
ಭಯೋತ್ಪಾದನೆ ವಿರುದ್ಧ ದ್ವಿಮುಖ ನೀತಿ ಸಲ್ಲದು: ಅಜಿತ್ ದೋವಲ್ ಖಡಕ್ ಎಚ್ಚರಿಕೆ..!
ಭಯೋತ್ಪಾದನೆಯನ್ನು ಪೋಷಿಸುವ ದೇಶಗಳ ಜೊತೆ ನಿಲ್ಲುತ್ತವೆಯೇ ಅಥವಾ ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತವೆಯೇ? ಎಂಬುದನ್ನು ನಿರ್ಧರಿಸಬೇಕು ಎಂದು ದೋವಲ್ ಕರೆ ನೀಡಿದರು.
ಜಾಗತಿಕ ಭದ್ರತೆಯು ಇಂದು ಹಿಂದೆಂದಿಗಿಂತಲೂ ಹೆಚ್ಚು ಜಟಿಲವಾಗಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆಯಂತಹ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಿಮುಖ ನೀತಿ ಇರಬಾರದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತಾ ವೇದಿಕೆಯಲ್ಲಿ ಕಠಿಣವಾಗಿ ಪ್ರತಿಪಾದಿಸಿದ್ದಾರೆ.
ಮಾಸ್ಕೋದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಭದ್ರತಾ ವೇದಿಕೆ ಹಾಗೂ ಭದ್ರತಾ ವಿಷಯಗಳ ಕುರಿತಾದ 14ನೇ ಉನ್ನತ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಜಿತ್ ದೋವಲ್, ಭಯೋತ್ಪಾದನೆಯು ಇಂದಿನ ಪ್ರಪಂಚದ ಅತಿದೊಡ್ಡ ಭದ್ರತಾ ಸವಾಲಾಗಿದೆ ಎಂದು ಎಚ್ಚರಿಸಿದರು. ಜವಾಬ್ದಾರಿಯುತ ರಾಷ್ಟ್ರಗಳು ಈಗ ತಮ್ಮ ಆಯ್ಕೆಗಳನ್ನು ಮರುಪರಿಶೀಲಿಸಿಕೊಳ್ಳುವ ಸಮಯ ಬಂದಿದೆ. ಅವು ಭಯೋತ್ಪಾದನೆಯನ್ನು ಪೋಷಿಸುವ ದೇಶಗಳ ಜೊತೆ ನಿಲ್ಲುತ್ತವೆಯೇ ಅಥವಾ ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತವೆಯೇ? ಎಂಬುದನ್ನು ನಿರ್ಧರಿಸಬೇಕು ಎಂದು ಕರೆ ನೀಡಿದರು. ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಯಾವುದೇ ರಾಜಿಯಾಗದ ನಿಲುವನ್ನು ಭಾರತ ತಳೆದಿದೆ ಎಂಬುದನ್ನು ಅವರ ಮಾತುಗಳು ಸ್ಪಷ್ಟಪಡಿಸಿದವು.
ವಿಶ್ವಸಂಸ್ಥೆ ಸೇರಿದಂತೆ ಹಳೆಯ ಸಂಸ್ಥೆಗಳ ಸುಧಾರಣೆಗೆ ಒತ್ತಾಯ
ಅಜಿತ್ ದೋವಲ್ ಅವರು ಸಭೆಯಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದರು. 1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ರಚನೆಯಾದ ಅಂತಾರಾಷ್ಟ್ರೀಯ ಸಂಸ್ಥೆಗಳು ಇಂದಿನ ವಾಸ್ತವಿಕ ಸವಾಲುಗಳನ್ನು ಎದುರಿಸಲು ಅಸಮರ್ಥವಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಹಳೆಯ ರಚನೆಗಳು ಮತ್ತು ಸಂಸ್ಥೆಗಳು ಇಂದಿನ ಬದಲಾದ ಜಾಗತಿಕ ಪರಿಸ್ಥಿತಿಗೆ ತಕ್ಕಂತೆ ಸುಧಾರಣೆಯಾಗಬೇಕು. ಅಭಿವೃದ್ಧಿಶೀಲ ದೇಶಗಳು ರಾಷ್ಟ್ರಗಳಿಗೆ ಈ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಮತ್ತು ಅವರ ದೃಷ್ಟಿಕೋನಗಳನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕು. ಇದು ಭಾರತವು ದೀರ್ಘಕಾಲದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ನಡೆಸುತ್ತಿರುವ ಹೋರಾಟದ ಪ್ರತಿಬಿಂಬವಾಗಿದೆ ಎಂದರು.
ಪಶ್ಚಿಮ ಏಷ್ಯಾ ಹಾಗೂ ವ್ಯಾಪಾರ ಮಾರ್ಗಗಳ ಭದ್ರತೆ
ಪಶ್ಚಿಮ ಏಷ್ಯಾದ ಪ್ರಸಕ್ತ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ ದೋವಲ್, ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದಂತಹ ಪ್ರಮುಖ ಜಲಮಾರ್ಗಗಳ ಮೂಲಕ ನಡೆಯುವ ಅಂತಾರಾಷ್ಟ್ರೀಯ ವ್ಯಾಪಾರವು ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿನ ಸಂಘರ್ಷಗಳು ಜಾಗತಿಕ ಪೂರೈಕೆ ಸರಪಳಿ ಮತ್ತು ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಭಾರತ-ರಷ್ಯಾ ದ್ವಿಪಕ್ಷೀಯ ಮಾತುಕತೆ
ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಈ ಸಭೆಯು ಭಾರತ ಮತ್ತು ರಷ್ಯಾದ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಆಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ತಾಂತ್ರಿಕ ವಿನಿಮಯ, ಭಯೋತ್ಪಾದನೆ ಮತ್ತು ಸೈಬರ್ ಭದ್ರತೆಯ ಸವಾಲುಗಳನ್ನು ಜಂಟಿಯಾಗಿ ಎದುರಿಸುವುದು, ತೈಲ ಮತ್ತು ಅನಿಲ ಪೂರೈಕೆ ಹಾಗೂ ಇಂಧನ ಭದ್ರತೆಯ ವಿಷಯದಲ್ಲಿ ಪರಸ್ಪರ ಸಹಕಾರ ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು ಹೆಚ್ಚಿಸಲು ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಲಾಯಿತು.

