ಜೆನಿವಾದಲ್ಲಿ114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನ - ಡಿಜಿಟಲ್ ಕ್ರಾಂತಿ ಪ್ರದರ್ಶನ
x

ಜೆನಿವಾದಲ್ಲಿ114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನ - ಡಿಜಿಟಲ್ ಕ್ರಾಂತಿ ಪ್ರದರ್ಶನ

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ತತ್ವವು ಕಾರ್ಮಿಕರ ಅಭಿವೃದ್ಧಿಯಲ್ಲಿ ಪ್ರತಿಬಿಂಬಿತವಾಗಿದೆ. ಚರ್ಚೆಗಳು ಭಾರತದ ರಾಜತಾಂತ್ರಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದವು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.


Click the Play button to hear this message in audio format

ಸ್ವಿಜರ್‌ಲ್ಯಾಂಡ್‌ನ ಜೆನಿವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನವು ಜಾಗತಿಕ ಕಾರ್ಮಿಕ ವಲಯದ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಕೇಂದ್ರ ಕಾರ್ಮಿಕ, ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದರು. ಸಮ್ಮೇಳನದಲ್ಲಿ ಅವರು ಭಾರತದ ಒಳಗೊಳ್ಳುವ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಂವಾದದ ಬದ್ಧತೆಯನ್ನು ವಿಶ್ವಮಟ್ಟದಲ್ಲಿ ಪ್ರಬಲವಾಗಿ ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಈ ಸಮ್ಮೇಳನದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ದೇಶದ ಡಿಜಿಟಲ್ ಕ್ರಾಂತಿ ಮತ್ತು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದರು. ಭಾರತದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ತತ್ವವು ಕಾರ್ಮಿಕರ ಅಭಿವೃದ್ಧಿಯಲ್ಲೂ ಹೇಗೆ ಪ್ರತಿಬಿಂಬಿತವಾಗಿದೆ ಎಂಬುದನ್ನು ಅವರು ಸಮ್ಮೇಳನದಲ್ಲಿ ವಿವರಿಸಿದರು. ಅವರ ಭೇಟಿ ಮತ್ತು ಚರ್ಚೆಗಳು ಭಾರತದ ರಾಜತಾಂತ್ರಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದವು.

ನೇಪಾಳದೊಂದಿಗೆ ಸ್ನೇಹಹಸ್ತ – 'ನೆರೆಹೊರೆ ಮೊದಲು' ನೀತಿ

ಇದೇ ವೇಳೆ ನೇಪಾಳದ ಯುವ, ಕಾರ್ಮಿಕ ಮತ್ತು ಉದ್ಯೋಗ ಸಚಿವ ರಾಮ್‌ಜಿ ಯಾದವ್ ಅವರೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತದ 'ನೆರೆಹೊರೆ ಮೊದಲು' ನೀತಿಯನ್ನು ಪುನರುಚ್ಚರಿಸಿದ ಸಚಿವರು, ನೇಪಾಳವು ಭಾರತದ ಅತ್ಯಂತ ಆಪ್ತ ಪಾಲುದಾರ ಎಂದು ಹೇಳಿದರು. ನೇಪಾಳವು ಭಾರತದ ಡಿಜಿಟಲ್ ಪೋರ್ಟಲ್‌ಗಳ ಕಾರ್ಯನಿರ್ವಹಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿತು. ಕೌಶಲ್ಯ ಅಭಿವೃದ್ಧಿ, ಕಾರ್ಮಿಕರ ವಲಸೆ ನಿರ್ವಹಣೆ ಮತ್ತು ಡಿಜಿಟಲ್ ತಂತ್ರಜ್ಞಾನ ಹಂಚಿಕೆಯಲ್ಲಿ ಪರಸ್ಪರ ಸಹಕಾರ ನೀಡಲು ಉಭಯ ನಾಯಕರು ನಿರ್ಧರಿಸಿದರು. ಇದು ಎರಡೂ ದೇಶಗಳ ಕಾರ್ಮಿಕರ ಕಲ್ಯಾಣಕ್ಕೆ ಹೊಸ ದಾರಿ ಮಾಡಿಕೊಡಲಿದೆ.

ಅಂಗೋಲಾದೊಂದಿಗೆ ಡಿಜಿಟಲ್ ಸಹಯೋಗ

ಅಂಗೋಲಾದ ಸಾರ್ವಜನಿಕ ಆಡಳಿತ, ಕಾರ್ಮಿಕ ಮತ್ತು ಸಾಮಾಜಿಕ ಭದ್ರತಾ ಸಚಿವೆ ತೆರೆಸಾ ರೋಡ್ರಿಗಸ್ ಡಯಾಸ್ ಅವರನ್ನು ಭೇಟಿಯಾದರು. ಈ ಮಾತುಕತೆಯು ಉದ್ಯೋಗ ಸೇವೆಗಳು ಮತ್ತು ಡಿಜಿಟಲ್ ಆಡಳಿತದ ಮೇಲೆ ಕೇಂದ್ರೀಕೃತವಾಗಿತ್ತು. ಅಂಗೋಲಾ ಸರ್ಕಾರವು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳನ್ನು ಮೆಚ್ಚಿಕೊಂಡಿತು. ಈ ನಿಟ್ಟಿನಲ್ಲಿ, ಉದ್ಯೋಗಿಗಳ ನೋಂದಣಿ, ಉದ್ಯೋಗ ಮತ್ತು ಕೌಶಲ್ಯ ಹೊಂದಾಣಿಕೆಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲು ಭಾರತವು ಅಂಗೋಲಾಗೆ ತಾಂತ್ರಿಕ ನೆರವು ಮತ್ತು ಸಾಮರ್ಥ್ಯ ವರ್ಧನೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿತು.

ಜಾಗತಿಕ ನಾಯಕರೊಂದಿಗೆ ಕೌಶಲ್ಯ ವಲಸೆಯ ಕುರಿತು ಚರ್ಚೆ

ಸಮ್ಮೇಳನದ ಅತ್ಯಂತ ಮಹತ್ವದ ಭಾಗವೆಂದರೆ ಫ್ರಾನ್ಸ್, ಯುಕೆ, ದಕ್ಷಿಣ ಕೊರಿಯಾ, ಯುಎಸ್ಎ ಮತ್ತು ಕೆನಡಾ ದೇಶಗಳ ಕಾರ್ಮಿಕ ಸಚಿವರೊಂದಿಗಿನ ಸಚಿವೆ ಶೋಭಾ ಕರಂದ್ಲಾಜೆ ಅವರ ಸಭೆಯಾಗಿದೆ. ದೇಶದ ನುರಿತ ಮಾನವ ಸಂಪನ್ಮೂಲಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಕೌಶಲ್ಯಗಳ ಪರಸ್ಪರ ಮಾನ್ಯತೆ ಮೂಲಕ ಭಾರತೀಯ ಯುವಕರು ಈ ದೇಶಗಳಲ್ಲಿ ಉದ್ಯೋಗ ಪಡೆಯಲು ಕಾನೂನುಬದ್ಧ ಮಾರ್ಗಗಳನ್ನು ಸುಗಮಗೊಳಿಸುವ ಕುರಿತು ಚರ್ಚಿಸಲಾಯಿತು. ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಭಾರತದಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ನಡೆದ ಈ ಸರಣಿ ಸಭೆಗಳು, ಭಾರತವು ಕೇವಲ ವಿಶ್ವದ ಕಾರ್ಖಾನೆಯಾಗಷ್ಟೇ ಅಲ್ಲ, ಬದಲಾಗಿ ವಿಶ್ವದ ಕೌಶಲ್ಯ ಕೇಂದ್ರ ಆಗಿ ಹೊರಹೊಮ್ಮುತ್ತಿದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದವು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಕಾರ್ಮಿಕರ ನೋಂದಣಿ ಮತ್ತು ಸೇವಾ ವಿತರಣೆಯಲ್ಲಿ ಭಾರತ ಸಾಧಿಸಿರುವ ಪ್ರಗತಿಯು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿಯಾಗಿದೆ.

Read More
Next Story