
ನ್ಯೂಯಾರ್ಕ್‌ನಲ್ಲಿ ಇಬ್ಬರಿಗೆ ಚಾಕು ಇರಿದ ಮಹಿಳೆ- ಕೊನೆಗೆ ಪೊಲೀಸರ ಗುಂಡೇಟಿಗೆ ಬಲಿ
ಮಹಿಳೆ ಶಾಪಿಂಗ್ ಬ್ಯಾಗ್‌ನಿಂದ ಎರಡು ದೊಡ್ಡ ಚಾಕುಗಳನ್ನು ಹೊರತೆಗೆದಿದ್ದಾಳೆ. ರಸ್ತೆ ದಾಟಲು ಪತ್ನಿಯೊಂದಿಗೆ ಕಾಯುತ್ತಿದ್ದ 68 ವರ್ಷದ ವ್ಯಕ್ತಿಯ ಹೊಟ್ಟೆಗೆ ಮೊದಲು ಚಾಕುವಿನಿಂದ ಇರಿದಿದ್ದಾಳೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ 32 ವರ್ಷದ ಮಹಿಳೆಗೂ ಇರಿದಿದ್ದಾಳೆ.
ಅಮೆರಿಕದ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಲವು ಚಾಕುಗಳನ್ನು ಹೊಂದಿದ್ದ ಮಹಿಳೆಯೊಬ್ಬರು ಸೋಮವಾರ ಇಬ್ಬರಿಗೆ ಚಾಕುವಿನಿಂದ ಇರಿದಿದ್ದು, ಬಳಿಕ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ಗಾಯಗೊಂಡ 32 ವರ್ಷದ ಮಹಿಳೆಯೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಬ್ಬ 68 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸ್ಥಿರ ಸ್ಥಿತಿಯಲ್ಲಿದ್ದಾರೆ.
ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಸುದ್ದಿಗೋಷ್ಠಿಯಲ್ಲಿ ಘಟನೆ ಕುರಿತು ಮಾಹಿತಿ ನೀಡಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರಲ್ಲಿ ಒಬ್ಬರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮತ್ತೊಬ್ಬ ಸಂತ್ರಸ್ತರು ಆಸ್ಪತ್ರೆಯಲ್ಲಿ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಶಾಪಿಂಗ್ ಬ್ಯಾಗ್‌ನಲ್ಲಿತ್ತು ಎರಡು ದೊಡ್ಡ ಚಾಕು
ಸುದ್ದಿಸಂಸ್ಥೆ ಎಪಿ ವರದಿ ಪ್ರಕಾರ, ಮಹಿಳೆ ಶಾಪಿಂಗ್ ಬ್ಯಾಗ್‌ನಿಂದ ಎರಡು ದೊಡ್ಡ ಚಾಕುಗಳನ್ನು ಹೊರತೆಗೆದಿದ್ದಾಳೆ. ರಸ್ತೆ ದಾಟಲು ಪತ್ನಿಯೊಂದಿಗೆ ಕಾಯುತ್ತಿದ್ದ 68 ವರ್ಷದ ವ್ಯಕ್ತಿಯ ಹೊಟ್ಟೆಗೆ ಮೊದಲು ಚಾಕುವಿನಿಂದ ಇರಿದಿದ್ದಾಳೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ 32 ವರ್ಷದ ಮಹಿಳೆಯ ಹೊಟ್ಟೆಗೂ ಇರಿದಿದ್ದಾಳೆ.
ಗಾಯಗೊಂಡ ಇಬ್ಬರನ್ನೂ ಕೂಡಲೇ ಬೆಲ್ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 32 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 68 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸ್ಥಿರ ಸ್ಥಿತಿಯಲ್ಲಿದ್ದಾರೆ.
ಚಾಕು ಕೆಳಗಿಡುವಂತೆ ಪೊಲೀಸರ ಮನವಿ
ಘಟನಾ ಸ್ಥಳದಲ್ಲಿದ್ದ ಕನಿಷ್ಠ 10 ಮಂದಿ ಪೊಲೀಸ್ ಅಧಿಕಾರಿಗಳು ಮಹಿಳೆಯನ್ನು ಸುತ್ತುವರಿದಿದ್ದರು. ಆಕೆಯ ಕೈಯಲ್ಲಿ ಎರಡು ದೊಡ್ಡ ಅಡುಗೆಮನೆ ಚಾಕುಗಳಿದ್ದವು. ಚಾಕುಗಳನ್ನು ಕೆಳಗಿಡುವಂತೆ ಪೊಲೀಸರು ಹಲವು ನಿಮಿಷಗಳ ಕಾಲ ಮನವಿ ಮಾಡಿದ್ದರು.
ಆದರೆ ಮಹಿಳೆ ಪೊಲೀಸರ ಮಾತನ್ನು ಕೇಳದೆ, “ನಾನು ಯಾವುದನ್ನೂ ಕೆಳಗಿಡುವುದಿಲ್ಲ. ನಿಮ್ಮಿಬ್ಬರನ್ನೂ ಕೊಲ್ಲುವುದೇ ನನಗೆ ಇಷ್ಟ” ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಪೊಲೀಸ್ ಇಲಾಖೆ ಆಯುಕ್ತೆ ಜೆಸಿಕಾ ಟಿಶ್ ತಿಳಿಸಿದ್ದಾರೆ.
ಬಳಿಕ ಪೊಲೀಸರು ಆಕೆಯನ್ನು ನಿಯಂತ್ರಿಸಲು ಟೇಸರ್ ಬಳಸಿದ್ದಾರೆ. ಆದರೆ ಅದರಿಂದಲೂ ಮಹಿಳೆ ಹಿಂದೆ ಸರಿಯದೆ, ಚಾಕುಗಳನ್ನು ಹಿಡಿದು ಪೊಲೀಸರತ್ತ ವೇಗವಾಗಿ ಮುನ್ನುಗ್ಗಿದ್ದಾಳೆ ಎನ್ನಲಾಗಿದೆ.
ಪೊಲೀಸರಿಂದ ಗುಂಡಿನ ದಾಳಿ
ಮಹಿಳೆ ಪೊಲೀಸರತ್ತ ಚಾಕು ಹಿಡಿದು ಮುನ್ನುಗ್ಗಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಮಹಿಳೆ ನೆಲಕ್ಕೆ ಬಿದ್ದ ಬಳಿಕ ಪೊಲೀಸರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ತನಿಖೆ ಇನ್ನೂ ಮುಂದುವರಿದಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

