
ಶ್ರೀಲಂಕಾ ಜೈಲಿನಲ್ಲಿ ಭೀಕರ ದಂಗೆ: ಗಾರ್ಡ್‌ಗಳು ಸೇರಿ 23 ಜನ ಸಾವು!
ಶ್ರೀಲಂಕಾದ ನೆಗೊಂಬೊ ಜೈಲಿನಲ್ಲಿ ಮಾದಕವಸ್ತು ಗ್ಯಾಂಗ್‌ಗಳ ನಡುವೆ ಭೀಕರ ಘರ್ಷಣೆಯಾಗಿದೆ. ನಾಲ್ವರು ಗಾರ್ಡ್‌ಗಳು ಸೇರಿ 23 ಸಾವು, 100ಕ್ಕೂ ಹೆಚ್ಚು ಕೈದಿಗಳಿಗೆ ಗಂಭೀರ ಗಾಯಗಳಾಗಿವೆ.
ಶ್ರೀಲಂಕಾದ ಕಾರಾಗೃಹವೊಂದರಲ್ಲಿ ಕೈದಿಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ನಾಲ್ವರು ಗಾರ್ಡ್‌ಗಳು ಸೇರಿದಂತೆ ಕನಿಷ್ಠ 23 ಜನರು ಬಲಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ಜೈಲು ದಂಗೆ ಇದಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜಧಾನಿ ಕೊಲಂಬೋದ ಉತ್ತರದ ನೆಗೊಂಬೊ ಪ್ರಮುಖ ಜೈಲಿನಲ್ಲಿ ರಾತ್ರಿ ವೇಳೆ ಈ ಹಿಂಸಾಚಾರ ನಡೆದಿದ್ದು, ಗಾಯಗೊಂಡವರನ್ನು ತಕ್ಷಣವೇ ನೆಗೊಂಬೊ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ನಿರ್ದೇಶಕಿ ಪುಷ್ಪಾ ಗಮ್ಲತ್ ಅವರು 23 ಮೃತದೇಹಗಳು ಆಸ್ಪತ್ರೆಗೆ ಬಂದಿರುವುದನ್ನು ದೃಢಪಡಿಸಿದ್ದು, 100 ಕ್ಕೂ ಹೆಚ್ಚು ಗಾಯಾಳು ಕೈದಿಗಳು ಮತ್ತು ಗಾರ್ಡ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂಸಾಚಾರ ಮತ್ತು ಗನ್ ಶೂಟ್‌ಔಟ್
ನೆಗೊಂಬೊ ಜೈಲಿನಲ್ಲಿ ಸಾವಿರಾರು ಕೈದಿಗಳಿದ್ದು, ಭಾನುವಾರ ಸಂಜೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು. "ದಂಗೆಯನ್ನು ಹತ್ತಿಕ್ಕಲು ಯತ್ನಿಸಿದಾಗ ನಾಲ್ವರು ಜೈಲು ಸಿಬ್ಬಂದಿ (ಗಾರ್ಡ್ಸ್) ಮೃತಪಟ್ಟಿದ್ದಾರೆ. ಸೋಮವಾರ ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರಿಗೆ ಗುಂಡೇಟು ತಗುಲಿದ್ದರೆ, ಇನ್ನು ಕೆಲವರ ದೇಹದ ಮೇಲೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಹಿಳಾ ಕೈದಿಗಳ ಆಕ್ರೋಶ ಮತ್ತು ಛಾವಣಿ ಕುಸಿತ
ಜೈಲಿನಲ್ಲಿ ಗಲಾಟೆ ನಡೆಯುತ್ತಿರುವ ಸುದ್ದಿ ಹರಡುತ್ತಿದ್ದಂತೆ, ಪಕ್ಕದ ವಿಭಾಗದಲ್ಲಿದ್ದ ಮಹಿಳಾ ಕೈದಿಗಳು ಭಾನುವಾರ ರಾತ್ರಿ ಜೈಲಿನ ಮೇಲ್ಛಾವಣಿ ಏರಿ ತಮ್ಮನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದ್ದರಿಂದ ಕೆಲವು ಮಹಿಳಾ ಕೈದಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರೋನ್ ಕಣ್ಗಾವಲು ಮತ್ತು ಬಿಗಿ ಭದ್ರತೆ
ಪರಿಸ್ಥಿತಿಯನ್ನು ಹತೋಟಿಗೆ ತರಲು ಸೋಮವಾರ ಪೊಲೀಸ್ ಕಮಾಂಡೋಗಳನ್ನು ಕರೆಯಿಸಲಾಯಿತಾದರೂ, ಅವರನ್ನು ಜೈಲಿನ ಒಳಗೆ ನಿಯೋಜಿಸಲಿಲ್ಲ. ಜೈಲಿನ ಸುತ್ತಮುತ್ತಲಿನ ಪ್ರದೇಶದ ಮೇಲೆ ನಿಗಾ ಇಡಲು ವಾಯುಪಡೆಯು ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್ ಅನ್ನು ಬಳಸಿದೆ. ಮತ್ತೊಂದೆಡೆ, ಜೈಲಿನ ಒಳಗೆ ಗುಂಡಿನ ಸದ್ದು ಕೇಳಿಬರುತ್ತಿದ್ದಂತೆ ಆತಂಕಗೊಂಡ ನೂರಾರು ಕೈದಿಗಳ ಕುಟುಂಬಸ್ಥರು ಜೈಲಿನ ಹೊರಗೆ ಜಮಾಯಿಸಿದ್ದರು.
ಜೈಲಿನ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು
ಶ್ರೀಲಂಕಾದಲ್ಲಿ ಈ ರೀತಿಯ ಜೈಲು ದಂಗೆ ನಡೆಯುತ್ತಿರುವುದು ಇದ ಮೊದಲೇನಲ್ಲ. ಇತ್ತೀಚೆಗೆ ಡಿಸೆಂಬರ್ 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮತ್ತೊಂದು ಜೈಲಿನಲ್ಲಿ ನಡೆದಿದ್ದ ದಂಗೆಯಲ್ಲಿ 11 ಕೈದಿಗಳು ಬಲಿಯಾಗಿದ್ದರು ಮತ್ತು 117 ಜನರು ಗಾಯಗೊಂಡಿದ್ದರು. ಆ ಸಮಯದಲ್ಲಿ ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿತ್ತು.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಶ್ರೀಲಂಕಾದಾದ್ಯಂತ ಇರುವ ಕಾರಾಗೃಹಗಳಲ್ಲಿ ಪ್ರಸ್ತುತ 41,250 ಕೈದಿಗಳಿದ್ದಾರೆ. ಇದು ಜೈಲುಗಳ ನಿಜವಾದ ಸಾಮರ್ಥ್ಯಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಎಂದು ವರದಿಗಳು ತಿಳಿಸಿದ್ದು, ಈ ಮಿತಿಮೀರಿದ ಜನಸಂದಣಿಯೇ ಇಂತಹ ಹಿಂಸಾತ್ಮಕ ದಂಗೆಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.

