
ವಿದೇಶಿ ಮಹಿಳೆಯರ ಅಪಹರಣ, ಸಾಮೂಹಿಕ ಅತ್ಯಾಚಾರ; ಪಾಕಿಸ್ತಾನದ ಉಪಪ್ರಧಾನಿಯ ಸಂಬಂಧಿಕನ ಹೆಸರು ಪ್ರಸ್ತಾಪ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೆದರ್ಲ್ಯಾಂಡ್ಸ್ ಮತ್ತು ವೆನೆಜುವೆಲಾದ ಮಹಿಳೆಯರು 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ಕ್ರಿಪ್ರೊ ಕರೆನ್ಸಿ ವ್ಯವಹಾರಕ್ಕೆ ಬಂದಿದ್ದರು.
ಪಾಕಿಸ್ತಾನದಲ್ಲಿ ಇಬ್ಬರು ವಿದೇಶಿ ಮಹಿಳೆಯರ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಆರೋಪದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೋಟ್ಯಂತರ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ವಿವಾದವೂ ಪ್ರಕರಣದ ಹಿನ್ನೆಲೆಯಲ್ಲಿರಬಹುದೇ ಎಂಬ ಶಂಕೆಯಡಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಮೊಮ್ಮಗ ಎಂದು ಗುರುತಿಸಲಾದ ರಝಾ ದಾರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದಂತೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೆದರ್ಲ್ಯಾಂಡ್ಸ್ ಮತ್ತು ವೆನೆಜುವೆಲಾದ ಮಹಿಳೆಯರು 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ಕ್ರಿಪ್ಟೋಕರೆನ್ಸಿ ಯೋಜನೆಗೆ ಸಂಬಂಧಿಸಿದ ಕೆಲಸದ ವೇಳೆ ರಝಾ ದಾರ್ ಅವರನ್ನು ಪರಿಚಯಿಸಿಕೊಂಡಿದ್ದರು. ನಂತರ ವ್ಯವಹಾರಿಕ ಸಭೆಯ ನೆಪದಲ್ಲಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗಿತ್ತು. ಇಬ್ಬರೂ ಮಹಿಳೆಯರು ಜೂನ್ 29ರಂದು ಲಾಹೋರ್‌ಗೆ ಆಗಮಿಸಿದ ಕೆಲವೇ ಸಮಯದಲ್ಲಿ ಅಪಹರಣಕ್ಕೊಳಗಾಗಿದ್ದರು ಎಂದು ಆರೋಪಿಸಲಾಗಿದೆ.
ಕ್ರಿಪ್ಟೋ ಆಸ್ತಿಯ ಮಾಹಿತಿ ಕೇಳಿ ಬೆದರಿಕೆ
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ ಹೇಳಿಕೆಯಲ್ಲಿ ಸಂತ್ರಸ್ತೆಯರಲ್ಲಿ ಒಬ್ಬರಾದ ಅಸ್ಟ್ರಿಡ್ ಗ್ಯಾಬ್ರಿಯೆಲಾ ರಾಬಿನ್ಸನ್ ಬ್ರಾಚೋ, ಶಸ್ತ್ರಸಜ್ಜಿತ ವ್ಯಕ್ತಿಗಳು ತಾವು ತಂಗಿದ್ದ ನಿವಾಸಕ್ಕೆ ನುಗ್ಗಿ ತಮ್ಮನ್ನು ಬಂಧಿಸಿ, ಕ್ರಿಪ್ಟೋಕರೆನ್ಸಿ ಹೊಂದಿದ್ದ ಕಂಪ್ಯೂಟರ್ ಎಲ್ಲಿದೆ ಎಂದು ನಿರಂತರವಾಗಿ ಪ್ರಶ್ನಿಸಿದರು ಎಂದು ತಿಳಿಸಿದ್ದಾರೆ.
ಕಂಪ್ಯೂಟರ್‌ನ ಪಾಸ್‌ವರ್ಡ್ ಹಾಗೂ ಹಣದ ಮಾಹಿತಿಯನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ. ಕ್ರಿಪ್ಟೋ ಆಸ್ತಿಯ ಮೇಲಿನ ನಿಯಂತ್ರಣ ಪಡೆಯುವುದೇ ಆರೋಪಿಗಳ ಮುಖ್ಯ ಉದ್ದೇಶವಾಗಿತ್ತು ಎಂಬ ಅಂಶವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ತಮ್ಮನ್ನು ಮನೆಯ ಮೇಲಂತಸ್ತಿನ ಕೋಣೆಗೆ ಕರೆದೊಯ್ದು ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿದರೆ, ಮತ್ತೊಬ್ಬನು ಬಂದೂಕು ಹಿಡಿದು ಕಾವಲು ನಿಂತಿದ್ದ. ಅಳಲು ಆರಂಭಿಸಿದಾಗ ಹಲ್ಲೆ ನಡೆಸಿ ಮೌನವಾಗಿರಲು ಬೆದರಿಕೆ ಹಾಕಿದರು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿಗಳು ಮಹಿಳೆಯರ ಮೊಬೈಲ್ ಫೋನ್ ಬಳಸಿ ಅವರ ಪರಿಚಿತರಿಗೆ ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆರಂಭದಲ್ಲಿ ಹಣ ಸಿಗದಿದ್ದರೂ, ಬಳಿಕ ಮತ್ತೊಬ್ಬ ಮಹಿಳೆಯ ತಾಯಿ ಸುಮಾರು 1 ಲಕ್ಷ ಅಮೆರಿಕನ್ ಡಾಲರ್ (100,000 USD) ವ್ಯವಸ್ಥೆ ಮಾಡಿದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಹಣ ದೊರೆತ ಬಳಿಕ ಪಾಸ್‌ಪೋರ್ಟ್ ಹಿಂತಿರುಗಿಸಿ ವಿಮಾನ ನಿಲ್ದಾಣದ ಕಡೆಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯೆ ವಾಹನ ಅಪಘಾತಕ್ಕೀಡಾದಾಗ ಇಬ್ಬರೂ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯ ಕೋರಿದ್ದು, ನಂತರ ಸಂಚಾರ ಪೊಲೀಸರು ಅವರನ್ನು ರಕ್ಷಿಸಿದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಈ ಪ್ರಕರಣದಲ್ಲಿ ರಝಾ ದಾರ್, ಹಸನ್ ರಝಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳು ಹಾಗೂ ಹಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಬೇಕಿರುವುದರಿಂದ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 8ರಂದು ನಡೆಯಲಿದೆ.
ಸಂತ್ರಸ್ತೆಯರು ಪಾಕಿಸ್ತಾನ ತೊರೆದಿರುವ ಸಾಧ್ಯತೆ
ನ್ಯಾಯಾಂಗ ಮೂಲಗಳನ್ನು ಉಲ್ಲೇಖಿಸಿರುವ ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಇಬ್ಬರು ವಿದೇಶಿ ಮಹಿಳೆಯರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಿದ ಬಳಿಕ ಪಾಕಿಸ್ತಾನ ತೊರೆದಿರುವ ಸಾಧ್ಯತೆ ಇದೆ. ಅವರ ಹೇಳಿಕೆಗಳನ್ನು ನ್ಯಾಯಾಲಯ ಸೀಲ್ ಮಾಡಿ ಸಂರಕ್ಷಿಸಿದ್ದು, ತನಿಖಾ ತಂಡಕ್ಕೂ ಪ್ರತಿಯನ್ನು ನೀಡಲಾಗಿದೆ.

