
ಫಿಫಾ ವಿಶ್ವಕಪ್ ಸಂಭ್ರಮದ ನಡುವೆ ದುರಂತ: ಪ್ಯಾಲೆಸ್ತೀನ್ ಗೋಲ್‌ಕೀಪರ್ ಸಲೀಮ್ ಹತ್ಯೆ!
2026ರ ಫಿಫಾ ವಿಶ್ವಕಪ್ ಸಂಭ್ರಮದ ನಡುವೆ ಇಸ್ರೇಲ್ ದಾಳಿಗೆ ಪ್ಯಾಲೆಸ್ತೀನ್ ಸ್ಟಾರ್ ಫುಟ್‌ಬಾಲ್ ಆಟಗಾರ, ಗೋಲ್‌ಕೀಪರ್ ಸಲೀಮ್ ಖಾದರ್ ಅಲ್-ಅಶ್ಕರ್ ಬಲಿಯಾಗಿದ್ದಾರೆ. ಕ್ರೀಡಾಲೋಕ ಕಂಬನಿ ಮಿಡಿದ ಸಂಪೂರ್ಣ ವಿವರ ಇಲ್ಲಿದೆ.
ಇಡೀ ಜಗತ್ತು 2026ರ ಫಿಫಾ ವಿಶ್ವಕಪ್ ಸಂಭ್ರಮದಲ್ಲಿ ಮುಳುಗಿರುವ ನಡುವೆಯೇ, ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಪ್ಯಾಲೆಸ್ತೀನ್ ಸ್ಟಾರ್ ಫುಟ್‌ಬಾಲ್ ಆಟಗಾರ ಮತ್ತು ಖಾನ್ ಯೂನಿಸ್ ಸರ್ವೀಸಸ್ ಕ್ಲಬ್‌ನ ಭರವಸೆಯ ಗೋಲ್‌ಕೀಪರ್ 32 ವರ್ಷದ ಸಲೀಮ್ ಖಾದರ್ ಅಲ್-ಅಶ್ಕರ್ ಹತ್ಯೆಯಾಗಿದ್ದಾರೆ. ಇಸ್ರೇಲಿ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಅಶ್ಕರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಖಾನ್ ಯೂನಿಸ್‌ನ ಈಶಾನ್ಯ ಭಾಗದಲ್ಲಿರುವ ಅಲ್-ಕರಾರಾ ಪಟ್ಟಣದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ ವೇಳೆ ಸಲೀಮ್ ಮೃತಪಟ್ಟಿರುವುದನ್ನು ಪ್ಯಾಲೆಸ್ತೀನ್ ಫುಟ್‌ಬಾಲ್ ಅಸೋಸಿಯೇಷನ್ (PFA) ಅಧಿಕೃತವಾಗಿ ಖಚಿತಪಡಿಸಿದೆ. ಮೈದಾನದಲ್ಲಿ ಗೋಡೆಯಂತೆ ನಿಂತು ತಂಡವನ್ನು ಕಾಯುತ್ತಿದ್ದ ಈ ಚತುರ ಆಟಗಾರನ ಹಠಾತ್ ನಿರ್ಗಮನ ಜಾಗತಿಕ ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
ಮೈದಾನದಲ್ಲಿ ಭರವಸೆಯ ಗೋಲ್‌ಕೀಪರ್
ಸಲೀಮ್ ಅಲ್-ಅಶ್ಕರ್ ಖಾನ್ ಯೂನಿಸ್ ಸರ್ವೀಸಸ್ ಕ್ಲಬ್‌ನ ಪ್ರಮುಖ ಗೋಲ್‌ಕೀಪರ್ ಆಗಿ ಗುರುತಿಸಿಕೊಂಡಿದ್ದರು. ತಮ್ಮ ಚುರುಕುತನ, ಗೋಲ್‌ಪೋಸ್ಟ್ ಎದುರು ಪ್ರದರ್ಶಿಸುತ್ತಿದ್ದ ಆತ್ಮವಿಶ್ವಾಸ ಹಾಗೂ ತಂಡದ ಮೇಲಿನ ಬದ್ಧತೆಯಿಂದ ಅವರು ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಅವರ ಅಕಾಲಿಕ ನಿಧನದಿಂದ ಸಹ ಆಟಗಾರರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಐದು ತಿಂಗಳ ಹಿಂದಷ್ಟೇ ಮದುವೆ
ಸಲೀಮ್ ಅವರ ವೈಯಕ್ತಿಕ ಬದುಕು ಕೂಡ ಈಗ ಹಲವರ ಮನಕಲಕುವಂತೆ ಮಾಡಿದೆ. ಕೇವಲ ಐದು ತಿಂಗಳ ಹಿಂದಷ್ಟೇ ಅವರು ವಿವಾಹವಾಗಿದ್ದರು. ಹೊಸ ಜೀವನ ಆರಂಭಿಸಿದ್ದ ದಂಪತಿಯ ಕನಸುಗಳು ಈ ದುರಂತದಿಂದ ಅರ್ಧದಲ್ಲೇ ನಿಂತಿವೆ. ಸಲೀಮ್ ಅವರ ಪತ್ನಿ ಪ್ರಸ್ತುತ ಗರ್ಭಿಣಿಯಾಗಿದ್ದು, ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಸಲೀಮ್ ಇಹಲೋಕ ತ್ಯಜಿಸಿರುವುದು ಕುಟುಂಬದ ದುಃಖವನ್ನು ಇನ್ನಷ್ಟು ಹೆಚ್ಚಿಸಿದೆ.
ಕುಟುಂಬಕ್ಕೆ ತುಂಬಲಾರದ ನಷ್ಟ
ಸಲೀಮ್ ತಮ್ಮ ಪತ್ನಿ ಮತ್ತು ಹುಟ್ಟಲಿರುವ ಮಗುವಿನ ಜೊತೆಗೆ ವೃದ್ಧ ತಂದೆ-ತಾಯಿಗೆ ಆಧಾರವಾಗಿದ್ದರು. ಅಲ್ಲದೆ, ಅವರು ತಮ್ಮ ಏಳು ಸಹೋದರಿಯರ ಏಕೈಕ ಸಹೋದರರಾಗಿದ್ದರು. ಅವರ ನಿಧನದಿಂದ ಇಡೀ ಕುಟುಂಬ ತೀವ್ರ ಶೋಕದಲ್ಲಿ ಮುಳುಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರ
ಸಲೀಮ್ ಅಲ್-ಅಶ್ಕರ್ ಅವರ ನಿಧನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಸಾವಿರಾರು ಕ್ರೀಡಾಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಪ್ಯಾಲೆಸ್ತೇನಿಯನ್ ಫುಟ್‌ಬಾಲ್ ಅಸೋಸಿಯೇಷನ್‌ನ ಅಧಿಕೃತ ಪೋಸ್ಟ್‌ಗಳಲ್ಲೂ ಅಭಿಮಾನಿಗಳು ಹಾಗೂ ಕ್ರೀಡಾ ವಲಯದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

