ಉತ್ತರ ಜಪಾನ್‌ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
x
ಸಂಗ್ರಹ ಚಿತ್ರ.

ಉತ್ತರ ಜಪಾನ್‌ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಹೊಕ್ಕೈಡೋದ ಹಚಿನೋಹೆ ಬಂದರಿನಿಂದ ಹಡಗುಗಳು ಸುರಕ್ಷಿತ ಸ್ಥಳಗಳತ್ತ ಸಾಗುತ್ತಿರುವ ದೃಶ್ಯಗಳು, ಟಿವಿಯಲ್ಲಿ 'ಸುನಾಮಿ! ಬೇಗನೆ ಜಾಗ ಖಾಲಿ ಮಾಡಿ ಎಂಬ ಎಚ್ಚರಿಕೆಯೊಂದಿಗೆ ಪ್ರಸಾರವಾಗಿವೆ.


Click the Play button to hear this message in audio format

ಉತ್ತರ ಜಪಾನ್‌ನ ಕರಾವಳಿ ಪ್ರದೇಶದಲ್ಲಿ ಸೋಮವಾರ (ಏ. 20) ಸಂಜೆ 4:53ರ ಸುಮಾರಿಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಹವಾಮಾನ ಇಲಾಖೆ (JMA) ಸುನಾಮಿ ಎಚ್ಚರಿಕೆ ನೀಡಿದೆ. ಶಾಂತ ಮಹಾಸಾಗರದ 10 ಕಿ.ಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಭೂಕಂಪನದ ಬೆನ್ನಲ್ಲೇ ಇವಾಟೆ, ಅಮೊರಿ ಮತ್ತು ಹೊಕ್ಕೈಡೋ ಪ್ರಾಂತ್ಯಗಳಲ್ಲಿ 3 ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಇವಾಟೆಯ ಕುಜಿ ಬಂದರಿನಲ್ಲಿ 80 ಸೆಂ.ಮೀ ಎತ್ತರದ ಮೊದಲ ಸುನಾಮಿ ಅಲೆ ಅಪ್ಪಳಿಸಿದ್ದು, ಮತ್ತೊಂದು ಬಂದರಿನಲ್ಲಿ 40 ಸೆಂ.ಮೀ ಎತ್ತರದ ಅಲೆ ಕಾಣಿಸಿಕೊಂಡಿದೆ. ಒಟ್ಸುಚಿ ಮತ್ತು ಕಮೈಶಿ ಸೇರಿದಂತೆ ಹಲವು ಕರಾವಳಿ ಪಟ್ಟಣಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಹೊಕ್ಕೈಡೋದ ಹಚಿನೋಹೆ ಬಂದರಿನಿಂದ ಹಡಗುಗಳು ಸುರಕ್ಷಿತ ಸ್ಥಳಗಳತ್ತ ಸಾಗುತ್ತಿರುವ ದೃಶ್ಯಗಳು, ಟಿವಿಯಲ್ಲಿ 'ಸುನಾಮಿ! ಬೇಗನೆ ಜಾಗ ಖಾಲಿ ಮಾಡಿ ಎಂಬ ಎಚ್ಚರಿಕೆಯೊಂದಿಗೆ ಪ್ರಸಾರವಾಗಿವೆ.

ಸರ್ಕಾರದ ಮುನ್ನೆಚ್ಚರಿಕೆ

ಜಪಾನ್ ಪ್ರಧಾನಿ ಸನಾಯೆ ಟಕೈಚಿ ಅವರು ತುರ್ತು ಕಾರ್ಯಪಡೆಯನ್ನು ರಚಿಸಿದ್ದು, ಕರಾವಳಿ ಭಾಗದ ಜನರನ್ನು ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ಟೋಕಿಯೋದಿಂದ ಅಮೊರಿಗೆ ಸಂಪರ್ಕ ಕಲ್ಪಿಸುವ ಬುಲೆಟ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಈ ಪ್ರಬಲ ಭೂಕಂಪನದಿಂದಾಗಿ ಜಪಾನ್‌ನ ಯಾವುದೇ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿಲ್ಲ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ ಸ್ಪಷ್ಟಪಡಿಸಿದೆ. ಆದಾಗ್ಯೂ, ಟೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯು ಮುಚ್ಚಲ್ಪಟ್ಟಿರುವ ಒನಗಾವಾ ಪರಮಾಣು ಸ್ಥಾವರದಲ್ಲಿ ತಪಾಸಣೆ ನಡೆಸುತ್ತಿದೆ.

2011ರ ಭೀಕರ ನೆನಪು

ಜಪಾನ್ ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 2011ರಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯ ಭೀಕರ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿತ್ತು. ಇದರಿಂದ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾಗಿ, ವಿಕಿರಣ ಸೋರಿಕೆಯಾಗಿತ್ತು. ಅಂದಿನ ದುರಂತದಲ್ಲಿ 22,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಇಂದಿನ ಪ್ರಬಲ ಭೂಕಂಪನವು ಜಪಾನ್ ಜನರಲ್ಲಿ ಮತ್ತೆ 2011ರ ಆ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

Read More
Next Story