ಪ್ಲೇಗ್‌ಗೆ ರಷ್ಯಾ ಸಂಶೋಧಕಿ ಬಲಿ- 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್
x

ಪ್ಲೇಗ್‌ಗೆ ರಷ್ಯಾ ಸಂಶೋಧಕಿ ಬಲಿ- 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್

ಮಾದರಿಗಳ ಪರೀಕ್ಷೆಗಾಗಿ ಸಂಗ್ರಹಿಸುವ ಸಂದರ್ಭದಲ್ಲಿ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಪರೀಕ್ಷಾ ನಳಿಕೆ ಆಕಸ್ಮಿಕವಾಗಿ ಒಡೆದಿದ್ದು, ಇದರಿಂದ ನ್ಯುಮೋನಿಕ್ ಪ್ಲೇಗ್ ಸೋಂಕು ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿರುವ ಇರ್ಕುಟ್ಸ್ಕ್‌ನಲ್ಲಿ ಪ್ಲೇಗ್ ಸೋಂಕಿನ ಆತಂಕ ಎದುರಾಗಿದೆ. ಪ್ರಯೋಗಾಲಯದ 28 ವರ್ಷದ ಸಂಶೋಧಕಿ ಮೃತಪಟ್ಟಿದ್ದು, ಇದಾದ ಬಳಿಕ ಕನಿಷ್ಠ ಐದು ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, ಅವರ ಸಂಪರ್ಕಕ್ಕೆ ಬಂದಿರುವ 200ಕ್ಕೂ ಹೆಚ್ಚು ಮಂದಿಯನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

ಶೆಲೆಖೋವ್‌ನಲ್ಲಿರುವ ಪ್ಲೇಗ್‌ ಸಂಶೋಧನಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ಮಾದರಿಗಳ ಪರೀಕ್ಷೆಗಾಗಿ ಸಂಗ್ರಹಿಸುವ ಸಂದರ್ಭದಲ್ಲಿ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಪರೀಕ್ಷಾ ನಳಿಕೆ ಆಕಸ್ಮಿಕವಾಗಿ ಒಡೆದಿದ್ದು, ಇದರಿಂದ ನ್ಯುಮೋನಿಕ್ ಪ್ಲೇಗ್ ಸೋಂಕಿಗೆ ಒಳಗಾಗಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೆಪ್ಟೆಂಬರ್‌ 29ರಂದು ತೀವ್ರ ನ್ಯುಮೋನಿಯಾ ಲಕ್ಷಣಗಳೊಂದಿಗೆ ಶಿಪಿಲೋವಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಉಸಿರಾಟದ ಯಂತ್ರದ ನೆರವು ನೀಡಲಾಗಿತ್ತು. ಆದರೆ ಅಕ್ಟೋಬರ್‌ 1ರಂದು ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

200ಕ್ಕೂ ಹೆಚ್ಚು ಮಂದಿಗೆ ಕ್ವಾರಂಟೈನ್‌

ಶಿಪಿಲೋವಾ ಅವರೊಂದಿಗೆ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇರುವ 200ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇರ್ಕುಟ್ಸ್ಕ್‌ನಲ್ಲಿ ಕೆಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಇರ್ಕುಟ್ಸ್ಕ್‌ ಪ್ರಾಂತ್ಯದ ಗವರ್ನರ್ ಇಗೋರ್ ಕೊಬ್ಜೆವ್ ಆರಂಭದಲ್ಲಿ ಇದು 'ಅತ್ಯಂತ ಅಪಾಯಕಾರಿ ಸೋಂಕಿನ' ಶಂಕಿತ ಪ್ರಕರಣ ಎಂದು ಹೇಳಿ, ಸಾರ್ವಜನಿಕರು ಆತಂಕಪಡದಂತೆ ಮನವಿ ಮಾಡಿದ್ದರು. ಬಳಿಕ ಅವರು, ಇದು ಕಾರಣ ತಿಳಿಯದ ನ್ಯುಮೋನಿಯಾ ಪ್ರಕರಣವಾಗಿದ್ದು, ರೋಗಿಯ ಮಾದರಿಗಳಲ್ಲಿ ಅವರ ವೃತ್ತಿಪರ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಸಂಶೋಧನಾ ಸಂಸ್ಥೆಯ ಯಾವುದೇ ಸಿಬ್ಬಂದಿಯಲ್ಲಿ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದೂ ಅವರು ಹೇಳಿದ್ದಾರೆ. ರೋಗಿಯ ಸಂಪರ್ಕಿತರನ್ನು ಗುರುತಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರತಿದಿನ ಪ್ರಯೋಗಾಲಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ಲೇಗ್ ನಿಯಂತ್ರಣಕ್ಕೆ ತುರ್ತು ಕ್ರಮ

ಅಕ್ಟೋಬರ್‌ 2ರಂದು ಕೊಬ್ಜೆವ್ ರಷ್ಯಾದ ಗ್ರಾಹಕ ಸುರಕ್ಷತಾ ಮೇಲ್ವಿಚಾರಣಾ ಸಂಸ್ಥೆ ರೊಸ್ಪೊಟ್ರೆಬ್ನಾಡ್ಜೋರ್‌ನ ಮುಖ್ಯಸ್ಥರನ್ನು ಭೇಟಿಯಾಗಿ ತುರ್ತು ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಿದ್ದರು. ಸೋಂಕು ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ಬುರ್ಯಾತಿಯಾ ಪ್ರದೇಶದ ಗವರ್ನರ್ ಅಲೆಕ್ಸಿ ತ್ಸಿಡೆನೋವ್ ಕೂಡ ಇರ್ಕುಟ್ಸ್ಕ್‌ನ ಮಹಿಳೆಯೊಬ್ಬರು ಪ್ಲೇಗ್‌ನಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಆದರೆ ತಮ್ಮ ಪ್ರದೇಶದಲ್ಲಿ ಯಾವುದೇ ಪ್ಲೇಗ್‌ ಏಕಾಏಕಿ ಹರಡುವಿಕೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story