ದಕ್ಷಿಣ ಫಿಲಿಪೈನ್ಸ್‌ನಲ್ಲಿ ಭೀಕರ ಭೂಕಂಪ, ಸುನಾಮಿ ಭೀತಿ: 12 ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ
x

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸೋಮವಾರ ಸಂಭಿಸಿದ ಭೀಕರ ಭೂಕಂಪದಲ್ಲಿ ಕುಸಿದಿರುವ ಕಟ್ಟಡಗಳು

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಭೀಕರ ಭೂಕಂಪ, ಸುನಾಮಿ ಭೀತಿ: 12 ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ

ಸುನಾಮಿಯಿಂದಾಗಿ ಯಾವುದೇ ದೊಡ್ಡ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೊಲ್ ತಿಳಿಸಿದ್ದಾರೆ.


Click the Play button to hear this message in audio format

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸೋಮವಾರ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ 12 ಜನರು ಮೃತಪಟ್ಟಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಈ ಪ್ರಬಲ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ಧರಾಶಾಹಿಯಾಗಿದ್ದು, ಕರಾವಳಿ ಪ್ರದೇಶದಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಂಡಾನಾವೊದ ದಕ್ಷಿಣ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ಸುಮಾರು ಐದು ಗಂಟೆಗಳ ನಂತರ ಸುನಾಮಿಯ ಬೆದರಿಕೆ ಸದ್ಯಕ್ಕೆ ಕಳೆದಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸ್ಪಷ್ಟಪಡಿಸಿದೆ. ಸುನಾಮಿಯಿಂದಾಗಿ ಯಾವುದೇ ದೊಡ್ಡ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೊಲ್ ತಿಳಿಸಿದ್ದಾರೆ.

ಜನರಲ್ ಸ್ಯಾಂಟೋಸ್ ನಗರಕ್ಕೆ ಭಾರಿ ಹಾನಿ

ಸಮುದ್ರದಾಳದ 33 ಕಿಲೋಮೀಟರ್ ಆಳದಲ್ಲಿ ಕೇಂದ್ರಿಕೃತವಾಗಿದ್ದ ಈ ಭೂಕಂಪವು, ಈ ವರ್ಷ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದೆ. ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ, ಟ್ಯೂನ ಮೀನು ರಫ್ತು ಉದ್ಯಮದ ಪ್ರಮುಖ ಕೇಂದ್ರವಾಗಿರುವ ದಕ್ಷಿಣ ಬಂದರು ನಗರ 'ಜನರಲ್ ಸ್ಯಾಂಟೋಸ್' ಭೂಕಂಪದಿಂದಾಗಿ ತತ್ತರಿಸಿದೆ. ಇಲ್ಲಿಯೇ ಕನಿಷ್ಠ 7 ಜನರು ಮೃತಪಟ್ಟಿದ್ದು, 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಗರದ ಪ್ರಮುಖ ಪ್ರವೇಶ ಸೇತುವೆ ಸೇರಿದಂತೆ ಹಲವು ಬೃಹತ್ ಕಟ್ಟಡಗಳು ಅಪಾಯಕಾರಿ ಬಿರುಕು ಬಿಟ್ಟಿವೆ. ಉಳಿದಂತೆ ದಕ್ಷಿಣ ಕೊಟಾಬಾಟೊ, ದಾವೊ ಆಕ್ಸಿಡೆಂಟಲ್ ಮತ್ತು ಬಲುಟ್ ದ್ವೀಪಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಭೂಕಂಪದಿಂದ ಕುಸಿದಿರುವ ಮನೆಯ ಮುಂದೆ ನಿಂತಿರುವ ಕುಟುಂಬದ ಸದಸ್ಯರು

ಶಾಲಾ ಮಕ್ಕಳಿಗೆ ಗಾಯ

ಬೇಸಿಗೆ ರಜೆಯ ನಂತರ ಸೋಮವಾರವಷ್ಟೇ ದೇಶಾದ್ಯಂತ ಶಾಲೆಗಳು ಪುನರಾರಂಭಗೊಂಡಿದ್ದವು. ಜನರಲ್ ಸ್ಯಾಂಟೋಸ್ ನಗರದಲ್ಲಿ ಕುಸಿದು ಬಿದ್ದಿರುವ ಎರಡು ಅಂತಸ್ತಿನ ಶಾಲಾ ಕಟ್ಟಡದ ಅವಶೇಷಗಳ ಅಡಿಯಲ್ಲಿ ಕೆಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂಬ ವರದಿಗಳಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ, ಬೆಳಗಿನ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೂಕಂಪದ ವೇಳೆ ಉಂಟಾದ ಕಾಲ್ತುಳಿತ ಮತ್ತು ಆತಂಕದಿಂದಾಗಿ ಗಾಯಗೊಂಡಿದ್ದು, ಕೆಲವರು ಮೂರ್ಛೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ದೇಶಗಳಿಗೂ ಸುನಾಮಿ ಮುನ್ನೆಚ್ಚರಿಕೆ

ಭೂಕಂಪದ ತೀವ್ರತೆಗೆ ಜನರಲ್ ಸ್ಯಾಂಟೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, 17 ದೇಶೀಯ ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಭೂಕಂಪದ ಬೆನ್ನಲ್ಲೇ ಹಲವು ಬಾರಿ ಸಣ್ಣ ಭೂಕಂಪಗಳು ಸಂಭವಿಸಿದ್ದು, ಇದರ ಕಂಪನಗಳು ಮಲೇಷ್ಯಾದಲ್ಲೂ ವರದಿಯಾಗಿವೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದ ಕರಾವಳಿಯಲ್ಲೂ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಪತ್ತೆಯಾಗಿದ್ದು, ಮಲೇಷ್ಯಾ ಹವಾಮಾನ ಇಲಾಖೆಯು ಬೊರ್ನಿಯೊ ದ್ವೀಪದ ಸಬಾ ರಾಜ್ಯಕ್ಕೆ ಸುನಾಮಿ ಮುನ್ನೆಚ್ಚರಿಕೆ ನೀಡಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್, "ರಾಷ್ಟ್ರೀಯ ಸರ್ಕಾರವು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂತ್ರಸ್ತ ಮಿಂಡಾನಾವೊ ಪ್ರಾಂತ್ಯವನ್ನು ನಾವು ಕೈಬಿಡುವುದಿಲ್ಲ, ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.

Read More
Next Story