
ಶ್ವೇತಭವನಕ್ಕೆ ಗುಡ್ ಬೈ ಹೇಳಿದ ಟ್ರಂಪ್ ಎ.ಐ ನೀತಿಯ ರೂವಾರಿ, ಚೆನ್ನೈ ಮೂಲದ ಶ್ರೀರಾಮ್ ಕೃಷ್ಣನ್!
ಕಳೆದ 18 ತಿಂಗಳುಗಳಿಂದ ಟ್ರಂಪ್ ಆಡಳಿತದಲ್ಲಿ ಅಮೆರಿಕದ ತಂತ್ರಜ್ಞಾನ ನೀತಿಯನ್ನು ಮುನ್ನಡೆಸುತ್ತಿದ್ದ ಶ್ರೀರಾಮ್ ಕೃಷ್ಣನ್, ಶನಿವಾರ ಸಾಮಾಜಿಕ ಮಾಧ್ಯಮ 'ಎಕ್ಸ್' (ಟ್ವಿಟರ್) ಮೂಲಕ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ 'ಕೃತಕ ಬುದ್ಧಿಮತ್ತೆ (AI) ನೀತಿ'ಯ ಹಿಂದಿನ ಚಾಣಕ್ಯ, ಭಾರತದ ಚೆನ್ನೈ ಮೂಲದ ಪ್ರಖ್ಯಾತ ತಂತ್ರಜ್ಞ ಶ್ರೀರಾಮ್ ಕೃಷ್ಣನ್ (42) ತಮ್ಮ ಶ್ವೇತಭವನದ 'ಹಿರಿಯ ನೀತಿ ಸಲಹೆಗಾರ' ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಅವರು ಅಧಿಕೃತವಾಗಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಕಳೆದ 18 ತಿಂಗಳುಗಳಿಂದ ಟ್ರಂಪ್ ಆಡಳಿತದಲ್ಲಿ ಅಮೆರಿಕದ ತಂತ್ರಜ್ಞಾನ ನೀತಿಯನ್ನು ಮುನ್ನಡೆಸುತ್ತಿದ್ದ ಶ್ರೀರಾಮ್ ಕೃಷ್ಣನ್, ಶನಿವಾರ ಸಾಮಾಜಿಕ ಮಾಧ್ಯಮ 'ಎಕ್ಸ್' (ಟ್ವಿಟರ್) ಮೂಲಕ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
'ಎಕ್ಸ್' ಪೋಸ್ಟ್‌ನಲ್ಲಿ ಶ್ರೀರಾಮ್ ಹೇಳಿದ್ದೇನು?
"ಈ ತಿಂಗಳ ಕೊನೆಯಲ್ಲಿ ನಾನು ಶ್ವೇತಭವನದ ಜವಾಬ್ದಾರಿಯಿಂದ ಮುಕ್ತನಾಗುತ್ತಿದ್ದೇನೆ. ಅಮೆರಿಕದ ಜನತೆಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಸವಲತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ಕೆಲಸ ಮಾಡಿದ್ದು ಅತ್ಯಂತ ಗೌರವದ ಸಂಗತಿ. ಅವರ ದೃಢ ನಿರ್ಧಾರಗಳು ಇಲ್ಲದಿದ್ದರೆ ಇಂದು ಜಾಗತಿಕ ಎ.ಐ ರೇಸ್‌ನಲ್ಲಿ ಅಮೆರಿಕ ಮುಂಚೂಣಿಯಲ್ಲಿ ಇರುತ್ತಿರಲಿಲ್ಲ. ಸದ್ಯಕ್ಕೆ ಸ್ವಲ್ಪ ದಿನಗಳ ಕಾಲ ವಿರಾಮ ಪಡೆದು, ನಂತರ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಎ.ಐ ಕ್ಷೇತ್ರದಲ್ಲಿ ಎದುರಿಸುತ್ತಿರುವ ಬೃಹತ್ ಸವಾಲುಗಳನ್ನು ನಿಭಾಯಿಸಲು ಹೊಸ ಸಂಸ್ಥೆಯೊಂದನ್ನು ಕಟ್ಟುವ ಆಲೋಚನೆ ಇದೆ." ಎಂದು ಪೋಸ್ಟ್ ಮಾಡಿದ್ದಾರೆ.
ಅಮೆರಿಕದ 'ಎ.ಐ ಆ್ಯಕ್ಷನ್ ಪ್ಲಾನ್' ರೂಪಿಸಿದ್ದ ತಜ್ಞ
ಟ್ರಂಪ್ ಆಡಳಿತಾವಧಿಯಲ್ಲಿ ಅಮೆರಿಕವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಸೂಪರ್ ಪವರ್ ಮಾಡಲು ಶ್ರೀರಾಮ್ ಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು.
ದೇಶದಾದ್ಯಂತ ಬೃಹತ್ ಡೇಟಾ ಕೇಂದ್ರಗಳ ಸ್ಥಾಪನೆ ಮತ್ತು ಇಂಧನ ಮೂಲಗಳ ಕ್ರೋಢೀಕರಣಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದರು.
ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿ ನಿಯಮಗಳನ್ನು ಸರಳಗೊಳಿಸುವಲ್ಲಿ ಮತ್ತು ರಾಜ್ಯಗಳು ಎ.ಐ ಮೇಲೆ ಅನಗತ್ಯ ನಿಯಂತ್ರಣ ಹೇರದಂತೆ ತಡೆಯುವ ಕಾರ್ಯಕಾರಿ ಆದೇಶ ರೂಪಿಸುವಲ್ಲಿ ಪ್ರಮುಖ ತಾಂತ್ರಿಕ ಸಲಹೆಗಾರರಾಗಿದ್ದರು.
ಭಾರತ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನಡೆದ ಜಾಗತಿಕ ಎ.ಐ ಶೃಂಗಸಭೆಗಳಲ್ಲಿ ಅಮೆರಿಕವನ್ನು ಪ್ರತಿನಿಧಿಸಿ ಮಿತ್ರರಾಷ್ಟ್ರಗಳೊಂದಿಗೆ 'ವೇಗವರ್ಧನೆ ಪಾಲುದಾರಿಕೆ' ಸ್ಥಾಪಿಸಿದ್ದರು.
ಶ್ವೇತಭವನದ ಎ.ಐ ಮತ್ತು ಕ್ರಿಪ್ಟೋ ಮುಖ್ಯಸ್ಥ ಡೇವಿಡ್ ಸ್ಯಾಕ್ಸ್ ಮತ್ತು ಶ್ವೇತಭವನದ ವಕ್ತಾರ ಕುಶ್ ದೇಸಾಯಿ ಅವರು ಶ್ರೀರಾಮ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, "ಅಮೆರಿಕದ ತಂತ್ರಜ್ಞಾನದ ಮೇಲುಗೈಯನ್ನು ಸಾಧಿಸುವಲ್ಲಿ ಶ್ರೀರಾಮ್ ಶ್ವೇತಭವನದ ಅಮೂಲ್ಯ ಆಸ್ತಿಯಾಗಿದ್ದರು" ಎಂದು ಹೇಳಿದ್ದಾರೆ.
ವಿವಾದ ಸೃಷ್ಟಿಸಿದ್ದ ನೇಮಕಾತಿ!
ಶ್ರೀರಾಮ್ ಕೃಷ್ಣನ್ ಅವರ ಶ್ವೇತಭವನದ ಪಯಣ ಸುಲಭದ್ದಾಗಿರಲಿಲ್ಲ. ಸಿಲಿಕಾನ್ ವ್ಯಾಲಿಯ ಖ್ಯಾತ ಹೂಡಿಕೆ ಸಂಸ್ಥೆ 'ಆಂಡ್ರೀಸ್ಸೆನ್ ಹೊರೊವಿಟ್ಜ್'ನ ಪಾಲುದಾರರಾಗಿದ್ದ ಇವರನ್ನು ಟ್ರಂಪ್ ಆಡಳಿತಕ್ಕೆ ತಂದಾಗ ತೀವ್ರ ವಿವಾದ ಸೃಷ್ಟಿಯಾಗಿತ್ತು.
ಟ್ರಂಪ್ ಅವರ ಕಟ್ಟಾ ಬೆಂಬಲಿಗಳಾದ ಲಾರಾ ಲೂಮರ್ ಅವರಂತಹ ತೀವ್ರ ಬಲಪಂಥೀಯ ನಾಯಕರು ಶ್ರೀರಾಮ್ ನೇಮಕಾತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಶ್ರೀರಾಮ್ ಕೃಷ್ಣನ್ ಹಿಂದೆ ವಿದೇಶಿ ನುರಿತ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಮಿತಿಯನ್ನು ಸಡಿಲಗೊಳಿಸಬೇಕು ಮತ್ತು ವಲಸೆ ನೀತಿಯನ್ನು ಬೆಂಬಲಿಸಿದ್ದರು ಎಂಬ ಕಾರಣಕ್ಕೆ ಟ್ರಂಪ್ ಆಡಳಿತದ 'ಅಮೆರಿಕ ಫಸ್ಟ್' ನೀತಿಗೆ ಇವರು ವಿರುದ್ಧವಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಇಲಾನ್ ಮಸ್ಕ್ ಮತ್ತು ಡೇವಿಡ್ ಸ್ಯಾಕ್ಸ್ ಅವರಂತಹ ದಿಗ್ಗಜರು ಶ್ರೀರಾಮ್ ಪರವಾಗಿ ನಿಂತಿದ್ದರು.
ಚೆನ್ನೈನಿಂದ ಶ್ವೇತಭವನದವರೆಗೆ
1984ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನನ.
ಚೆನ್ನೈನ ಎಸ್‌ಆರ್‌ಎಂ (SRM) ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನದಲ್ಲಿ (IT) ಪದವಿ ಪಡೆದರು.
2007ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಸೇರಲು ಅಮೆರಿಕಕ್ಕೆ ತೆರಳಿದ ಇವರು, ನಂತರ ಫೇಸ್‌ಬುಕ್, ಸ್ನಾಪ್ ಮತ್ತು ಟ್ವಿಟರ್‌ನಂತಹ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದರು.
2022ರಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಅವರು 'ಟ್ವಿಟರ್' (ಈಗಿನ ಎಕ್ಸ್) ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಾಗ, ಇಡೀ ವ್ಯವಸ್ಥೆಯನ್ನು ಮರುರೂಪಿಸಲು ಮಸ್ಕ್ ರಚಿಸಿದ್ದ ಆಪ್ತ ಸಲಹೆಗಾರರ ಪ್ರಮುಖ ಕೋರ್ ಟೀಮ್‌ನಲ್ಲಿ ಶ್ರೀರಾಮ್ ಕೂಡ ಇದ್ದರು.
ಪ್ರಸ್ತುತ ಟ್ರಂಪ್ ಆಡಳಿತದಿಂದ ಹೊರಬರುತ್ತಿರುವ ಶ್ರೀರಾಮ್ ಕೃಷ್ಣನ್, ಮುಂದಿನ ದಿನಗಳಲ್ಲಿ ಶ್ವೇತಭವನದ ಹೊರಗಿದ್ದುಕೊಂಡೇ ಸರ್ಕಾರಕ್ಕೆ ತಾಂತ್ರಿಕ ಬೆಂಬಲ ನೀಡುವ ಉನ್ನತ ಮಟ್ಟದ ಸ್ವತಂತ್ರ ನೀತಿ ಸಂಸ್ಥೆಯೊಂದನ್ನು ಸ್ಥಾಪಿಸಲು ಸಜ್ಜಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭವಿಷ್ಯದ ತಂತ್ರಜ್ಞಾನದ ಜಾಗತಿಕ ರೇಸ್‌ನಲ್ಲಿ ಭಾರತೀಯ ಮೂಲದ ತಜ್ಞನೊಬ್ಬ ಅಮೆರಿಕದ ದಿಕ್ಕನ್ನು ಬದಲಿಸಿ ಹೊರನಡೆದಿರುವುದು ಈಗ ಜಾಗತಿಕ ಟೆಕ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

