ್ರಚಾರ ಮಾಡಿದರೂ, ದೇಶದ ಜನತೆ ಹೊರಬರುವ ಪರ ( ಶೇ. 52) ತೀರ್ಪು ನೀಡಿದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಇಂದಿನ ಬ್ರಿಟನ್ ರಾಜಕೀಯ ಬಿಕ್ಕಟ್ಟಿಗೆ ಇವರ ಜನಾಭಿಪ್ರಾಯ ಸಂಗ್ರಹದ ನಿರ್ಧಾರವೇ ಮುನ್ನುಡಿ ಬರೆಯಿತು.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕರೆಯಲಾದ ಒಂದು ಜನಾಭಿಪ್ರಾಯ ಸಂಗ್ರಹಣೆ, ಇಡೀ ದೇಶದ ರಾಜಕೀಯ ಮತ್ತು ಆರ್ಥಿಕ ಚಹರೆಯನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ಕಳೆದ ಒಂದು ದಶಕದ ಬ್ರಿಟನ್ ಇತಿಹಾಸವೇ ಸಾಕ್ಷಿ. ಕೀರ್ ಸ್ಟಾರ್ಮರ್ ಅವರ ಮುಂದಿನ ನಡೆ ಈಗ ಇಡೀ ವಿಶ್ವದ ಗಮನ ಸೆಳೆದಿದೆ.

Read More
Next Story