
ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರನ ಶವ ಪತ್ತೆ
ರಾಜಕುಮಾರ ಅಬ್ದುಲ್ಲಾ ಅವರ ರಕ್ತದಲ್ಲಿ ಮದ್ಯದ ಪ್ರಮಾಣ ಭಾರಿ ಮಟ್ಟದಲ್ಲಿತ್ತು. ಇದರೊಂದಿಗೆ ಜಿಎಚ್‌ಬಿ ಎಂಬ ಪಾರ್ಟಿ ಡ್ರಗ್, ಗಾಂಜಾ, ಕ್ಸಾನಾಕ್ಸ್ ಹಾಗೂ ಆತಂಕ ಶಮನಗೊಳಿಸುವ ಮಾತ್ರೆಗಳನ್ನು ಸೇವಿಸಿದ್ದು ಕಂಡುಬಂದಿದೆ.
ಲಂಡನ್‌ನ ಐಷಾರಾಮಿ ಹೋಟೆಲ್ ಒಂದರಲ್ಲಿ ಸೌದಿ ಅರೇಬಿಯಾದ 29 ವರ್ಷದ ಯುವರಾಜ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮದ್ಯ ಹಾಗೂ ವಿವಿಧ ಬಗೆಯ ಅಪಾಯಕಾರಿ ಡ್ರಗ್ಸ್ ಸೇವಿಸಿ ದುರಂತ ಅಂತ್ಯ ಕಂಡಿದ್ದಾರೆ ಎಂದು ಯುಕೆ ಆಸ್ಪತ್ರೆ ನೀಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪತ್ತೆಯಾಗಿದೆ.
ಸೌದಿ ಅರೇಬಿಯಾ ರಾಜಮನೆತನದ ಯುವರಾಜ ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಬಿನ್ ಜಲಾವಿ ಅಲ್ ಸೌದ್ ನವೆಂಬರ್ 25 ರಂದು ಕೆನ್ಸಿಂಗ್ಟನ್‌ನಲ್ಲಿರುವ ಒಂದು ರಾತ್ರಿಗೆ £600 (ಅಂದಾಜು 65,000 ರೂ.ಗಳಿಗೂ ಹೆಚ್ಚು) ಬಾಡಿಗೆ ಇರುವ 'ಮ್ಯಾರಿಯಾಟ್ ಹೋಟೆಲ್' ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಹೋಟೆಲ್ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆ
ನವೆಂಬರ್ 19 ರಂದು ಒಂದು ವಾರದ ತಂಗುವಿಕೆಗಾಗಿ ಹೋಟೆಲ್‌ಗೆ ಆಗಮಿಸಿದ್ದ ರಾಜಕುಮಾರನನ್ನು ಕೊನೆಯ ಬಾರಿಗೆ ಸಿವಿಟಿವಿಯಲ್ಲಿ ನ.24ರ ಸಂಜೆ ಸಿಗರೇಟ್ ಸೇದಲು ಹೊರಬಂದಾಗ ನೋಡಲಾಗಿತ್ತು. ಮಾರನೇ ದಿನ ಕೊಠಡಿ ಶುಚಿಗೊಳಿಸಲು ಬಂದ ಹೋಟೆಲ್ ಸಿಬ್ಬಂದಿಗೆ ಅವರು ಬಾತ್‌ರೂಮ್‌ನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡುಬಂದಿದೆ. ವೈದ್ಯಕೀಯ ಸಿಬ್ಬಂದಿ ಆಗಮಿಸಿ ತಪಾಸಣೆ ನಡೆಸಿದರೂ, ಅವರು ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಟಾಕ್ಸಿಕಾಲಜಿ ವರದಿಯಲ್ಲಿ ಶಾಕಿಂಗ್ ಸತ್ಯ
ಪರೀಕ್ಷೆಯ ವರದಿ ಪ್ರಕಾರ, ರಾಜಕುಮಾರ ಅಬ್ದುಲ್ಲಾ ಅವರ ರಕ್ತದಲ್ಲಿ ಮದ್ಯದ ಪ್ರಮಾಣ ಭಾರಿ ಮಟ್ಟದಲ್ಲಿತ್ತು. ಇದರೊಂದಿಗೆ ಜಿಎಚ್‌ಬಿ ಎಂಬ ಪಾರ್ಟಿ ಡ್ರಗ್, ಗಾಂಜಾ, ಕ್ಸಾನಾಕ್ಸ್ ಹಾಗೂ ಆತಂಕ ಶಮನಗೊಳಿಸುವ ಮಾತ್ರೆಗಳನ್ನು ಸೇವಿಸಿದ್ದು ಕಂಡುಬಂದಿದೆ. ಈ ಎಲ್ಲಾ ವಿಷಕಾರಿ ರಾಸಾಯನಿಕಗಳ ಮಿಶ್ರಣದಿಂದಾಗಿ ಹೃದಯಾಘಾತ ಸಂಭವಿಸಿ ಅವರು ಮೃತಪಟ್ಟಿದ್ದಾರೆ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ರಾಜಕುಮಾರ
ರಾಜಕುಮಾರ ಅಬ್ದುಲ್ಲಾ ಅವರು ಸುದೀರ್ಘ ಕಾಲದಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟಕ್ಕೆ ಒಳಗಾಗಿದ್ದರು. ಆಗಸ್ಟ್ 2025 ರಲ್ಲಿ ಲಂಡನ್‌ನ ಪ್ರಸಿದ್ಧ ಪ್ರಿಯೋರಿ ಕ್ಲಿನಿಕ್‌ನಲ್ಲಿ ಡಿಕಾಕ್ಸಿಫಿಕೇಶನ್ (ವ್ಯಸನ ಮುಕ್ತಿ) ಚಿಕಿತ್ಸೆ ಪಡೆದಿದ್ದರು. ಬಳಿಕ ಮತ್ತೊಂದು ಕ್ಲಿನಿಕ್‌ನಲ್ಲೂ ಚಿಕಿತ್ಸೆ ಪಡೆದು ಹೊರಬಂದಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪ್ರಕರಣದ ವಿಚಾರಣೆ ನಡೆಸಿದ ಸಹಾಯಕ ಕರೋನರ್ ಜೀನ್ ಹಾರ್ಕಿನ್, ಯುವರಾಜ ಅಬ್ದುಲ್ಲಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಕೊಠಡಿಯಲ್ಲಿ ಡೆತ್ ನೋಟ್ ಆಗಲಿ ಅಥವಾ ಅವರು ಮಾನಸಿಕವಾಗಿ ಕುಗ್ಗಿದ ಕುರುಹುಗಳಾಗಲಿ ಸಿಕ್ಕಿಲ್ಲ. ಸಿಟಿಟಿವಿ ಪರಿಶೀಲನೆಯಲ್ಲೂ ಯಾರದೇ ಅಕ್ರಮ ಪ್ರವೇಶ ಕಂಡುಬಂದಿಲ್ಲ. ಹೀಗಾಗಿ ಇದು ಮದ್ಯ ಮತ್ತು ಡ್ರಗ್ಸ್ ಓವರ್‌ಡೋಸ್‌ನಿಂದ ಸಂಭವಿಸಿದ ಅಪಘಾತಕಾರಿ ಸಾವು ಎಂದು ತೀರ್ಪು ನೀಡಿದ್ದಾರೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಿಐಪಿ ಇಮಾಮ್ ಟರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ರಾಜಕುಮಾರನ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಸೌದಿ ರಾಜಮನೆತನ ಪ್ರಕಟಣೆಯಲ್ಲಿ ತಿಳಿಸಿದೆ.

