ಇರಾನ್ ಮೇಲೆ ದಾಳಿ ತಡೆದ ಟ್ರಂಪ್; ಯುದ್ಧ ಅಂತ್ಯಕ್ಕೆ ಒಪ್ಪಂದದ ಸುಳಿವು
x

ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಇರಾನ್ ಮೇಲೆ ದಾಳಿ ತಡೆದ ಟ್ರಂಪ್; ಯುದ್ಧ ಅಂತ್ಯಕ್ಕೆ ಒಪ್ಪಂದದ ಸುಳಿವು

ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಹೋರ್ಮುಜ್ ಜಲಸಂಧಿ ತೆರೆಯುವ ಹಾಗೂ ಯುದ್ಧ ಅಂತ್ಯಗೊಳಿಸುವ ಒಪ್ಪಂದ ರೂಪುಗೊಳ್ಳುತ್ತಿದೆ ಎಂದು ಹೇಳಿದ್ದಾರೆ.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಹೊಸ ಸೇನಾ ದಾಳಿ ನಡೆಸುವ ನಿರ್ಧಾರವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದ್ದಾರೆ. ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ಯುದ್ಧ ಅಂತ್ಯಗೊಳಿಸುವ ಒಪ್ಪಂದದ ರೂಪುರೇಷೆಗಳು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾರ್ಮುಜ್‌ ಜಲಸಂಧಿ ತೆರೆಯುವ ಪ್ರಸ್ತಾವನೆ

ತಮ್ಮ 'ಟ್ರೂತ್ ಸೋಷಿಯಲ್' ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಒಪ್ಪಂದದ ಭಾಗವಾಗಿ ಜಗತ್ತಿನ ಪ್ರಮುಖ ಇಂಧನ ಸಾಗಾಣಿಕೆ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವ ಪ್ರಸ್ತಾವನೆ ಇದೆ ಎಂದು ಹೇಳಿದ್ದಾರೆ. ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ಈ ಜಲಸಂಧಿಯಲ್ಲಿ ಇರಾನ್ ನಿರ್ಬಂಧ ಹೇರಿದ್ದರಿಂದ ಜಾಗತಿಕ ತೈಲ ಸಾಗಾಟದ ಮೇಲೆ ಪರಿಣಾಮ ಬೀರಿತ್ತು.

'ಅಮೆರಿಕ ಸಿದ್ಧವಾಗಿತ್ತು, ಆದರೆ ದಾಳಿ ತಡೆದಿದ್ದೇವೆ'

ಅಮೆರಿಕ ಸೇನೆ ಸಂಪೂರ್ಣ ಸನ್ನದ್ಧವಾಗಿದ್ದು, ಎರಡನೇ ವಿಶ್ವಯುದ್ಧದ ನಂತರ ಕಾಣದ ಮಟ್ಟದ ಸೇನಾ ಸಾಮರ್ಥ್ಯವನ್ನು ಬಳಸಲು ಸಿದ್ಧವಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಹಾಗೂ ಇತರ ಮಧ್ಯಪ್ರಾಚ್ಯದ ರಾಷ್ಟ್ರಗಳು ದಾಳಿ ನಡೆಸದಂತೆ ಮನವಿ ಮಾಡಿದ್ದು, ಯುದ್ಧ ಅಂತ್ಯಕ್ಕೆ ಒಪ್ಪಂದದ ಚೌಕಟ್ಟು ಸಿದ್ಧವಾಗಿದೆ ಎಂದು ತಿಳಿಸಿದ್ದರಿಂದ ದಾಳಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದದಿಂದ ಹಾರ್ಮುಜ್‌ ಜಲಸಂಧಿ ಸಂಪೂರ್ಣವಾಗಿ ತೆರೆಯುವುದರ ಜೊತೆಗೆ ಇರಾನ್‌ನ ಅಣ್ವಸ್ತ್ರ ಬೆದರಿಕೆಗೂ ಅಂತ್ಯವಾಗಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಸಹ ಒಪ್ಪಂದಕ್ಕೆ ಬೆಂಬಲ

ಫೆಬ್ರವರಿಯಲ್ಲಿ ಅಮೆರಿಕದೊಂದಿಗೆ ಜಂಟಿ ಸೇನಾ ಕಾರ್ಯಾಚರಣೆ ನಡೆಸಿದ್ದ ಇಸ್ರೇಲ್ ಕೂಡ ಯುದ್ಧ ಅಂತ್ಯಗೊಳಿಸುವ ಪ್ರಯತ್ನದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇರಾನ್‌ನೊಂದಿಗೆ ಶೀಘ್ರದಲ್ಲೇ ಅಂತಿಮ ಒಪ್ಪಂದಕ್ಕೆ ಬಂದು ಐದು ತಿಂಗಳಿನಿಂದ ಮುಂದುವರಿದಿರುವ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

'ಒಪ್ಪಂದ ಪೂರ್ಣಗೊಳಿಸಿ' ಎಂದ ಟ್ರಂಪ್

"ಎಲ್ಲರೂ ಕೆಲಸಕ್ಕೆ ಮುಂದಾಗಿ, ಈ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ" ಎಂದು ಟ್ರಂಪ್ ತಮ್ಮ ಸಂದೇಶದಲ್ಲಿ ಕರೆ ನೀಡಿದ್ದಾರೆ. ಆದರೆ ಈ ಒಪ್ಪಂದದ ಕುರಿತು ಇರಾನ್ ಅಥವಾ ಇಸ್ರೇಲ್ ಸರ್ಕಾರಗಳಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ.

Read More
Next Story