India-Pak Relations | ಭಾರತದೊಂದಿಗೆ ಬೇಕು ಬಾಂಧವ್ಯದ ಸೇತುವೆ; ಸಂಬಂಧ ವೃದ್ಧಿಗೆ ಸ್ನೇಹಹಸ್ತ ಚಾಚಿದ  ಪಾಕಿಸ್ತಾನ
x
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್

India-Pak Relations | ಭಾರತದೊಂದಿಗೆ ಬೇಕು ಬಾಂಧವ್ಯದ ಸೇತುವೆ; ಸಂಬಂಧ ವೃದ್ಧಿಗೆ ಸ್ನೇಹಹಸ್ತ ಚಾಚಿದ ಪಾಕಿಸ್ತಾನ

ನಾವು 70 ವರ್ಷಗಳನ್ನು ಹೋರಾಡುತ್ತಲೇ ಕಳೆದಿದ್ದೇವೆ. ಮುಂದಿನ 70 ವರ್ಷಗಳವರೆಗೆ ಇದನ್ನೇ ಮುಂದುವರಿಯಲು ಬಿಡಬಾರದು. ಈಗಿನ ಸರ್ಕಾರ ಕೂಡ ಭಾರತದೊಂದಿಗಿನ ಬಾಂಧವ್ಯ ಗಟ್ಟಿಗೊಳಿಸಲು ಪ್ರಯತ್ನಿಸಬೇಕು ಎಂದು ಮಾಜಿ ಪಿಎಂ ನವಾಜ್‌ ಷರೀಫ್‌ ಹೇಳಿದ್ದಾರೆ.


ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಪಾಕಿಸ್ತಾನ ಭೇಟಿಯ ಬಳಿಕ ಪಾಕಿಸ್ತಾನದ ವರಸೆ ಬದಲಾಗಿದೆ. ಪಾಕಿಸ್ತಾನ ಆಡಳಿತ ಪಕ್ಷ ಪಿಎಂಎಲ್-ಎನ್ ನಾಯಕ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಭಾರತದ ಜೊತೆಗಿನ ಸಂಬಂಧ ಸುಧಾರಣೆಗೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಹಳೆಯದೆಲ್ಲವನ್ನು ಮರೆತು ಉತ್ತಮ ನೆರೆಹೊರೆಯ ರಾಷ್ಟ್ರಗಳಾಗಿ ಬದುಕಬೇಕು ಎಂದು ಷರೀಫ್ ಕರೆ ನೀಡಿದ್ದಾರೆ. ನವಾಜ್‌ ಷರೀಫ್‌ ಅವರ ಈ ಹೇಳಿಕೆಯು ಭಾರತದ ಜೊತೆಗಿನ ಪಾಕ್‌ ಸಂಬಂಧ ಸುಧಾರಿಸುವ ಉಪಕ್ರಮವೆಂದೇ ಬಣ್ಣಿಸಲಾಗಿದೆ.

ಗುರುವಾರ ಭಾರತದ ಪತ್ರಕರ್ತರೊಂದಿಗೆ ಮಾತನಾಡಿದ ನವಾಜ್‌ ಷರೀಫ್‌ ಅವರು, ಪಿಎಂಎಲ್‌-ಎನ್‌ ಪಕ್ಷದ ಪ್ರಧಾನಿ ಹಾಗೂ ಅಧ್ಯಕ್ಷರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿರುವುದು ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ʼಒಳ್ಳೆಯ ಆರಂಭʼ ಎಂದು ಹೇಳಿದ್ದಾರೆ. 2015ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲಾಹೋರ್ ಭೇಟಿ ಶ್ಲಾಘಿಸಿದ ಷರೀಫ್ ಅವರು, ಉಭಯ ದೇಶಗಳ ಸಂಬಂಧದಲ್ಲಿ ʼದೀರ್ಘಕಾಲದ ತಟಸ್ಥತೆʼ ಹಿತಕರವಲ್ಲ. ಇನ್ನು ಮುಂದೆ ಎರಡೂ ಕಡೆಯವರು ಸಕಾರಾತ್ಮಕ ದೃಷ್ಟಿಕೋನದಿಂದ ಮುನ್ನಡೆಯಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

'ನಾವು ಪಾಕಿಸ್ತಾನ ಅಥವಾ ಭಾರತವನ್ನು ಬದಲಾಯಿಸಲು ಸಾಧ್ಯವಿಲ್ಲ.ಉತ್ತಮ ನೆರೆಹೊರೆಯವರಂತೆ ಬದುಕಬೇಕಷ್ಟೇ. ಅದೇ ನಮ್ಮ ಮುಂದಿರುವ ರಚನಾತ್ಮಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎರಡು ದೇಶಗಳ ನಡುವೆ ಬಂಧ ಅಗತ್ಯ

ಉಭಯ ದೇಶಗಳ ನಡುವೆ ಬಾಂಧವ್ಯದ ‘ಸೇತುವೆ’ ನಿರ್ಮಿಸುವ ಅಗತ್ಯವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಷರೀಫ್, ‘ಅದೇ ಪಾತ್ರವನ್ನು ನಾನು ನಿರ್ವಹಿಸುತಿದ್ದೇನೆ ಎಂದರು. ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜೈಶಂಕರ್ ಅವರು 24 ಗಂಟೆಗಳ ಭೇಟಿಗಾಗಿ ಇಸ್ಲಾಮಾಬಾದ್‌ಗೆ ಆಗಮಿಸಿದ್ದರು. ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಒಂಬತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ವಿದೇಶಾಂಗ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹಿರಿಯ ಸಹೋದರ ನವಾಜ್ ಪ್ರತಿಕ್ರಿಯಿಸಿ, ಈ ರೀತಿಯ ಪ್ರಗತಿ ಇಂದಿನ ಅಗತ್ಯ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಬರಬೇಕೆಂದು ನಾವು ಬಯಸಿದ್ದೆವು, ಆದರೆ ಭಾರತದ ವಿದೇಶಾಂಗ ಸಚಿವರು ಬಂದಿದ್ದು ಒಳ್ಳೆಯದೇ. ನಾವು ನಮ್ಮ ಮಾತುಕತೆಯ ಮಾರ್ಗ ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

'70 ವರ್ಷ ಹೋರಾಟದಲ್ಲಿ ಕಳೆದಿದ್ದೇನೆ'

ನಾವು 70 ವರ್ಷಗಳನ್ನು ಹೀಗೆ (ಹೋರಾಟ) ಕಳೆದಿದ್ದೇವೆ. ಇನ್ನೂ 70 ವರ್ಷಗಳವರೆಗೆ ಇದನ್ನು ಮುಂದುವರಿಸಲು ನಾವು ಬಿಡಬಾರದು. ಈ ಸಂಬಂಧವನ್ನು ಮುಂದುವರಿಸಲು ನಾವು (ಪಿಎಂಎಲ್-ಎನ್ ಸರ್ಕಾರ) ಶ್ರಮಿಸಿದ್ದೇವೆ. ಎರಡೂ ಕಡೆಯವರು ಕುಳಿತು ಹೇಗೆ ಮುಂದುವರೆಯಬೇಕು ಎಂದು ಚರ್ಚಿಸಬೇಕು. SCO ಶೃಂಗಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವೆ ಯಾವುದೇ ದ್ವಿಪಕ್ಷೀಯ ಸಭೆ ನಡೆದಿಲ್ಲ. ಆದಾಗ್ಯೂ, ಜೈಶಂಕರ್ ಅವರ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ದೀರ್ಘಕಾಲದ ಮಂಜುಗಡ್ಡೆಯನ್ನು ಕರಗಿಸಿದಂತಾಗಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಭೂತಕಾಲ ಬಿಟ್ಟು, ಭವಿಷ್ಯದ ಕಡೆಗೆ ನೋಡಬೇಕು

ಜೈಶಂಕರ್ ಅವರ ಇಸ್ಲಾಮಾಬಾದ್ ಭೇಟಿ ಉತ್ತಮ ‘ಆರಂಭ’ ಎಂದು ನವಾಜ್ ಷರೀಫ್ ಬಣ್ಣಿಸಿದ್ದಾರೆ. ಮುಂದುವರಿದು 'ನಾವು ಭೂತಕಾಲಕ್ಕೆ ಹೋಗಬಾರದು. ಭವಿಷ್ಯದ ಕಡೆಗೆ ನೋಡಬೇಕು. ಎರಡು ದೇಶಗಳ ನಡುವಿನ ಅವಕಾಶಗಳನ್ನು ಬಳಸಿಕೊಳ್ಳಲು ನಾವು ಹಳೆ ಸಂಗತಿಗಳನ್ನು ಸಮಾಧಿ ಮಾಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. 2016 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಭಾರತದ ಮೇಲೆ ದಾಳಿ ನಡೆಸಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸದಿರಲು ನಿರ್ಧರಿಸಿತು. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿತ್ತು.

2015ರ ಡಿಸೆಂಬರ್ 25ರಂದು ಕಾಬೂಲ್‌ನಿಂದ ಹಿಂದಿರುಗುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದನ್ನು ಷರೀಫ್ ನೆನಪಿಸಿಕೊಂಡರು. 'ಪ್ರಧಾನಿ ಮೋದಿಯವರು ಕಾಬೂಲ್‌ನಿಂದ ನನಗೆ ಕರೆ ಮಾಡಿ ನನ್ನ ಜನ್ಮದಿನದ ಶುಭಾಶಯ ಕೋರಿದಾಗ, ನಾನು ಅವರಿಗೆ ಸ್ವಾಗತ ಎಂದು ಹೇಳಿದೆ. ಅವರು ಬಂದು ನಮ್ಮ ತಾಯಿಯನ್ನು ಭೇಟಿಯಾದರು. ಇವು ಸಣ್ಣ ವಿಷಯಗಳಲ್ಲ, ಅವು ವಿಶೇಷವಾಗಿ ನಮ್ಮ ದೇಶಗಳಿಗೆ ಏನನ್ನಾದರೂ ಅರ್ಥೈಸುತ್ತವೆ. ನಾವು ಅವರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

ಭಾರತ ಭೇಟಿಯ ಇಚ್ಛೆ ವ್ಯಕ್ತಪಡಿಸಿದ ಷರೀಫ್

'ಸಂಬಂಧದಲ್ಲಿ ಹಳಸಿರುವ ಬಗ್ಗೆ ನನಗೆ ಅತೃಪ್ತಿ ಇದೆ. ಭಾರತದ ಜನರ ಬಗ್ಗೆ ಸಹಾನುಭೂತಿ ಹೊಂದಿರುವ ಪಾಕಿಸ್ತಾನದ ಜನರ ಪರವಾಗಿ ನಾನು ಮಾತನಾಡಬಲ್ಲೆ. ನಾನು ಭಾರತದ ಜನರಿಗೂ ಅದನ್ನೇ ಹೇಳುತ್ತೇನೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಪುನರಾರಂಭ ಆಗಬೇಕು. ಎರಡು ತಂಡಗಳು ನೆರೆಯ ದೇಶದಲ್ಲಿ ನಡೆಯುವ ಫೈನಲ್‌ ಆಡುವುದನ್ನು ನೋಡಲು ಭಾರತಕ್ಕೆ ಭೇಟಿ ನೀಡಲು ಬಯಸುತ್ತೇನೆ ಎಂದು ಹೇಳಿದರು. ಷರೀಫ್ ಅವರು ಎರಡು ಕಡೆಯ ನಡುವಿನ ವ್ಯಾಪಾರ ಸಂಬಂಧಗಳ ಮಹತ್ವವನ್ನು ಒತ್ತಿ ಹೇಳಿದರು.

1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಭೇಟಿ ನೀಡಿದ್ದನ್ನು ಷರೀಫ್ ಸ್ಮರಿಸಿದರು. ಷರೀಫ್ ಅವರು, 'ಲಾಹೋರ್ ಪ್ರಣಾಳಿಕೆ ಮತ್ತು ಆ ಸಮಯದಲ್ಲಿ ಅವರ ಮಾತುಗಳಿಗಾಗಿ ಅವರು ಇನ್ನೂ ನೆನಪಿಸಿಕೊಳ್ಳುತ್ತಾರೆ. ನಾನು ಆ ಪ್ರವಾಸದ ವಿಡಿಯೋಗಳನ್ನು ನೋಡುತ್ತೇನೆ. ಆ ನೆನಪುಗಳನ್ನು ಸವಿಯಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

1999ರ ಫೆಬ್ರವರಿ 21ರಂದು ಆಗಿನ ಭಾರತದ ಪ್ರಧಾನಿ ವಾಜಪೇಯಿ ಮತ್ತು ಅವರ ಪಾಕಿಸ್ತಾನಿ ಪ್ರಧಾನಿ ಷರೀಫ್ ನಡುವಿನ ಮಾತುಕತೆಯ ನಂತರ ಲಾಹೋರ್ ಘೋಷಣೆಗೆ ಸಹಿ ಹಾಕಲಾಯಿತು. ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ 2019 ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತದ ಯುದ್ಧ ವಿಮಾನಗಳು ನಾಶಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು. ಆಗಸ್ಟ್ 5, 2019 ರಂದು ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರ ಹಿಂತೆಗೆದುಕೊಂಡು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಸಂಬಂಧಗಳು ಮತ್ತಷ್ಟು ಹದಗೆಟ್ಟಿದ್ದವು.

Read More
Next Story