ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: ವಿರೋಧದ ಮಧ್ಯೆ ಭದ್ರತೆಯ ಸೂಚನೆ
x

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: ವಿರೋಧದ ಮಧ್ಯೆ ಭದ್ರತೆಯ ಸೂಚನೆ

ಪ್ರತಿಭಟನೆಗೆ ಮುಂದಾಗಿರುವ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್‌ನ ಉಪ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರವ್ಯಾ ತಡೆಪಲ್ಲಿ ಅವರು ಮೋಹನ್ ಭಾಗವತ್ ಅವರನ್ನು ಕಠಿಣವಾಗಿ ಟೀಕಿಸಿದ್ದಾರೆ.


Click the Play button to hear this message in audio format

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮವು ಇದೀಗ ಭಾರಿ ಚರ್ಚೆಗೆ ಮತ್ತು ವಿವಾದಕ್ಕೆ ಗ್ರಾಸವಾಗಿದೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಇನ್ಫೋಸಿಸ್ ಥಿಯೇಟರ್‌ನಲ್ಲಿ ಶನಿವಾರ ನಡೆಯಲಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಅಮೆರಿಕ ಮೂಲದ ಹಿಂದೂ ಅಮೆರಿಕನ್ ಫೌಂಡೇಶನ್ ತನ್ನ ಸಮುದಾಯದ ಸದಸ್ಯರಿಗೆ ವಿಶೇಷ ಭದ್ರತಾ ಎಚ್ಚರಿಕೆಯನ್ನು ನೀಡಿದೆ.

ಮೋಹನ್ ಭಾಗವತ್ ಅವರ ಭೇಟಿಯನ್ನು ವಿರೋಧಿಸಿ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಕಾರ್ಯಕ್ರಮದ ಹೊರಗಡೆ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. ಈ ಪ್ರತಿಭಟನಾಕಾರರು ಕಾರ್ಯಕ್ರಮವನ್ನು ಅಡ್ಡಿಪಡಿಸುವ ಅಥವಾ ರದ್ದುಗೊಳಿಸುವ ಪ್ರಯತ್ನ ಮಾಡಬಹುದು ಎಂಬ ಮಾಹಿತಿಯನ್ನು ಎಚ್‌ಎಎಫ್‌ ಹಂಚಿಕೊಂಡಿದೆ. ಭಾಗವತ್ ಅವರ ಸಿದ್ಧಾಂತ ಮತ್ತು ಆರ್‌ಎಸ್‌ಎಸ್‌ನ ಕಾರ್ಯವೈಖರಿಯನ್ನು ಈ ಸಂಘಟನೆಗಳು ತೀವ್ರವಾಗಿ ಟೀಕಿಸುತ್ತಿವೆ.

ವಿರೋಧ ಪಕ್ಷದ ನಿಲುವು

ಪ್ರತಿಭಟನೆಗೆ ಮುಂದಾಗಿರುವ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್‌ನ ಉಪ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರವ್ಯಾ ತಡೆಪಲ್ಲಿ ಅವರು ಮೋಹನ್ ಭಾಗವತ್ ಅವರನ್ನು ಕಠಿಣವಾಗಿ ಟೀಕಿಸಿದ್ದಾರೆ. ಮೋಹನ್ ಭಾಗವತ್ ಅವರು ಇಡೀ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಅವರು ಒಂದು ಉಗ್ರ ಹಿಂದೂ ರಾಷ್ಟ್ರೀಯತಾವಾದಿ ಚಳವಳಿಯ ನೇತೃತ್ವ ವಹಿಸಿದ್ದಾರೆ. ಈ ಚಳವಳಿಯು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾಚಾರ, ಬಹಿಷ್ಕಾರ ಮತ್ತು ಭಯವನ್ನು ಬಿತ್ತಿದೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಮಣ್ಣಿನಲ್ಲಿ ಇಂತಹ ಸಿದ್ಧಾಂತಕ್ಕೆ ಅವಕಾಶ ನೀಡಬಾರದು ಎಂಬುದು ಇವರ ವಾದವಾಗಿದೆ.

ಎಚ್‌ಎಎಫ್‌ನ ಸಲಹೆ, ಎಚ್ಚರಿಕೆ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್‌) ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಮನವಿ ಮಾಡಿದೆ. ಕಾರ್ಯಕ್ರಮಕ್ಕೆ ಬರುವವರು ಶಾಂತರಾಗಿರಿ. ಪ್ರತಿಭಟನಾಕಾರರ ಹಕ್ಕನ್ನು ಗೌರವಿಸಿ. ಅವರೊಂದಿಗೆ ಯಾವುದೇ ರೀತಿಯ ವಾಗ್ವಾದ ಅಥವಾ ಸಂಘರ್ಷಕ್ಕೆ ಇಳಿಯಬೇಡಿ ಎಂದು ತಿಳಿಸಲಾಗಿದೆ. ಸುತ್ತಮುತ್ತಲಿನ ಪರಿಸರದ ಬಗ್ಗೆ ನಿಗಾ ಇಡಿ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಒಂದು ವೇಳೆ ನಿಮಗೆ ಯಾರಾದರೂ ಬೆದರಿಕೆ ಹಾಕುತ್ತಿದ್ದಾರೆ ಅಥವಾ ಅಪಾಯ ಇದೆ ಎಂದು ಅನಿಸಿದರೆ, ತಕ್ಷಣವೇ ಸ್ಥಳದಿಂದ ನಿರ್ಗಮಿಸಿ. ತುರ್ತು ಪರಿಸ್ಥಿತಿಯಲ್ಲಿ 911ಗೆ ಕರೆ ಮಾಡಬೇಕು ಮತ್ತು ವಿನಾಶಕಾರಿ ಚಟುವಟಿಕೆಗಳು, ಬೆದರಿಕೆ ಅಥವಾ ದ್ವೇಷಪೂರಿತ ಹೇಳಿಕೆಗಳನ್ನು ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ತಿಳಿಸಲಾಗಿದೆ.

ಸ್ಥಳೀಯ ಆಡಳಿತಕ್ಕೆ ಮನವಿ

ಅಮೆರಿಕದಲ್ಲಿ ನೆಲೆಸಿರುವ ಹಿಂದೂಗಳ ಹಕ್ಕು ಮತ್ತು ಭದ್ರತೆಯನ್ನು ಖಾತರಿಪಡಿಸುವಂತೆ ಎಚ್‌ಎಎಫ್‌ ನ್ಯೂಯಾರ್ಕ್‌ನ ಮೇಯರ್ ಜೊಹ್ರಾನ್ ಮಾಮ್ದಾನಿ ಅವರಲ್ಲಿ ಮನವಿ ಮಾಡಿದೆ. ಪ್ರತಿ ನಾಗರಿಕನಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಸಭೆ ಸೇರುವ ಹಕ್ಕು ಇದೆ, ಆದರೆ ಅದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ಬರುವ ಜನರ ಸುರಕ್ಷತೆ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಎಚ್‌ಎಎಫ್ ಒತ್ತಿ ಹೇಳಿದೆ. ಈ ಘಟನೆಯು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರಲ್ಲಿನ ಸಿದ್ಧಾಂತಗಳ ಸಂಘರ್ಷವನ್ನು ಎತ್ತಿ ತೋರಿಸಿದೆ. ಮೋಹನ್ ಭಾಗವತ್ ಅವರ ಕಾರ್ಯಕ್ರಮವು ಸಾಂಸ್ಕೃತಿಕ ಒಗ್ಗಟ್ಟನ್ನು ಸಾರುವ ಉದ್ದೇಶವನ್ನು ಹೊಂದಿದೆ ಎಂದು ಆಯೋಜಕರು ಹೇಳಿದರೆ, ಮತ್ತೊಂದು ಕಡೆ, ಈ ಕಾರ್ಯಕ್ರಮವು ಹಿಂದೂ ರಾಷ್ಟ್ರೀಯತಾವಾದವನ್ನು ಉತ್ತೇಜಿಸುತ್ತದೆ ಎಂಬ ವಾದಗಳು ಕೇಳಿಬಂದಿವೆ.

Read More
Next Story