ಅಗ್ಗದ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಟ್ರ್ಯಾಪ್‌- ಥಾಯ್ಲೆಂಡ್‌ನಲ್ಲಿ ಮೂವರು ಭಾರತೀಯರ ಕಿಡ್ನ್ಯಾಪ್‌
x

ಥಾಯ್ ಪೊಲೀಸರು ಪಟ್ಟಾಯದ ಬ್ಯಾಂಗ್ ಲಮುಂಗ್ ಜಿಲ್ಲೆಯ ಎರಡು ಮಹಡಿಯ ಮನೆಯಲ್ಲಿ ದಾಳಿ ನಡೆಸಿ ಮೂವರು ಭಾರತೀಯರನ್ನು ರಕ್ಷಿಸಿದ್ದಾರೆ.

ಅಗ್ಗದ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಟ್ರ್ಯಾಪ್‌- ಥಾಯ್ಲೆಂಡ್‌ನಲ್ಲಿ ಮೂವರು ಭಾರತೀಯರ ಕಿಡ್ನ್ಯಾಪ್‌

ಅಗ್ಗದ ಟೂರ್ ಪ್ಯಾಕೇಜ್ ಆಮಿಷಕ್ಕೆ ಬಿದ್ದ ಮೂವರು ಭಾರತೀಯರನ್ನು ಥಾಯ್ಲೆಂಡ್‌ನಲ್ಲಿ ಅಪಹರಿಸಿ ₹70 ಲಕ್ಷ ರಾನ್ಸಮ್ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.


Click the Play button to hear this message in audio format

ಥಾಯ್ಲೆಂಡ್‌ಗೆ ಕನಸಿನ ಪ್ರವಾಸಕ್ಕೆ ತೆರಳಿದ್ದ ಮೂವರು ಭಾರತೀಯರಿಗೆ ಅದು ಭಯಾನಕ ಅನುಭವವಾಗಿ ಪರಿಣಮಿಸಿದೆ. ಅಗ್ಗದ ಪ್ರವಾಸ ಪ್ಯಾಕೇಜ್ ನೀಡುವುದಾಗಿ ನಂಬಿಸಿ ಥಾಯ್ಲೆಂಡ್‌ಗೆ ಕರೆಸಿಕೊಂಡಿದ್ದ ಆರೋಪಿಗಳು, ಪಟ್ಟಾಯದಲ್ಲಿ ಅವರನ್ನು ಅಪಹರಿಸಿ ವಾರಕ್ಕೂ ಹೆಚ್ಚು ಕಾಲ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿ, ಕುಟುಂಬದವರಿಂದ 70 ಲಕ್ಷ ರೂ. ಪರಿಹಾರಧನ (ರಾನ್ಸಮ್) ವಸೂಲು ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಥಾಯ್ ಪೊಲೀಸರು ಜುಲೈ 27ರಂದು (ಸೋಮವಾರ) ಪಟ್ಟಾಯದ ಬ್ಯಾಂಗ್ ಲಮುಂಗ್ ಜಿಲ್ಲೆಯ ಎರಡು ಮಹಡಿಯ ಮನೆಯಲ್ಲಿ ಬಂಧಿತರಾಗಿದ್ದ ಮೂವರು ಭಾರತೀಯರನ್ನು ರಕ್ಷಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬ್ಯಾಂಕಾಕ್‌ನಲ್ಲಿ ಐವರು ಭಾರತೀಯರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರಜೆಗಳಿಗಾಗಿ ಶೋಧ ಮುಂದುವರಿದಿದೆ.

ಬಂಧಿತರನ್ನು ಅವ್ತಾರ್ ಸಿಂಗ್, ಜಗ್ಜಿತ್ ಸಿಂಗ್, ರಾಮ್ಬಾಲಕ್ ಕುಮಾರ್, ಸುಖಬೀರ್ ಸಿಂಗ್ ಹಾಗೂ ಕುಲ್ರಾ ಸಿಂಗ್ ಎಂದು ಗುರುತಿಸಲಾಗಿದೆ. ಬ್ಯಾಂಕಾಕ್‌ನ ಖ್ಲಾಂಗ್ ಟಾನ್ ಪ್ರದೇಶದ ಹೋಟೆಲ್‌ನಲ್ಲಿ ವಿಮಾನ ಹತ್ತಲು ಕಾಯುತ್ತಿದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಗ್ಗದ ಟೂರ್ ಪ್ಯಾಕೇಜ್ ಆಮಿಷ

23 ರಿಂದ 26 ವರ್ಷದೊಳಗಿನ ಮೂವರು ಭಾರತೀಯರು ತಲಾ ಸುಮಾರು 70,000 ಥಾಯ್ ಬಹ್ಟ್ (ಸುಮಾರು 2ರೂ. ಲಕ್ಷ) ಪಾವತಿಸಿ ಏಳು ದಿನಗಳ ಅಗ್ಗದ ಪ್ರವಾಸ ಪ್ಯಾಕೇಜ್ ಬುಕ್ ಮಾಡಿದ್ದರು.

ಜುಲೈ 21ರಂದು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ತಲುಪಿದ ಅವರು ಅಲ್ಲಿಂದ ಟ್ಯಾಕ್ಸಿ ಮೂಲಕ ಪಟ್ಟಾಯಕ್ಕೆ ತೆರಳಿದರು. ಬಳಿಕ ಸುಖುಂವಿತ್ ಹೆದ್ದಾರಿಯಲ್ಲಿರುವ ಫಾಸ್ಟ್‌ಫುಡ್ ರೆಸ್ಟೋರೆಂಟ್ ಬಳಿ ತಲುಪಿದಾಗ, ಒಬ್ಬ ಭಾರತೀಯ ಆರೋಪಿಯು ಅವರನ್ನು ಒಬ್ಬೊಬ್ಬರಾಗಿ ಬೈಕ್‌ನಲ್ಲಿ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ.

ಅಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಹಾಗೂ ಮತ್ತೊಬ್ಬ ಭಾರತೀಯ ಸೇರಿ ಮೂವರನ್ನೂ ಅಪಹರಿಸಿ ಬಂಧನದಲ್ಲಿಟ್ಟಿದ್ದಾರೆ ಎಂದು ಸಂತ್ರಸ್ತರು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರತಿದಿನ ಚಿತ್ರಹಿಂಸೆ, ಕುಟುಂಬಕ್ಕೆ ಕರೆ ಮಾಡಿ ಹಣ ಕೇಳುವಂತೆ ಒತ್ತಾಯ

ಪೊಲೀಸರು ದಾಳಿ ನಡೆಸಿದ ವೇಳೆ ಮೂವರು ಸಂತ್ರಸ್ತರು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಕೈ, ಕಾಲು ಹಾಗೂ ಬಾಯಿಯನ್ನು ಕಟ್ಟಿ ಬಂಧನದಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕಾಲಿನ ಭಾಗಗಳಲ್ಲಿ ತೀವ್ರ ಹಲ್ಲೆಯ ಗುರುತುಗಳು ಕಂಡುಬಂದಿವೆ.

ಸಂತ್ರಸ್ತರ ಹೇಳಿಕೆಯ ಪ್ರಕಾರ, ವಾರಪೂರ್ತಿ ಪ್ರತಿದಿನ ಅವರನ್ನು ಅಮಾನವೀಯವಾಗಿ ಹಿಂಸಿಸಲಾಗುತ್ತಿತ್ತು. ತಲೆ ಕೆಳಗಾಗಿ ನೇತುಹಾಕಿ ಥಳಿಸುವುದು, ಕಾಲುಗಳಿಗೆ ಕಠಿಣ ವಸ್ತುಗಳಿಂದ ಹೊಡೆಯುವುದು, ಆಹಾರ ಮತ್ತು ಶೌಚಾಲಯದ ಸೌಲಭ್ಯ ನಿರಾಕರಿಸುವುದು ಸೇರಿದಂತೆ ವಿವಿಧ ರೀತಿಯ ಚಿತ್ರಹಿಂಸೆ ನೀಡಲಾಗುತ್ತಿತ್ತು.

ಇದರ ಜೊತೆಗೆ ಭಾರತದಲ್ಲಿದ್ದ ಕುಟುಂಬದವರಿಗೆ ಕರೆ ಮಾಡಿ 70 ಲಕ್ಷ ರೂ. ಪರಿಹಾರಧನ ನೀಡುವಂತೆ ಒತ್ತಾಯಿಸಲು ಬಲವಂತಪಡಿಸಲಾಗುತ್ತಿತ್ತು.

ಥಾಯ್ ಪೊಲೀಸರು ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಒಬ್ಬ ಸಂತ್ರಸ್ತನ ದೇಹಕ್ಕೆ ಕೆಂಪು ಬಣ್ಣ ಬಳಿದಿರುವುದು ಕಂಡುಬಂದಿದೆ. ವಿಡಿಯೊ ಕರೆ ವೇಳೆ ತೀವ್ರ ರಕ್ತಸ್ರಾವವಾಗಿರುವಂತೆ ತೋರಿಸಿ ಕುಟುಂಬದವರ ಮೇಲೆ ಮಾನಸಿಕ ಒತ್ತಡ ಹೇರುವ ಉದ್ದೇಶದಿಂದ ಈ ತಂತ್ರ ಬಳಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದುಬೈ ನೋಂದಾಯಿತ ಫೋನ್ ಸಂಖ್ಯೆಯ ಬಳಕೆ

ಭಾರತದಲ್ಲಿದ್ದ ಕುಟುಂಬದವರು ಥಾಯ್ ಪೊಲೀಸರನ್ನು ಸಂಪರ್ಕಿಸಿ ಸಹಾಯ ಕೋರಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಚೋನ್‌ಬುರಿ ಪ್ರಾಂತ್ಯದ ವಲಸೆ ವಿಭಾಗದ ಮುಖ್ಯಸ್ಥ ಪೊಲೀಸ್ ಕರ್ನಲ್ ನಪಾಟ್‌ಪಾಂಗ್ ಕೊಸಿಟ್ಸುರಿಯಾಮನೀ ಅವರ ಪ್ರಕಾರ, ಆರೋಪಿಗಳು ತಮ್ಮ ನಿಜವಾದ ಸ್ಥಳವನ್ನು ಮರೆಮಾಚಲು ದುಬೈ (ಯುಎಇ)ನಲ್ಲಿ ನೋಂದಾಯಿತ ದೂರವಾಣಿ ಸಂಖ್ಯೆಯನ್ನು ಬಳಸುತ್ತಿದ್ದರು. ಆದರೂ ತನಿಖಾಧಿಕಾರಿಗಳು ಅವರ ಅಡಗುತಾಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಪೊಲೀಸರು ದಾಳಿ ನಡೆಸುವ ಕೆಲವೇ ಕ್ಷಣಗಳ ಮೊದಲು ಪ್ರಮುಖ ಆರೋಪಿಗಳು ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕ್ರಿಪ್ಟೋಕರೆನ್ಸಿಯಲ್ಲಿ ಪರಿಹಾರಧನ ಪಡೆಯುವ ಸಂಚು

ಪ್ರಕರಣದ ತನಿಖೆಯಲ್ಲಿ ಬಂಧಿತ ಐವರು ಭಾರತೀಯರು ಸುಮಾರು ಒಂದು ತಿಂಗಳ ಹಿಂದೆ ಚಾಟ್ ಅಪ್ಲಿಕೇಶನ್ ಮೂಲಕ ಪರಿಚಯವಾದ ಪಾಕಿಸ್ತಾನಿ ವ್ಯಕ್ತಿಯ ಸೂಚನೆಯಂತೆ ಈ ಅಪಹರಣ ನಡೆಸಿದ್ದಾಗಿ ಹೇಳಿರುವುದಾಗಿ ವರದಿಯಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಈ ಕೃತ್ಯದ ಪ್ರಮುಖ ಸಂಚುಕೋರ ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದು, ಪರಿಹಾರಧನವನ್ನು ಕ್ರಿಪ್ಟೋಕರೆನ್ಸಿ ಮೂಲಕ ಸ್ವೀಕರಿಸುವ ಯೋಜನೆ ಹೊಂದಿದ್ದ. ಅಪಹರಣ ಯಶಸ್ವಿಯಾದ ಬಳಿಕ ಸಂತ್ರಸ್ತರ ಬಳಿಯಿದ್ದ ಬೆಲೆಬಾಳುವ ವಸ್ತುಗಳು, ನಗದು ಹಾಗೂ ಥಾಯ್ಲೆಂಡ್‌ನಿಂದ ತಪ್ಪಿಸಿಕೊಳ್ಳಲು ವಿಮಾನ ಟಿಕೆಟ್ ನೀಡುವುದಾಗಿ ಭಾರತೀಯ ಆರೋಪಿಗಳಿಗೆ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸುವ ಹೊಸ ವಂಚನೆ

ಈ ಪ್ರಕರಣ ವಿದೇಶಿ ಪ್ರವಾಸಿಗರನ್ನು ಅಗ್ಗದ ಪ್ರವಾಸ ಪ್ಯಾಕೇಜ್ ಹೆಸರಿನಲ್ಲಿ ವಂಚಿಸಿ, ಬಳಿಕ ಅಪಹರಿಸಿ ಪರಿಹಾರಧನಕ್ಕೆ ಬೇಡಿಕೆ ಇಡುವ ಹೊಸ ರೀತಿಯ ಅಂತರರಾಷ್ಟ್ರೀಯ ಅಪರಾಧ ಜಾಲದ ಕಾರ್ಯವೈಖರಿಯನ್ನು ಬಹಿರಂಗಪಡಿಸಿದೆ ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಪಾಸ್‌ಪೋರ್ಟ್ ಹೊಂದಿದವರಿಗೆ ಥಾಯ್ಲೆಂಡ್ ಇತ್ತೀಚೆಗೆ ವೀಸಾ-ಮುಕ್ತ ಪ್ರವೇಶವನ್ನು ಪುನರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳು ಈ ಪ್ರಕರಣವನ್ನು ವೀಸಾ ನೀತಿಯೊಂದಿಗೆ ನೇರವಾಗಿ ಸಂಬಂಧಿಸಿಲ್ಲ ಎಂದಿದ್ದರೂ, ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ವಂಚನೆಗಳ ಬಗ್ಗೆ ಹೊಸ ಎಚ್ಚರಿಕೆಯನ್ನು ನೀಡಿದೆ.

Read More
Next Story