ಹೊರ್ಮುಜ್ ಜಲಸಂಧಿ ಬಳಿ ಹಡಗು ಅಪಘಾತ: ಇಬ್ಬರು ಭಾರತೀಯ ನಾವಿಕರಿಗೆ ಗಾಯ, ಕರಾವಳಿಯಲ್ಲಿ ಹೆಚ್ಚಿದ ಆತಂಕ
x

ಹೊರ್ಮುಜ್ ಜಲಸಂಧಿ ಬಳಿ ಹಡಗು ಅಪಘಾತ: ಇಬ್ಬರು ಭಾರತೀಯ ನಾವಿಕರಿಗೆ ಗಾಯ, ಕರಾವಳಿಯಲ್ಲಿ ಹೆಚ್ಚಿದ ಆತಂಕ

ಟೋಗೋ ದೇಶದ ಧ್ವಜ ಹೊಂದಿದ್ದ 'ಎಂಟಿ ಚಿರೋನ್ 7' ಹೆಸರಿನ ಹಡಗು ಶನಿವಾರ ಟ್ಯಾಂಕರ್‌ನ ಮೇಲ್ಭಾಗಕ್ಕೆ (bridge) ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.


Click the Play button to hear this message in audio format

ಇರಾನ್ ಸಮೀಪದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯ ಬಳಿ ಶಾರ್ಜಾಕ್ಕೆ ತೆರಳುತ್ತಿದ್ದ ಸರಕು ಹಡಗೊಂದು ಅಪಘಾತಕ್ಕೀಡಾಗಿದ್ದು, ಇಬ್ಬರು ಭಾರತೀಯರು ಸೇರಿದಂತೆ ಮೂವರು ನಾವಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಟೋಗೋ ದೇಶದ ಧ್ವಜ ಹೊಂದಿದ್ದ 'ಎಂಟಿ ಚಿರೋನ್ 7' ಹೆಸರಿನ ಹಡಗು ಶನಿವಾರ ಟ್ಯಾಂಕರ್‌ನ ಮೇಲ್ಭಾಗಕ್ಕೆ (bridge) ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪರಿಣಾಮವಾಗಿ ಹಡಗಿನಲ್ಲಿದ್ದ ಭಾರತೀಯ ನಾವಿಕರಾದ ಅಂಕಿತ್ ಕುಮಾರ್ ಮತ್ತು ಸಾಗರ್ ಚಂದ್ ಹಾಗೂ ಈಜಿಪ್ಟ್ ಪ್ರಜೆ ಝೆಯದ್ ತಹಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

17 ಭಾರತೀಯ ಸಿಬ್ಬಂದಿ ಸುರಕ್ಷಿತ

ಹಡಗು ನಿರ್ದೇಶನಾಲಯದ ವರದಿಯ ಪ್ರಕಾರ, ಈ ಹಡಗಿನಲ್ಲಿ ಒಟ್ಟು 24 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಇವರಲ್ಲಿ 17 ಮಂದಿ ಭಾರತೀಯರಾಗಿದ್ದಾರೆ. ಉಳಿದಂತೆ ಇಬ್ಬರು ಈಜಿಪ್ಟ್, ಇಬ್ಬರು ಬಾಂಗ್ಲಾದೇಶ, ಒಬ್ಬ ಪಾಕಿಸ್ತಾನ ಮತ್ತು ಒಬ್ಬ ಇರಾನ್ ಪ್ರಜೆ ಇದ್ದಾರೆ. ಗಾಯಗೊಂಡ ಮೂವರನ್ನು ಹೊರತುಪಡಿಸಿ ಉಳಿದೆಲ್ಲ ನಾವಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಹಡಗು ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ಖಚಿತಪಡಿಸಿವೆ.

ಹೊರ್ಮುಜ್ ಜಲಮಾರ್ಗದಲ್ಲಿ ಸರಣಿ ಆತಂಕ

ಕಳೆದ ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಸೇನಾ ಪಡೆಗಳು ಇರಾನ್ ಮೇಲೆ ಜಂಟಿ ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ ಆಕ್ರೋಶಗೊಂಡ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿತ್ತು. ಅಂದಿನಿಂದ ಈ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭಾರೀ ಆತಂಕ ಎದುರಾಗಿದೆ.

ಇತ್ತೀಚಿನ ದಿನಗಳಲ್ಲಿ ಹಡಗುಗಳ ಮೇಲಿನ ದಾಳಿಗಳು ಮತ್ತು ತಡೆಯುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಏಪ್ರಿಲ್ 18ರಂದು ಭಾರತದ ಧ್ವಜ ಹೊಂದಿದ್ದ 'ಸನ್ಮಾರ್ ಹೆರಾಲ್ಡ್' ಹಾಗೂ 'ಜಗ್ ಅರ್ನವ್' ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಕಳೆದ ವಾರ 22 ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಎರಡು ವಿದೇಶಿ ಧ್ವಜದ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಗುಂಡು ಹಾರಿಸಿ ಬೆದರಿಕೆ ಹಾಕಿದ್ದವು.

ಏಪ್ರಿಲ್ 25ರಂದು ಓಮನ್ ಕರಾವಳಿಯ ಹೊರ ವಲಯದಲ್ಲಿ ಟೋಗೋ ಧ್ವಜವಿದ್ದ 'ಎಂಟಿ ಸಿಲೋನ್' ಎಂಬ ಕೆಮಿಕಲ್ ಟ್ಯಾಂಕರ್‌ ಅನ್ನು ಇರಾನ್ ಕೋಸ್ಟ್ ಗಾರ್ಡ್‌ಗಳು ತಡೆದು, ಎಚ್ಚರಿಕೆ ಗುಂಡು ಹಾರಿಸಿದ್ದರು.

ಭಾರತ ಸರ್ಕಾರದ ನಿರಂತರ ಕಣ್ಗಾವಲು

ಪರ್ಷಿಯನ್ ಕೊಲ್ಲಿ ಮತ್ತು ಹೊರ್ಮುಜ್ ಜಲಸಂಧಿ ಭಾಗದಲ್ಲಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ, ಆ ಮಾರ್ಗವಾಗಿ ಸಂಚರಿಸುವ ಎಲ್ಲಾ ಭಾರತೀಯ ಹಡಗುಗಳು ಹಾಗೂ ನಾವಿಕರ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Read More
Next Story