ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 19 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
x

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 19 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ವೈರಲ್ ಆಗಿರುವ ವಿಡಿಯೊದಲ್ಲಿ, ನೂರಾರು ಜನರು ಸೇರಿದ್ದ ಸ್ಥಳದಲ್ಲಿ ಏಕಾಏಕಿ ಭಾರೀ ಸ್ಫೋಟ ಸಂಭವಿಸಿದ ಕ್ಷಣ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಜನರು ಪ್ರಾಣ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡುತ್ತಿರುವುದು ಕಂಡುಬರುತ್ತದೆ.


Click the Play button to hear this message in audio format

ಪಾಕಿಸ್ತಾನದ ವಾಯವ್ಯ ಭಾಗದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಫೋಟದ ಭಯಾನಕ ದೃಶ್ಯಗಳು ವೈರಲ್ ಆಗಿವೆ.

ಈ ಘಟನೆ ಸ್ವಾತ್ ಜಿಲ್ಲೆಯ ಕಬಲ್ ಪ್ರದೇಶದಲ್ಲಿ ಸಂಭವಿಸಿದೆ. ಸ್ಥಳೀಯರು ಶಾಂತಿ ಕಾಪಾಡುವಂತೆ ಹಾಗೂ ಉಗ್ರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಸಮೀಪ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನರು ಉಗ್ರವಾದ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು.

ವೈರಲ್‌ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೊದಲ್ಲಿ, ನೂರಾರು ಜನರು ಸೇರಿದ್ದ ಸ್ಥಳದಲ್ಲಿ ಏಕಾಏಕಿ ಭಾರೀ ಸ್ಫೋಟ ಸಂಭವಿಸಿದ ಕ್ಷಣ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಜನರು ಪ್ರಾಣ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡುತ್ತಿರುವುದು, ಸ್ಥಳದಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿರುವುದು ಕಂಡುಬರುತ್ತದೆ.

ಜಿಲ್ಲಾ ಪೊಲೀಸ್ ಮುಖ್ಯಸ್ಥ ಒಮರ್ ಖಾನ್ ಅವರ ಪ್ರಕಾರ, ಈ ರ‍್ಯಾಲಿಯನ್ನು ಸ್ಥಳೀಯ ನಿವಾಸಿಗಳು ಶಾಂತಿ ಕಾಪಾಡುವ ಉದ್ದೇಶದಿಂದ ಆಯೋಜಿಸಿದ್ದರು. ಸ್ವಾತ್ ಪ್ರದೇಶದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಭದ್ರತೆಯನ್ನು ಬಲಪಡಿಸಬೇಕು ಹಾಗೂ ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಭೆಯಲ್ಲಿ ಮಾತನಾಡುತ್ತಿದ್ದ ಭಾಷಣಕಾರರು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಹಾಗೂ ಉಗ್ರವಾದವನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದೆ. ಹಲವು ವರ್ಷಗಳಿಂದ ಹಿಂಸಾಚಾರದಿಂದ ತತ್ತರಿಸಿರುವ ಸ್ವಾತ್ ಕಣಿವೆಯಲ್ಲಿ ಜನರು ಭಯವಿಲ್ಲದೆ ಬದುಕಲು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಪ್ರಾಂತೀಯ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಝಿ ಅವರ ಪ್ರಕಾರ, ಆತ್ಮಾಹುತಿ ದಾಳಿಕೋರ ಪ್ರತಿಭಟನೆಯಲ್ಲಿ ಸೇರಿದ್ದ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ. ಮೃತರಲ್ಲಿ ಸಾಮಾನ್ಯ ನಾಗರಿಕರು ಹಾಗೂ ಭದ್ರತೆಗೆ ನಿಯೋಜಿಸಲಾಗಿದ್ದ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಪಾಕಿಸ್ತಾನದ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉಗ್ರವಾದದ ವಿರುದ್ಧದ ಹೋರಾಟವನ್ನು ಸಂಪೂರ್ಣವಾಗಿ ಮುಂದುವರಿಸಲಾಗುವುದು ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ.

ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ದಾಳಿಯನ್ನು ಖಂಡಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಇದುವರೆಗೆ ಹೊತ್ತುಕೊಂಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರ ದಾಳಿಗಳನ್ನು ಹೆಚ್ಚಿಸಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯತ್ತ ಅನುಮಾನದ ಬೆರಳು ತೋರಿಸಲಾಗುತ್ತಿದೆ. ಟಿಟಿಪಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿರುದ್ಧ ಹಲವು ಬಾರಿ ಆರೋಪಿಸಿದ್ದು, ಕಾಬೂಲ್ ಈ ಆರೋಪಗಳನ್ನು ನಿರಾಕರಿಸಿದೆ.

Read More
Next Story