ರಸಾಯನ ವಿಜ್ಞಾನದಲ್ಲಿ ಮೂವರಿಗೆ ನೊಬೆಲ್ ಪುರಸ್ಕಾರ
ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಗಣನೀಯ ಸಾಧನೆ ಮಾಡಿದ ಮೂವರು ವಿಜ್ಞಾನಿಗಳಿಗೆ 2024ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಪ್ರೊಟಿನ್ ವಿನ್ಯಾಸದ ಗಣನೆಗಾಗಿ ಪ್ರಶಸ್ತಿಯ ಅರ್ಧ ಪಾಲನ್ನು ಅಮೆರಿಕದ ಡೇವಿಡ್ ಬೇಕರ್ ಪಡೆದರೆ, ಭವಿಷ್ಯದ ಪ್ರೊಟಿನ್ ಸ್ವರೂಪ ಕುರಿತ ಆವಿಷ್ಕಾರಕ್ಕಾಗಿ ಉಳಿದರ್ಧ ಪಾಲನ್ನು ಇಂಗ್ಲೆಂಡಿನ ಡೆಮಿಸ್ ಹಸ್ಸಾಬಿಸ್ ಹಾಗೂ ಜಾನ್ ಎಂ. ಜಂಪರ್ ಹಂಚಿಕೊಳ್ಳಲಿದ್ದಾರೆ ಎಂದು ಸ್ವಿಡೀಸ್ ಅಕಾಡೆಮಿ ತಿಳಿಸಿದೆ.
ವಿಜ್ಞಾನಿ ಡೇವಿಡ್ ಬೇಕರ್ ಅವರು ಸಂಪೂರ್ಣವಾಗಿ ಹೊಸ ರೀತಿಯ ಪ್ರೋಟೀನ್ ನಿರ್ಮಿಸುವ ಮೂಲಕ ಅಸಾಧ್ಯವಾದ ಸಾಧನೆ ಮಾಡಿದ್ದಾರೆ. ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್ ಅವರು ಪ್ರೊಟಿನ್ ಕುರಿತಾದ 50 ವರ್ಷಗಳ ಹಳೆಯ ಸಮಸ್ಯೆ ಪರಿಹರಿಸಲು ಕೃತಕ ಬುದ್ದಿಮತ್ತೆಯ ಮಾದರಿ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಪ್ರೋಟೀನ್ಗಳ ಸಂಕೀರ್ಣ ರಚನೆ ತಿಳಿಯಬಹುದಾಗಿದೆ. ಈ ಎಲ್ಲಾ ಆವಿಷ್ಕಾರಗಳು ಅಗಾಧ ಸಾಮರ್ಥ್ಯ ಹೊಂದಿವೆ ಎಂದು ನೊಬೆಲ್ ಫೌಂಡೇಶನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರೋಟೀನ್ ರಚನೆಯನ್ನು ಅವುಗಳ ಅಮೈನೋ ಆಸಿಡ್ ಅನುಕ್ರಮದಿಂದ ಊಹಿಸಲು ಈ ಎರಡೂ ಆವಿಷ್ಕಾರಗಳು ವ್ಯಾಪಕ ಸಾಧ್ಯತೆಗಳನ್ನು ತೆರೆದಿಟ್ಟಿವೆ ಎಂದು ರಸಾಯನಶಾಸ್ತ್ರದ ನೊಬೆಲ್ ಸಮಿತಿ ಅಧ್ಯಕ್ಷ ಹೈನರ್ ಲಿಂಕ್ ಹೇಳಿದ್ದಾರೆ.