G20 ಸಭೆ| ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಜೊತೆ ನಿರ್ಮಲಾ ಸೀತಾರಾಮನ್ ಮಹತ್ವದ ಮಾತುಕತೆ
x

ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಜೊತೆ ನಿರ್ಮಲಾ ಸೀತಾರಾಮನ್ ಮಹತ್ವದ ಚರ್ಚೆ

G20 ಸಭೆ| ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಜೊತೆ ನಿರ್ಮಲಾ ಸೀತಾರಾಮನ್ ಮಹತ್ವದ ಮಾತುಕತೆ

G20 ಸಭೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅಜಯ್ ಬಂಗಾ ಹಾಗೂ EU ಆಯುಕ್ತ ಡೊಂಬ್ರೋವ್ಸ್ಕಿಸ್ ಜೊತೆ ಆರ್ಥಿಕ ಸಹಭಾಗಿತ್ವ, ಹೂಡಿಕೆ, AI, ವ್ಯಾಪಾರ ಕುರಿತು ಚರ್ಚಿಸಿದರು.


Click the Play button to hear this message in audio format

ಅಮೆರಿಕದ ಆಶ್‌ವಿಲ್‌ನಲ್ಲಿ ನಡೆಯುತ್ತಿರುವ G20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶ್ವ ಬ್ಯಾಂಕ್‌ ಅಧ್ಯಕ್ಷ ಅಜಯ್ ಬಂಗಾ ಹಾಗೂ ಯುರೋಪಿಯನ್ ಕಮಿಷನ್‌ನ ಆರ್ಥಿಕ ಮತ್ತು ಹಣಕಾಸು ವ್ಯವಹಾರಗಳ ಆಯುಕ್ತ ವಾಲ್ಡಿಸ್ ಡೊಂಬ್ರೋವ್ಸ್ಕಿಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಅಜಯ್ ಬಂಗಾ ಅವರೊಂದಿಗಿನ ಸಭೆಯಲ್ಲಿ ಭಾರತ ಮತ್ತು ವಿಶ್ವ ಬ್ಯಾಂಕ್‌ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಿತು. ಅದೇ ವೇಳೆ, ಎಸ್‌ಐಡಿಬಿಐ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಅಂತರರಾಷ್ಟ್ರೀಯ ಹಣಕಾಸು ನಿಗಮ (IFC) ನೀಡುತ್ತಿರುವ ಬೆಂಬಲಕ್ಕೂ ಅವರು ಧನ್ಯವಾದ ತಿಳಿಸಿದರು. ಈ ನೆರವು ದಾಖಲೆಯ ವೇಗದಲ್ಲಿ ಪ್ರಕ್ರಿಯೆಗೊಂಡಿದ್ದು,ಎಸ್‌ಐಡಿಬಿಐ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿ ಆಗಿರುವ ಮಹತ್ವದ ಪರಿವರ್ತನೆಯನ್ನು ಅಜಯ್ ಬಂಗಾ ಶ್ಲಾಘಿಸಿದರು. ಭಾರತದ ಅಭಿವೃದ್ಧಿ ಗುರಿಗಳಿಗೆ ವಿಶ್ವ ಬ್ಯಾಂಕ್‌ ಸಮೂಹದ ವಿವಿಧ ಹಣಕಾಸು ಸಾಧನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶಗಳ ಕುರಿತು ಅವರು ಅಭಿಪ್ರಾಯ ಹಂಚಿಕೊಂಡರು.

ಡಿಜಿಟಲ್ ಮೂಲಸೌಕರ್ಯ, ಪ್ರವಾಸೋದ್ಯಮಕ್ಕೂ ಆದ್ಯತೆ

ಭಾರತದಲ್ಲಿ ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಜ್ಞಾನ ಕೇಂದ್ರ ಸ್ಥಾಪಿಸುವ ಕುರಿತು ವಿಶ್ವ ಬ್ಯಾಂಕ್‌ ಸಮೂಹದೊಂದಿಗೆ ನಡೆಯುತ್ತಿರುವ ಸಹಕಾರದ ಬಗ್ಗೆಯೂ ಸೀತಾರಾಮನ್ ಪ್ರಸ್ತಾಪಿಸಿದರು. ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಿತು.

ಹೊಸ ಭಾರತ-ವಿಶ್ವ ಬ್ಯಾಂಕ್ ಸಮೂಹ ದೇಶ ಪಾಲುದಾರಿಕೆ ಚೌಕಟ್ಟು ಅಡಿಯಲ್ಲಿ ಜಾಗತಿಕ ಮಟ್ಟದ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಕುರಿತು ಕೂಡ ಮಾತುಕತೆ ನಡೆಯಿತು. ವಿಶ್ವ ಬ್ಯಾಂಕ್‌ನ ನೀತಿ ಮತ್ತು ಮೂಲಸೌಕರ್ಯ ನೆರವು, ಐಎಫ್‌ಸಿ ಹೂಡಿಕೆ ಹಾಗೂ ಎಮ್‌ಐಜಿಎ ಗ್ಯಾರಂಟಿಗಳನ್ನು ಸಮನ್ವಯಗೊಳಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು.

ಭಾರತ ಮತ್ತು ವಿಶ್ವ ಬ್ಯಾಂಕ್‌ ನಡುವಿನ ಸಂಬಂಧವನ್ನು ಸಾಂಪ್ರದಾಯಿಕ ಸಾಲದಾತ-ಸಾಲಗಾರ ಸಂಬಂಧದಿಂದ ಜಾಗತಿಕ ಜ್ಞಾನ, ನವೋದ್ಯಮ ಮತ್ತು ಖಾಸಗಿ ಬಂಡವಾಳ ಕ್ರೋಢೀಕರಣದ ಕಾರ್ಯತಂತ್ರದ ಸಹಭಾಗಿತ್ವವಾಗಿ ರೂಪಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು.

ಭಾರತ-EU ಆರ್ಥಿಕ ಸಹಭಾಗಿತ್ವ ಬಲಪಡಿಸುವ ಬಗ್ಗೆ ಚರ್ಚೆ

ನಿರ್ಮಲಾ ಸೀತಾರಾಮನ್ ಅವರು ಯುರೋಪಿಯನ್ ಕಮಿಷನ್‌ನ ಆರ್ಥಿಕ ಮತ್ತು ಹಣಕಾಸು ವ್ಯವಹಾರಗಳ ಆಯುಕ್ತ ವಾಲ್ಡಿಸ್ ಡೊಂಬ್ರೋವ್ಸ್ಕಿಸ್ ಅವರನ್ನೂ ಭೇಟಿ ಮಾಡಿದರು. ಭಾರತ-EU ಆರ್ಥಿಕ ಮತ್ತು ಹಣಕಾಸು ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತ-ಇಯು ಮ್ಯಾಕ್ರೋ ಎಕನಾಮಿಕ್ ಡೈಲಾಗ್ ಮತ್ತು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ (TTC) ಮೂಲಕ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಮಾತುಕತೆ ನಡೆಯಿತು. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ (FTA) ಮತ್ತುಹೂಡಿಕೆ ರಕ್ಷಣಾ ಒಪ್ಪಂದ ಕುರಿತ ಮಾತುಕತೆಗಳನ್ನು ಮುಂದುವರಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

ಕ್ರಿಟಿಕಲ್ ಮಿನರಲ್ಸ್, ಎಐ ಮತ್ತು ಫಿನ್‌ಟೆಕ್ ಗೆ ಒತ್ತು

ಸ್ಥಿರ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು, ಕ್ರಿಟಿಕಲ್ ರಾ ಮೆಟೀರಿಯಲ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವ ಕುರಿತು ಸೀತಾರಾಮನ್ ಮತ್ತು ಡೊಂಬ್ರೋವ್ಸ್ಕಿಸ್ ಚರ್ಚಿಸಿದರು. ಕ್ರಿಟಿಕಲ್ ಮಿನರಲ್ಸ್‌ ಅನ್ನು ಕೇವಲ ಆಮದು ಮಾಡಿಕೊಳ್ಳುವುದಕ್ಕೆ ಸೀಮಿತವಾಗದೆ, ಅವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸಾಮರ್ಥ್ಯವನ್ನು ದೇಶದಲ್ಲೇ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸೀತಾರಾಮನ್ ಒತ್ತಿ ಹೇಳಿದರು.

ಇದರ ಜೊತೆಗೆ ಫಿನ್‌ಟೆಕ್, ಎಐ ಮತ್ತು ಉತ್ಪಾದಕ ಎಐ(Generative AI) ಕ್ಷೇತ್ರಗಳಲ್ಲಿ ಭಾರತ ಮತ್ತು ಯುರೋಪ್‌ ನಡುವಿನ ಸಹಕಾರ ಹೆಚ್ಚಿಸುವುದು ಹಾಗೂ ಎರಡೂ ಪ್ರದೇಶಗಳ ಸ್ಟಾರ್ಟ್‌ಅಪ್‌ಗಳ ನಡುವೆ ಹೆಚ್ಚಿನ ಸಂಪರ್ಕ ಬೆಳೆಸುವ ಅವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು. ಅಮೆರಿಕ ಈ ವರ್ಷದ ಜಿ20 ಸಭೆಗಳನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ನಡೆದ ಈ ಮಹತ್ವದ ದ್ವಿಪಕ್ಷೀಯ ಸಭೆಗಳು ಭಾರತದ ಜಾಗತಿಕ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿವೆ.

Read More
Next Story