
ಅಮೆರಿಕದಲ್ಲಿ ಕಳ್ಳ ವ್ಯವಹಾರ ನಡೆಸಿ ಸಿಕ್ಕಿಬಿದ್ದ ಇರಾನ್‌ನ 'ಸುಂದರಿ' ಷಮೀಮ್ ಮಾಫಿ ಯಾರು?
ಏಪ್ರಿಲ್ 18ರ ಶನಿವಾರದಂದು ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟರ್ಕಿಯ ಇಸ್ತಾಂಬುಲ್‌ಗೆ ಹಾರಲು ಷಮೀಮ್ ಸಜ್ಜಾಗಿದ್ದಾಗ ಎಫ್‌ಬಿಐ ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ.
ಐಷಾರಾಮಿ ಕಾರುಗಳು, ವಿದೇಶಿ ಪ್ರವಾಸಗಳು, ಅಮೆರಿಕದ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ... ಇದು 44 ವರ್ಷದ ಷಮೀಮ್ ಮಾಫಿ ಎಂಬ ಇರಾನ್ ಮೂಲದ ಮಹಿಳಾ ಉದ್ಯಮಿಯ ಜೀವನಶೈಲಿ. ಆದರೆ ಈ ಐಷಾರಾಮಿ ಜೀವನದ ಹಿಂದಿದ್ದ ದೊಡ್ಡ ರಹಸ್ಯ ಇದೀಗ ಬಯಲಾಗಿದೆ. ಇರಾನ್ ಸರ್ಕಾರದ ಪರವಾಗಿ, ಅಂತರ್ಯುದ್ಧದಿಂದ ನಲುಗಿರುವ ಸೂಡಾನ್‌ಗೆ ಮಾರಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಗಂಭೀರ ಆರೋಪದ ಮೇಲೆ ಷಮೀಮ್ ಮಾಫಿ ಅವರನ್ನು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಶನಿವಾರ (ಏ.18) ಎಫ್‌ಬಿಐ (FBI) ಅಧಿಕಾರಿಗಳು ಬಂಧಿಸಿದ್ದಾರೆ.
ಯಾರು ಈ ಷಮೀಮ್ ಮಾಫಿ?
ಷಮೀಮ್ ಮಾಫಿ ಮೂಲತಃ ಇರಾನ್‌ನವರು. 2013ರಲ್ಲಿ ಇರಾನ್ ತೊರೆದಿದ್ದ ಅವರು, 2016ರಲ್ಲಿ ಅಮೆರಿಕದ 'ಗ್ರೀನ್ ಕಾರ್ಡ್' (ಕಾಯಂ ನಿವಾಸಿ) ಪಡೆದು, ಲಾಸ್ ಏಂಜಲೀಸ್‌ನ ವುಡ್‌ಲ್ಯಾಂಡ್ ಹಿಲ್ಸ್ ಎಂಬ ಅತ್ಯಂತ ದುಬಾರಿ ಬಡಾವಣೆಯಲ್ಲಿ ನೆಲೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದ ಇವರು, 1 ಲಕ್ಷ ಡಾಲರ್ ಮೌಲ್ಯದ ಮರ್ಸಿಡಿಸ್ ಕಾರು ಸೇರಿದಂತೆ ತಮ್ಮ ಸಿರಿವಂತಿಕೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಟರ್ಕಿಯ ಇಸ್ತಾಂಬುಲ್‌ಗೆ ಆಗಾಗ್ಗೆ ವ್ಯಾಪಾರ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರು. ಅಮೆರಿಕ, ಇರಾನ್, ಟರ್ಕಿ ಮತ್ತು ಓಮನ್ ನಡುವೆ ನಿರಂತರವಾಗಿ ಓಡಾಡುತ್ತಿದ್ದ ಇವರ ಜೀವನಶೈಲಿಯೇ ಎಲ್ಲರ ಕಣ್ಣುಕುಕ್ಕುವಂತಿತ್ತು.
ಷಮೀಮ್ ಮೇಲಿರುವ ಗಂಭೀರ ಆರೋಪಗಳೇನು?
ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಮಾಡಿರುವ ಆರೋಪಗಳ ಪ್ರಕಾರ, ಷಮೀಮ್ ಅವರು ಸಾಮಾನ್ಯ ಉದ್ಯಮಿಯಾಗಿರಲಿಲ್ಲ. ಬದಲಿಗೆ ಇರಾನ್ ಸರ್ಕಾರ ಮತ್ತು ಸೂಡಾನ್ ರಕ್ಷಣಾ ಪಡೆಗಳ ನಡುವೆ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು.
ಓಮನ್‌ನಲ್ಲಿ 'ಅಟ್ಲಾಸ್ ಇಂಟರ್‌ನ್ಯಾಷನಲ್ ಬಿಸಿನೆಸ್' ಎಂಬ ಕಂಪನಿಯನ್ನು ತೆರೆದು, ಅದರ ಮೂಲಕ ಶಸ್ತ್ರಾಸ್ತ್ರಗಳ ಮಾರಾಟ ಮಾಡುತ್ತಿದ್ದರು. ಅಮೆರಿಕದ ಕಣ್ಣಿಗೆ ಮಣ್ಣೆರಚಲು ಟರ್ಕಿ ಮತ್ತು ಯುಎಇ ಮೂಲಕ ಹಣದ ವ್ಯವಹಾರ ನಡೆಸುತ್ತಿದ್ದರು.
ಇರಾನ್ ರಕ್ಷಣಾ ಸಚಿವಾಲಯದಿಂದ ಅತ್ಯಾಧುನಿಕ 'ಮೊಹಾಜರ್-6' (Mohajer-6) ಸಶಸ್ತ್ರ ಡ್ರೋನ್‌ಗಳನ್ನು ಸೂಡಾನ್‌ಗೆ ಪೂರೈಸುವ ಒಪ್ಪಂದ ಮಾಡಿಕೊಂಡಿದ್ದರು. ಈ ಒಂದು ಡೀಲ್‌ನ ಮೌಲ್ಯ ಬರೋಬ್ಬರಿ 7 ಕೋಟಿ ಡಾಲರ್ (70 ಮಿಲಿಯನ್) ಆಗಿತ್ತು. ಡ್ರೋನ್ ಮಾತ್ರವಲ್ಲದೆ, 55,000 ಬಾಂಬ್ ಫ್ಯೂಸ್‌ಗಳು ಹಾಗೂ ಲಕ್ಷಾಂತರ ಮದ್ದುಗುಂಡುಗಳನ್ನು ಇರಾನ್‌ನಿಂದ ಸೂಡಾನ್‌ಗೆ ರವಾನಿಸಲು ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಡಿಸೆಂಬರ್ 2022ರಿಂದ ಜೂನ್ 2025ರ ವರೆಗೆ ಇರಾನ್‌ನ ಗುಪ್ತಚರ ಮತ್ತು ಭದ್ರತಾ ಸಚಿವಾಲಯದ (MOIS) ಜೊತೆ ಷಮೀಮ್ ನೇರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ, ಫೆಡರಲ್ ಏಜೆಂಟ್‌ಗಳ ವಿಚಾರಣೆ ವೇಳೆ, ತಮ್ಮ ಮೊದಲ ಪತಿ ಇರಾನ್‌ನ ಗುಪ್ತಚರ ಇಲಾಖೆಯ ಅಧಿಕಾರಿಯಾಗಿದ್ದರು ಎಂಬುದನ್ನು ಷಮೀಮ್ ಬಾಯಿಬಿಟ್ಟಿದ್ದಾರೆ.
ಅರೆಸ್ಟ್ ಆಗಿದ್ದೇಗೆ?
ಏಪ್ರಿಲ್ 18ರ ಶನಿವಾರದಂದು ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟರ್ಕಿಯ ಇಸ್ತಾಂಬುಲ್‌ಗೆ ಹಾರಲು ಷಮೀಮ್ ಸಜ್ಜಾಗಿದ್ದರು. ಈ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಫ್‌ಬಿಐ ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ.
ಅಮೆರಿಕದ ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಉಲ್ಲಂಘಿಸಿದ ಹಾಗೂ ನಿರ್ಬಂಧ ಹೇರಲ್ಪಟ್ಟ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಆರೋಪಗಳು ಸಾಬೀತಾದರೆ ಷಮೀಮ್ ಮಾಫಿಗೆ ಗರಿಷ್ಠ 20 ವರ್ಷಗಳ ಕಠಿಣ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಆದರೆ, ತಾವು ಇರಾನ್ ಸರ್ಕಾರದ ಪರವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಷಮೀಮ್ ತನಿಖೆ ವೇಳೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಗಮನಾರ್ಹ ಅಂಶವೆಂದರೆ, ಇರಾನ್ ಸರ್ಕಾರವು ಷಮೀಮ್ ಅವರ ತಂದೆಯ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಆ ಆಸ್ತಿಯನ್ನು ಮರಳಿ ಪಡೆಯಲು ಇರಾನ್ ಸರ್ಕಾರದ ಒತ್ತಡಕ್ಕೆ ಮಣಿದು ಷಮೀಮ್ ಈ ಕಳ್ಳಸಾಗಣೆ ದಂಧೆಗೆ ಇಳಿದಿರಬಹುದು ಎಂಬ ಅನುಮಾನಗಳೂ ವ್ಯಕ್ತವಾಗಿವೆ

