ಕತಾರ್ ಅನಿಲ ಸ್ಥಾವರದಲ್ಲಿ ಭೀಕರ ಸ್ಫೋಟ: 12 ಮಂದಿ ಭಾರತೀಯರು ಸೇರಿ 13 ಕಾರ್ಮಿಕರು ದಾರುಣ ಸಾವು!
x

ಕತಾರ್ ಅನಿಲ ಸ್ಥಾವರದಲ್ಲಿ ಭೀಕರ ಸ್ಫೋಟ: 12 ಮಂದಿ ಭಾರತೀಯರು ಸೇರಿ 13 ಕಾರ್ಮಿಕರು ದಾರುಣ ಸಾವು!

ಕತಾರ್‌ನ ಬರ್ಜಾನ್ ಎಲ್‌ಎನ್‌ಜಿ ಅನಿಲ ಸ್ಥಾವರದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಭಾರತೀಯರು ಸೇರಿ 13 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ಸಂಖ್ಯೆ 66ಕ್ಕೇರಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.


ಕತಾರ್‌ನ ರಾಸ್ ಲಫಾನ್ ಇಂಡಸ್ಟ್ರಿಯಲ್ ಸಿಟಿಯಲ್ಲಿರುವ ಪ್ರಸಿದ್ಧ 'ಬರ್ಜಾನ್ ಎಲ್‌ಎನ್‌ಜಿ' ಅನಿಲ ಸ್ಥಾವರದಲ್ಲಿ ಭಾನುವಾರ (ಜೂನ್ 21) ತಡರಾತ್ರಿ ಭೀಕರ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 13 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದು, ಇವರಲ್ಲಿ ಬರೋಬ್ಬರಿ 12 ಮಂದಿ ಭಾರತೀಯರು ಎಂದು ಕತಾರ್ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿದ್ದಾರೆ. ಮೃತಪಟ್ಟ ಮತ್ತೊಬ್ಬ ಕಾರ್ಮಿಕ ಪಾಕಿಸ್ತಾನದ ಪ್ರಜೆಯಾಗಿದ್ದಾನೆ.

ಈ ಕುರಿತು ಸೋಮವಾರ ದೋಹಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕತಾರ್‌ನ ಇಂಧನ ಸಚಿವ ಸಾದ್ ಶೆರಿದಾ ಅಲ್-ಕಾಬಿ, "ಬರ್ಜಾನ್ ಅನಿಲ ಪೂರೈಕೆ ಘಟಕದಲ್ಲಿ ಸಂಭವಿಸಿದ ಅಪಘಾತದಲ್ಲಿ 12 ಭಾರತೀಯರು ಹಾಗೂ ಓರ್ವ ಪಾಕಿಸ್ತಾನಿ ಪ್ರಜೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇತರರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ತಿಳಿಸಿದ್ದಾರೆ.

66ಕ್ಕೆ ಏರಿದ ಗಾಯಾಳುಗಳ ಸಂಖ್ಯೆ: ಮುಂದುವರಿದ ಶೋಧ ಕಾರ್ಯ

ಘಟನೆ ಸಂಭವಿಸಿದ ತಕ್ಷಣ ಆರಂಭದಲ್ಲಿ 18 ಜನ ನಾಪತ್ತೆಯಾಗಿದ್ದರು. ಕತಾರ್ ಅಂತರರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡ, ಆಂತರಿಕ ಭದ್ರತಾ ಪಡೆ (ಲೆಖ್ವಿಯಾ) ಹಾಗೂ ನಾಗರಿಕ ರಕ್ಷಣಾ ತಂಡಗಳ ಸಹಯೋಗದೊಂದಿಗೆ ಸ್ಥಳದಲ್ಲಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆ ಮೊದಲು 54 ಎಂದು ಅಂದಾಜಿಸಲಾಗಿದ್ದು, ಸದ್ಯ ಆ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ಕತಾರ್‌ನ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ.

ಮೃತದೇಹಗಳನ್ನು ತಾಯ್ನಾಡಿಗೆ ತರಲು ಭಾರತೀಯ ರಾಯಭಾರ ಕಚೇರಿ ಶ್ರಮ

ಈ ಘೋರ ದುರಂತದ ಕುರಿತು ಕತಾರ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದೆ. "ದುರಂತದಲ್ಲಿ ಮೃತಪಟ್ಟ 12 ಭಾರತೀಯರ ಮೃತದೇಹಗಳನ್ನು ಆದಷ್ಟು ಬೇಗ ತಾಯ್ನಾಡಿಗೆ (ಭಾರತಕ್ಕೆ) ಕಳುಹಿಸಿಕೊಡುವ ನಿಟ್ಟಿನಲ್ಲಿ ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ" ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್ ದಾಳಿಗೆ ತುತ್ತಾಗಿದ್ದ ಸ್ಥಾವರ

ವಿಷಾದದ ಸಂಗತಿಯೆಂದರೆ, ಮಧ್ಯಪ್ರಾಚ್ಯದ ಯುದ್ಧದ ಸಂದರ್ಭದಲ್ಲಿ ಈ ಬರ್ಜಾನ್ ಅನಿಲ ಸ್ಥಾವರದ ಮೇಲೆ ಇರಾನ್ ಸತತ ಮೂರು ತಿಂಗಳುಗಳ ಕಾಲ ಕ್ಷಿಪಣಿ ದಾಳಿ ನಡೆಸಿತ್ತು. ಹೀಗಾಗಿ ಸ್ಥಗಿತಗೊಂಡಿದ್ದ ಈ ಸೌಲಭ್ಯವನ್ನು ದುರಸ್ತಿಗೊಳಿಸಿ, ಮತ್ತೆ ಪುನರಾರಂಭಿಸುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಭೀಕರ ಸ್ಫೋಟ ಸಂಭವಿಸಿದೆ. ಆದರೆ ಕತಾರ್ ಎನರ್ಜಿ ಸಚಿವ ಅಲ್-ಕಾಬಿ ಇದನ್ನು ಕೈಗಾರಿಕಾ ಅಪಘಾತ ಎಂದು ಕರೆದಿದ್ದಾರೆ.

ಬರ್ಜಾನ್ ಅನಿಲ ಸ್ಥಾವರವು ದಿನಕ್ಕೆ ಸುಮಾರು 1.4 ಶತಕೋಟಿ ಘನ ಅಡಿ ಅನಿಲವನ್ನು ಉತ್ಪಾದಿಸುವ ಬೃಹತ್ ಸಾಮರ್ಥ್ಯ ಹೊಂದಿದ್ದು, ಕತಾರ್‌ನ ದೇಶೀಯ ವಿದ್ಯುತ್ ಉತ್ಪಾದನೆ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕಗಳಿಗೆ ಪ್ರಮುಖ ಆಧಾರವಾಗಿದೆ. ಪ್ರಸ್ತುತ ಸ್ಫೋಟದಿಂದಾಗಿ ಸ್ಥಾವರಕ್ಕೆ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸಲು ಇನ್ನು ಕೆಲವು ದಿನಗಳು ಬೇಕಾಗಲಿದ್ದು, ಕಾರ್ಯಾಚರಣೆ ಯಾವಾಗ ಆರಂಭವಾಗುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Read More
Next Story