
ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ಗಣ್ಯರು ಇದರಲ್ಲಿ ಭಾಗವಹಿಸಿದ್ದರು.
ಟ್ರಂಪ್ ಪಾಲ್ಗೊಂಡಿದ್ದ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಅಮೆರಿಕ ಅಧ್ಯಕ್ಷರು ಸುರಕ್ಷಿತ, ಶಂಕಿತನ ಬಂಧನ
ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು, ಟ್ರಂಪ್ ದಂಪತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗವಹಿಸಿದ್ದ 'ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್' ಕಾರ್ಯಕ್ರಮದ ವೇಳೆ ಹೋಟೆಲ್‌ನ ಹೊರಭಾಗದಲ್ಲಿ ದಿಢೀರ್ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಅಧ್ಯಕ್ಷರು ಸೇರಿದಂತೆ ಎಲ್ಲ ಗಣ್ಯರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಏಪ್ರಿಲ್ 25ರ ಶನಿವಾರ ರಾತ್ರಿ ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಈ ಡಿನ್ನರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಇಂಟರ್‌ನ್ಯಾಷನಲ್ ಬಾಲ್‌ರೂಮ್‌ನಲ್ಲಿ ಅತಿಥಿಗಳು ಆಸೀನರಾಗಿದ್ದಾಗ, ಹೋಟೆಲ್‌ನ ಹೊರಗೆ ದಿಢೀರನೆ 4 ರಿಂದ 8 ಸುತ್ತು ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ.
ಗಣ್ಯರ ತ್ವರಿತ ಸ್ಥಳಾಂತರ
ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು, ಟ್ರಂಪ್ ದಂಪತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅವರೊಂದಿಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನೂ ಸಹ ಅಲ್ಲಿಂದ ಸ್ಥಳಾಂತರಿಸಲಾಯಿತು. ಈ ವೇಳೆ ಭಯಭೀತರಾದ ಪತ್ರಕರ್ತರು ಮತ್ತು ಇತರೆ ಗಣ್ಯರು ಟೇಬಲ್‌ಗಳ ಕೆಳಗೆ ಅವಿತುಕೊಂಡು ಪ್ರಾಣ ರಕ್ಷಿಸಿಕೊಂಡರು. ಭದ್ರತಾ ಪಡೆಗಳು ಮತ್ತು ನ್ಯಾಷನಲ್ ಗಾರ್ಡ್ಸ್ ತಕ್ಷಣವೇ ಇಡೀ ಹೋಟೆಲ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡವು.
ಶಂಕಿತನ ಬಂಧನ ಮತ್ತು ತನಿಖೆ
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕ್ಯಾಲಿಫೋರ್ನಿಯಾ ಮೂಲದ 30 ವರ್ಷದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅತಿಥಿಗಳಿಗೆ ಗಾಯಗಳಾಗಿಲ್ಲ. ದಾಳಿಯ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಎಫ್‌ಬಿಐ ಹಾಗೂ ಸೀಕ್ರೆಟ್ ಸರ್ವಿಸ್ ಜಂಟಿ ತನಿಖೆ ಕೈಗೊಂಡಿವೆ.
'ನಾನು ಸೇಫ್' ಎಂದ ಟ್ರಂಪ್
ಘಟನೆಯ ನಂತರ ತಮ್ಮ 'ಟ್ರುತ್ ಸೋಶಿಯಲ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ನಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದು, ಭದ್ರತಾ ಪಡೆಗಳ ತ್ವರಿತ ಮತ್ತು ಸಾಹಸಮಯ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಹಿಂದಿನ ಬೆದರಿಕೆಗಳು ಮತ್ತು ಹಿನ್ನೆಲೆ
2024ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಹಾಗೂ ವೆಸ್ಟ್ ಪಾಮ್ ಬೀಚ್‌ನಲ್ಲಿ ಟ್ರಂಪ್ ಅವರನ್ನು ಹತ್ಯೆ ಮಾಡುವ ಯತ್ನಗಳು ನಡೆದಿದ್ದವು. ಇತ್ತೀಚೆಗಷ್ಟೇ (ಫೆಬ್ರುವರಿ 28) ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಇರಾನ್‌ಗೆ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಭೌಗೋಳಿಕ-ರಾಜಕೀಯ ಬಿಕ್ಕಟ್ಟುಗಳ ನಡುವೆಯೇ ಈ ಗುಂಡಿನ ದಾಳಿ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

