
ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು: ರಾತ್ರಿ 9ಕ್ಕೆ ಅಂಗಡಿಗಳು ಬಂದ್, ಸರ್ಕಾರಿ ವಾಹನಗಳಿಗೆ ಶೇ.50 ಇಂಧನ ಕಡಿತ
ಇಂಧನ ಉಳಿಸುವ ಕ್ರಮದ ಭಾಗವಾಗಿ ವಾಣಿಜ್ಯ ಚಟುವಟಿಕೆಗಳಿಗೂ ಸಮಯದ ಮಿತಿ ನಿಗದಿಪಡಿಸಲಾಗಿದೆ. ಅಂಗಡಿಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಬಜಾರ್‌ಗಳು ಮತ್ತು ದಿನಸಿ ಅಂಗಡಿಗಳು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿರುವ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇಂಧನದ ಬೇಡಿಕೆ ಮತ್ತು ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಪಾಕಿಸ್ತಾನ ಸರ್ಕಾರ ಹಲವು ಕಠಿಣ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದೆ.
ಸೆಪ್ಟೆಂಬರ್ 17ರಿಂದಲೇ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ ಸರ್ಕಾರಿ ವಾಹನಗಳಿಗೆ ನೀಡಲಾಗುವ ಇಂಧನ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಹೊಸ ವಾಹನಗಳ ಖರೀದಿಗೂ ನಿರ್ಬಂಧ ಹೇರಲಾಗಿದ್ದು, ಸರ್ಕಾರಿ ಅಧಿಕಾರಿಗಳ ಅನಗತ್ಯ ವಿದೇಶ ಪ್ರವಾಸವನ್ನು ನಿಷೇಧಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಅಧಿಕಾರಿಗಳು ಆರ್ಥಿಕ ದರ್ಜೆಯ ಟಿಕೆಟ್‌ಗಳಲ್ಲಿ ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ.
ಸರ್ಕಾರ ಕೈಗೊಂಡಿರುವ ಈ ಮಿತವ್ಯಯ ಕ್ರಮಗಳು ಕನಿಷ್ಠ ಮೂರು ತಿಂಗಳ ಕಾಲ ಜಾರಿಯಲ್ಲಿರಲಿವೆ ಎಂದು ವರದಿಯಾಗಿದೆ. ವಿವಾಹ ಸಮಾರಂಭಗಳಲ್ಲೂ ವೆಚ್ಚ ಮತ್ತು ಆಹಾರದ ಬಳಕೆ ಕಡಿಮೆ ಮಾಡಲು ಕೇವಲ ಒಂದು ಬಗೆಯ ಖಾದ್ಯವನ್ನು ಮಾತ್ರ ಬಡಿಸುವಂತೆ ನಿಯಮ ರೂಪಿಸಲಾಗಿದೆ.
ರಾತ್ರಿ 9 ಗಂಟೆಗೆ ಅಂಗಡಿಗಳು ಬಂದ್
ಇಂಧನ ಉಳಿಸುವ ಕ್ರಮದ ಭಾಗವಾಗಿ ವಾಣಿಜ್ಯ ಚಟುವಟಿಕೆಗಳಿಗೂ ಸಮಯದ ಮಿತಿ ನಿಗದಿಪಡಿಸಲಾಗಿದೆ. ಅಂಗಡಿಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಬಜಾರ್‌ಗಳು ಮತ್ತು ದಿನಸಿ ಅಂಗಡಿಗಳು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಮದುವೆ ಮಂಟಪಗಳು, ಸಮಾರಂಭದ ಸ್ಥಳಗಳು ಹಾಗೂ ಹಬ್ಬದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಾಣಿಜ್ಯ ಕೇಂದ್ರಗಳು ರಾತ್ರಿ 10 ಗಂಟೆಯೊಳಗೆ ಮುಚ್ಚಬೇಕು. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಆಹಾರ ಮಳಿಗೆಗಳಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ‘ಡಾನ್’ ವರದಿ ಮಾಡಿದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ
ಆದರೆ ಆಸ್ಪತ್ರೆಗಳು, ಔಷಧಾಲಯಗಳು, ಚಿಕಿತ್ಸಾಲಯಗಳು, ವೈದ್ಯಕೀಯ ಪ್ರಯೋಗಾಲಯಗಳು, ಪೆಟ್ರೋಲ್ ಮತ್ತು ಸಿಎನ್‌ಜಿ ಕೇಂದ್ರಗಳು, ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಜಿಮ್‌ಗಳು, ಕ್ರೀಡಾ ಸೌಲಭ್ಯಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಕಾಲ್ ಸೆಂಟರ್‌ಗಳಿಗೂ ವಿನಾಯಿತಿ ಕಲ್ಪಿಸಲಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಇಂಧನ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗಿದೆ. ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 4.10 ಪಾಕಿಸ್ತಾನಿ ರೂಪಾಯಿ ಹಾಗೂ ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಲೀಟರ್‌ಗೆ 6.41 ಪಾಕಿಸ್ತಾನಿ ರೂಪಾಯಿ ಹೆಚ್ಚಿಸಿದೆ.
ಇದರೊಂದಿಗೆ ಪೆಟ್ರೋಲ್ ಬೆಲೆ ಲೀಟರ್‌ಗೆ 384.34 ಪಾಕಿಸ್ತಾನಿ ರೂಪಾಯಿಗೆ ಹಾಗೂ ಹೈಸ್ಪೀಡ್ ಡೀಸೆಲ್ ಬೆಲೆ 415.83 ಪಾಕಿಸ್ತಾನಿ ರೂಪಾಯಿಗೆ ತಲುಪಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಇಂಧನ ಕೊರತೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಇಂಧನ ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ನಿರ್ಬಂಧಗಳಿಂದ ದೇಶದ ವ್ಯಾಪಾರ, ಸಾರಿಗೆ ಹಾಗೂ ಸಾಮಾನ್ಯ ಜನರ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

