ಪಾಕಿಸ್ತಾನದಲ್ಲಿ ಭೀಕರ ದುರಂತ: ಕಂದಕಕ್ಕೆ ಉರುಳಿದ ಓವರ್‌ಲೋಡ್ ಬಸ್, 40 ಪ್ರಯಾಣಿಕರು ದಾರುಣ ಸಾವು
x

ಪಾಕಿಸ್ತಾನದಲ್ಲಿ ಭೀಕರ ದುರಂತ: ಕಂದಕಕ್ಕೆ ಉರುಳಿದ ಓವರ್‌ಲೋಡ್ ಬಸ್, 40 ಪ್ರಯಾಣಿಕರು ದಾರುಣ ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಸ್ ಕಂದರಕ್ಕೆ ಬಿದ್ದು 40 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತೊಂದು ಬಸ್‌ನ ಪ್ರಯಾಣಿಕರನ್ನು ಶಿಫ್ಟ್ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.


Click the Play button to hear this message in audio format

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್‌ವೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 40 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಬಲೂಚಿಸ್ತಾನದ ಶೆರಾನಿ ಜಿಲ್ಲೆಯ ಡಾನಾ ಸರ್ ಪ್ರದೇಶದಿಂದ ಹೊರಟು ಖೈಬರ್ ಪಖ್ತುಂಖ್ವಾ ತಲುಪುತ್ತಿದ್ದಂತೆ ಈ ಭೀಕರ ದುರಂತ ನಡೆದಿದೆ.

ಮತ್ತೊಂದು ಬಸ್‌ಗೆ ಪ್ರಯಾಣಿಕರ ಶಿಫ್ಟ್ ಮಾಡಿದ್ದೇ ಕಂಟಕ!

ಶೆರಾನಿಯ ಉಪ ಆಯುಕ್ತ ಹಜರತ್ ವಾಲಿ ಕಾಕರ್ ನೀಡಿರುವ ಮಾಹಿತಿ ಪ್ರಕಾರ, 36 ಪ್ರಯಾಣಿಕರ ಹೊತ್ತೊಯ್ಯತ್ತಿದ್ದ ಬಸ್ ಕ್ವೆಟ್ಟಾದಿಂದ ಹೊರಟಿತ್ತು. ಆದರೆ, ದಾರಿಯಲ್ಲಿ ಮತ್ತೊಂದು ಬಸ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಹೀಗಾಗಿ ಆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸಹ ಇದೇ ಬಸ್‌ಗೆ ವರ್ಗಾಯಿಸಲಾಯಿತು. ಸಾಮರ್ಥ್ಯಕ್ಕಿಂತ ಅಧಿಕ ಜನರನ್ನು ಹತ್ತಿಸಿಕೊಂಡಿದ್ದರಿಂದ ಬಸ್ ಓವರ್‌ಲೋಡ್ ಆಗಿತ್ತು. ಇದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಧ್ಯರಾತ್ರಿ ನಡೆದ ದುರಂತ; ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ಅಪಘಾತವು ತಡರಾತ್ರಿ ಸಂಭವಿಸಿದ್ದರಿಂದ ಕತ್ತಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಭದ್ರತಾ ಸಿಬ್ಬಂದಿಗೆ ಭಾರಿ ಸವಾಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ, ಕಂದರದಿಂದ ಶವಗಳನ್ನು ಹೊರತೆಗೆದಿದ್ದಾರೆ.

ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಮಾತನಾಡಿ, ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಾಧ್ಯವಾದಷ್ಟು ಜನರ ಪ್ರಾಣ ಉಳಿಸಲು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಘಟನೆಗೆ ಅತಿ ವೇಗ ಮತ್ತು ಕಳಪೆ ರಸ್ತೆಗಳೇ ಕಾರಣ?

ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬಸ್‌ನ ಅತಿ ವೇಗ ಅಥವಾ ಅಲ್ಲಿನ ಕಳಪೆ ರಸ್ತೆ ಪರಿಸ್ಥಿತಿಗಳು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬಲೂಚಿಸ್ತಾನದ ಪರ್ವತ ಪ್ರದೇಶದ ರಸ್ತೆಗಳು ಕಡಿದಾಗಿದ್ದು, ಅತ್ಯಂತ ಅಪಾಯಕಾರಿಯಾಗಿವೆ. ಹೀಗಾಗಿ ಈ ಮಾರ್ಗಗಳಲ್ಲಿ ಬಸ್ ಮತ್ತು ಟ್ರಕ್ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Read More
Next Story